ಡಿವಿಜಿ

ಕಗ್ಗದ ಸಗ್ಗ-15

ಹಳೆಯ ಭಕ್ತಿಶ್ರದ್ಧೆಯಳಿಸಿ ಹೋಗಿವೆ ಮಾಸಿ
ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ
ತಳಮಳಿಸುತ್ತಿದೆ ಲೋಕ-ಮಂಕುತಿಮ್ಮ.

ಡಿವಿಜಿ

ಹಿಂದಿನ ಕಾಲದಲ್ಲಿ ಇದ್ದಂತಹ ಶ್ರದ್ಧೆ, ಭಕ್ತಿಗಳನ್ನು ನಾವು ಈಗ ಕಾಣುತ್ತಿಲ್ಲ. ಕಾಲ ಬದಲಾಗುತ್ತಿದ್ದರೂ, ಹಳೆಯ ನಂಬಿಕೆಗಳು ಅವುಗಳ ಬಲಗಳನ್ನು ಕಳೆದುಕೊಳ್ಳುತ್ತಿದ್ದರೂ, ಹೊಸ ನಂಬಿಕೆಗಳೇನೂ ಹುಟ್ಟುತ್ತಿಲ್ಲ. ಇದರ ಪರಿಣಾಮ, ಬಹುಕಾಲ ಓಡಾಡಿಕೊಂಡು ಅಭ್ಯಾಸವಾಗಿದ್ದ ಮನೆಯಲ್ಲಿ ಇರುವ ಕುಂಟ ಅಥವಾ ಕುರುಡನಿಗೆ, ಆ ಮನೆ ಬಿದ್ದು ಹೋದರೆ, ಓಡಾಡುವುದು ಕಷ್ಟವಾಗುವಂತೆ, ಜನಗಳಿಗೆ ಹಳೆಯ ನಂಬಿಕೆಗಳು ಹೋಗಿ, ಹೊಸವಾವುದು ಇಲ್ಲದಿರುವುದರಿಂದ, ಪ್ರಪಂಚ ಒಂದು ವಿಧವಾದ ಚಿಂತೆ ಮತ್ತು ಗಾಬರಿಗಳಿಗೆ ಸಿಕ್ಕಿಹಾಕಿಕೊಂಡಿದೆ.

ಎಮ್ಮಾರ್ಕೆ

ದಿನದ ಹನಿ : ರೋ(ಬೀ)ಗ

ಅಪ್ಪಿ ತಪ್ಪಿ
ಬಂದರೆ
ಸಕ್ಕರೆ ರೋಗ,
ಹೆಚ್ಚು ಕಮ್ಮಿ
ಹಾಕಿದಂತೆ
ಬಾಯಿಗೆ ಬೀಗ.

ಎಮ್ಮಾರ್ಕೆ

ಎಮ್ಮಾರ್ಕೆ

ದಿನದ ಹನಿ : Now-ಕರ

ನಾನಿದ್ದರೂ ಕೈ ತುಂಬ
ಸಂಬಳ ಎಣಿಸುವ
ಸರ್ಕಾರಿ ನೌಕರ,
ಕೈ ತುಂಬಿ ಹೆಚ್ಚಾದರೆ
ತುಂಬಲೇಬೇಕು
ನಾನೂ Now-ಕರ.

ಎಮ್ಮಾರ್ಕೆ

ಮತವಚನ-9

ಮಾಡಿಕೊಳ್ಳದಿರಿ
ಹಣ,ಹೆಂಡ,ಇತ್ಯಾದಿ
ಆಸೆಗೆ ಬಿದ್ದು ಮತ
ನೀಡುವ ಸಂಧಾನ,
ಅರಿತುಕೊಳ್ಳಿರಿ
ಜನರ ಉದ್ಧಾರಕ್ಕೆ
ಮತದಾನದ ಹಕ್ಕು
ನೀಡಿದೆ ಸಂವಿಧಾನ,
ಜನಹಿತದ ಸದುದ್ದೇಶ
ಹೊತ್ತು ವೋಟ್ಹೊತ್ತು
ಮತದಾರ ಬಾಂಧವ.

