ಜೀವನದ ಸಾರಾಂಶ
ಎಲ್ಲವೂ ಇಲ್ಲಿಯೇ ಇದೆ ನೋಡಬೇಕು ಕಂಗಳ ತೆರೆದು ,
ಎಡರು_ತೊಡರುಗಳಿದ್ದರೂ ಸ್ವೀಕರಿಸಿ ಪ್ರಸಾದವೆಂದು ;
ಸುಖ_ದುಃಖ ಮನಸ್ಸಿನ ಭ್ರಮೆ, ವಿಶ್ವದೆಲ್ಲೆಡೆಯೂ ಸಂಚರಿಸು;
ಸಂಬಂಧಗಳ ಸರಿಗಮದಲ್ಲಿ ಮನಸಾರೆ ಕುಣಿದು ಕುಪ್ಪಳಿಸು!
ತಿರುಗುವ ಭೂಮಿಯಲ್ಲಿ ಬದಲಾವಣೆಗಳು ಅನಿವಾರ್ಯ,
ಕರಗುವ ಆಯಸ್ಸು ,ಬದಲಾಗದಿರಲಿ ಈ ಮನದ ಮಾರ್ಗ;
ಯಾತ್ರೆ ಮುಗಿಸಿ ಹೋಗುವ ಮುನ್ನ ಪರಮಾತ್ಮನ ಸಂಪರ್ಕ
ಸಾಧಿಸಿದಾಗಲೇ ಜೀವ ಇಲ್ಲಿಗೆ ಬಂದ ಕಾರ್ಯ ಸಂಪೂರ್ಣ:
ಈ ದಿನದ ಮಹತ್ವ
ನೀರು ಉಳಿಸಿ_ನೀರು ಉಳಿಸಿ_ನೀರು ಉಳಿಸಿ,
ಮೋಡ ಸುರಿಸುವ ಕಣ್ಣೀರು ಧರೆಯೊಳಗಿಳಿಸಿ;
ಕೆರೆ_ಕಟ್ಟೆ ಕಲ್ಯಾಣಿಗಳ ಹೂಳೆತ್ತಿ ಕಶ್ಮಲವ ಸ್ವಚ್ಛಗೊಳಿಸಿ
ನದಿ_ಕಾಲುವೆಗಳು ಕಲುಷಿತವಾಗದಂತೆ ಎಚ್ಚರ ವಹಿಸಿ ;
ಅವಶ್ಯಕತೆ ಮೀರಿದ ಆಡಂಬರಕ್ಕೆ ಹಿಗ್ಗಾಮುಗ್ಗಾ ಬಳಸಿ
ಹಾಳು ಮಾಡಬೇಡಿ ಪರಿಸರವನ್ನು ತುಸು ನೀರು ಉಳಿಸಿ !
ಬದಲಾದ ಬಾಲ್ಯ
ರಜೆ ಬಿತ್ತು ಓದಿಗೆ ವಾರ್ಷಿಕ ಪರೀಕ್ಷೆ ಮುಗಿಯಲು,
ಅಜ್ಜಿ ಮನೆಗೆ ಹೊರಟಿಹರು ಖುಷಿಯಿಂದ ಮಕ್ಕಳು;
ಇರಲಿಲ್ಲ ಹಿಂದೆ ಮನೆಯೊಳಗೆ ಒಂದೂ ಟಿವಿ ಮೊಬೈಲು,
ಎಷ್ಟೊಂದು ಆಟಗಳು ಇತ್ತು ಮನೆಯ ಹೊರಗೆ ಆಡಲು!
ಇಂದು ಬದಲಾಗಿದೆ ಜೀವನ ಶೈಲಿ ತಂತ್ರಜ್ಞಾನ ಬೆಳೆಯಲು,
ಒಂದೇ ಕೋಣೆಯಲ್ಲಿ ಬಂಧಿತ ಹಾಲಿನಂತಹ ಮನಸ್ಸುಗಳು;
ಸಂಬಂಧಗಳ ಸರಪಳಿ ತಿಳಿಯದೇ ಸಮ್ಮರ್ ಕ್ಯಾಂಪ್ ನೊಳು
ಕಾಲ ಕಳೆದು ಖುಷಿ ಹುಡುಕಿದರೆ ಚಿವುಟಿದಂತಲ್ಲವೇ ಚಿಗುರು?
✍️ ನಾಗರಾಜ ಗುನಗ
ಕೋಡಕಣಿ/ಕುಮಟಾ ತಾಲ್ಲೂಕು