ಎಮ್ಮಾರ್ಕೆ

ದಿನದ ಹನಿ : ದಗೆ-ಬಗೆ

ಸುತ್ತ ಮುತ್ತಲೂ
ಹೆಚ್ಚಾಗುತಲಿದೆ
ಸುಡುಬಿಸಿಲ ದಗೆ,
ಎಲ್ಲ ಕಡೆಯಲೂ
ಕಿತ್ತು ಬರುತಿದೆ
ಬೆವರು ಬಗೆ ಬಗೆ.

ಎಮ್ಮಾರ್ಕೆ

ಖರೇನ-84

ಖರೆ ಹೇಳಾವ್ರಿಗಿಲ್ಲೋ ಕಾಲ
ನೆಟ್ಟಗಿಲ್ಲೋ ನಾಯಿ ಬಾಲ,
ಮಾಡಿದ್ದೆಲ್ಲ ಮಾಲಕ ಕುಂತ
ನೋಡಾಕ ಹತ್ತ್ಯಾನ ಮ್ಯಾಲ,
ನೀರಿಗಿ ನೀರ, ಹಾಲಿಗಿ ಹಾಲ
ಸುಳ್ಳಿಗೆಂದು ತಪ್ಪಿಲ್ಲ ಸೋಲ

ಎಮ್ಮಾರ್ಕೆ

ಅಂತೂ ಇಂತೂ….

ಅಂತೂ ಇಂತೂ
ಆಯ್ತು ಪ್ರೀತಿ
ಇಷ್ಟಾರ್ಥ ಸಿದ್ಧಿ
ಈ ಕ್ಷಣದಲಿ,
ಉಲಿದ ಮಾತು
ಊಹೆ ಮೀರಿ
ಋಣಾನುಬಂಧ
ಎನಿತು ಚಂದವು,
ಏಕಾಂತವೊಂದೇ
ಐಸಿರಿಯು
ಒಟ್ಟು ಬಾಳಿನ
ಓಜಸ್ಸದು,
ಔತ್ಸುಕ್ಯ ಹೆಚ್ಚಿದೆ
ಅಂತರಂಗದ
ಅಂತಃಪುರದಲಿ.

ಎಮ್ಮಾರ್ಕೆ

ಪೀರುತಿಗೆ ಮುಪ್ಪಿಲ್ಲ…

ಯಾಕೋ ನಮ್ಮಾಕಿ ಮುನಿಸ್ಕಂಡು
ಮಾರಿ ಅಕಡಿ ತಿರವಿದಾಳ ಖರೇ,
ಒಳಗಿಂದೊಳಗ ನಂಗ ತಿಳದ್ಹಾಂಗ
ಚಿತ್ತೆಲ್ಲ ನನ್ನ ಮ್ಯಾಲ ನೆಟ್ಟಾಳ,
ಯಾಕಂದ್ರ ನಿನ್ನೆ ಇಂದಿನದಲ್ಲ
ನನ್ನ ಅವಳ ಬೆಸುಗೆಯ ನಂಟು,
ಅದು ಆ ಬ್ರಹ್ಮ ಹಾಕಿದ ಗಂಟು.

ವಡಪಿಲ್ದ ಒಮ್ಮ್ಯಾದ್ರೂ ನನ್ನ ಹೆಸರ
ಹೇಳಿದಾಕ್ಯಲ್ಲ ಈ ಗೌಡಶ್ಯಾನಿ,
ಸಾಲಿ ಹಿಂದ ಮುಂದ ಹಾದಾಕ್ಯಲ್ಲ
ತಲಿ ಮ್ಯಾಲಿನ ಸೆರಗಿಗೂ ತಲಿಗೂ
ಅದೆನೋ ಸೆಳೆತ ಜಾರಿದ್ದೇ ಇಲ್ಲ,
ಈ ಸಲ ಅಂತೂ ಕಬ್ಬೆಲ್ಲ ಕಳಸೇನಿ
ಬಿಲ್ ಬಂದಮ್ಯಾಲ ಬಿಲ್ವರ,ಪಾಟ್ಲಿ
ಮಾಡಿಸಿ ನಾನ ತೊಡಸತೀನ,
ನನ್ನ ಕಡಿ ನೋಡ ಒಂದ ಚೂರ
ಸಿಟ್ಟ ಸೆಡವು ಮಾಡ್ಕಂಡ ದೂರ.

ಎಮ್ಮಾರ್ಕೆ

*ತಿರುವಿ ಹಾಕಿದ ಪುಟದಿಂದ….*

ಒಲವ ಒಪ್ಪಿಗೆಗೆ ಕಾದಿದ್ದು
ಹಲವು ವರುಷ,
ಒಪ್ಪಿದ ಗಳಿಗೆ ಮುಗಿಲನು
ಮುಟ್ಟಿದ ಹರುಷ,
ಅಂದಿನಿಂದ ಇಂದಿನತನಕ
ದೂರ ದೂರವಿದ್ದರೂ,
ಆ ಹರುಷದ ಹಬ್ಬ ಪ್ರತಿ
ವರ್ಷವೂ ನಡೆಯುತಲಿದೆ,
ಹೊಸತೊಂದು ರೂಪವ
ತಂತಾನೇ ಪಡೆಯುತಲಿದೆ,
ಪ್ರತಿ ದೀಪಾವಳಿಗೂ ತಪ್ಪಿಲ್ಲ
ಜೋಡುದೀಪದ ಬೆಳಗು,
ಆ ಬೆಳಕಿನಡಿಯಲಿ ಅಡಿ
ಇಡುವೆ ಕೊನೆವರೆಗೂ,
ಆದರೂ ದೀಪಗಳ ಕೆಳಗೆ
ಕತ್ತಲೇಕೆ ಆವರಿಸಿತು?,
ಇರಲಿ ಬಿಡು! ಎಂದೆನ್ನ
ತಲೆಯ ನೇವರಿಸಿತು,
ಅವಳೇ ಬಾಳ ಬೆಳಕು
ಬೆಳಕಿಗೊಂದು ಬಾಳು.

ಎಮ್ಮಾರ್ಕೆ

ಖರೇನ-83

ನಿನ್ನ ಚರ್ಮ ಆಗೇತಿ ದಪ್ಪ
ಮಾಡ್ತಿ ತಪ್ಪಿನ ಮ್ಯಾಲ ತಪ್ಪ,
ಹತ್ತಿದ ಬೆಂಕಿಗಿ ತಂದು ನೀ
ಸುರಿತಿಯಲ್ಲೋ ತುಪ್ಪ,
ನೀರು ಕುಡಿಲಾಕ ಬೇಕೋ
ನೀ ತಿಂದ ಮ್ಯಾಲ ಉಪ್ಪ.

ಪ್ರೇಮ_ಬರಹ

ಪ್ರೀತಿ ಎಂದರೆ….

ಪ್ರೀತಿ ಎಂದರಲ್ಲ ಎರಡು ಪದ
ಕದಗಳೆರಡಕ್ಕೆ ಚಿಲಕವೊಂದೇ,
ಬಡಿದರೂ ಎರಡೆದೆಗಳ ಕದ
ಪ್ರೀತಿ ಎಂದರೆ ಬಡಿತವೊಂದೇ.

ಅತ್ಯಮೂಲ್ಯ ಬರಹಗಳನ್ನು ಓದಲು ವಿಶ್ವಜ್ಞಾನ ದರ್ಶನ ವೆಬ್ಸೈಟ್ ಅನ್ನು ಹಿಂಬಾಲಿಸಿರಿ. ಸರ್ವರಿಗೂ ಶುಭವಾಗಲಿ…… ಜ್ಞಾನಾರ್ಜನೆಯಾಗಲಿ……