ಹುಳಿನೀರೆರೆದವರಾರಯ್ಯ

ಸೃಷ್ಟಿಕರ್ತನ ಸೃಷ್ಟಿಯೇ ವಿಚಿತ್ರವಾದುದು. ಆತನ ಸೃಷ್ಟಿಯಲ್ಲಿ
ಅಸಾಧ್ಯವಾದುದು ಯಾವುದೂ ಇಲ್ಲ. ಹಾಗೂ ಸೃಷ್ಟಿಯ ವಿಸ್ಮಯಗಳನ್ನು ಅರಿಯಲೂ ಸಾಧ್ಯವಿಲ್ಲ. ವರ್ಣರಂಜಿತ ಪ್ರಪಂಚದಲ್ಲಿ ಉತ್ಕೃಷ್ಟ ಮಟ್ಟದ ಲೀಲೆಗಳು ನಡೆಯುತ್ತಿರುತ್ತವೆ. ಪ್ರಕೃತಿ ಮಾತೆಯ ಮಡಿಲಲ್ಲಿ ಹಲವಾರು ವಿಶೇಷತೆಗಳನ್ನು ಕಾಣುತ್ತೇವೆ.

12 ನೇ ಶತಮಾನದ ವಚನಕಾರರಾದ ಅಕ್ಕಮಹಾದೇವಿ ಸೃಷ್ಟಿಯ ಜೀವ ಸಂಕುಲಗಳ ಬಾಹ್ಯ ಹಾಗೂ ಆಂತರಿಕ ಭಾವನೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಅವರ ಈ ವಚನ ಜ್ಞಾನ ವಿಜ್ಞಾನಕ್ಕೂ ನಿಲುಕದ ಸೃಷ್ಟಿಯ ರಹಸ್ಯವನ್ನು ಕಾವ್ಯಾತ್ಮಕವಾಗಿ ವಿವರಿಸುವ ಪ್ರಯತ್ನವಾಗಿದೆ.

ಈಳೆ ನಿಂಬೆ ಮಾವು ಮಾದಲಕೆ ಹುಳಿನೀರನೆರೆದವರಾರಯ್ಯಾ?
ಭಗವಂತನ ಶಕ್ತಿ ಅಪಾರವಾದದ್ದು
ಕಿತ್ತಳೆ, ನಿಂಬೆ, ಮಾವು ಹಾಗೂ ಮಾದಲಗಳು ಹುಳಿಯಾಗಿದ್ದು ಅಡಕೆ ಹುಳಿ ರುಚಿಯನ್ನು ಕೊಟ್ಟವರಾರು? ಇಲ್ಲಿ ಜೀವಸಂಕುಲದ ವೈವಿಧ್ಯತೆಯನ್ನು ಪ್ರಶ್ನಿಸುತ್ತಿದ್ದಾರೆ ಅಕ್ಕ.

ಕಬ್ಬು, ಬಾಳೆ, ಹಲಸು, ನಾರಿವಾಳಕ್ಕೆ ಸಿಹಿನೀರನೆರೆದವರಾರಯ್ಯಾ?
ಕಬ್ಬು, ಬಾಳೆ, ಹಲಸು ಹಾಗೂ ಎಳನೀರಿಗೆ ಸಿಹಿ ಎರೆದವರಾರು ? ಎಂದು ಸೃಷ್ಟಿಯ ವಿಸ್ಮಯಗಳನ್ನು ವಿವರಿಸುವ ಪ್ರಯತ್ನ ಮಾಡಿದ್ದಾರೆ.

ಕಳವೆ ರಾಜಾನ್ನ ಶಾಲ್ಯನ್ನಕ್ಕೆ ಓಗರದ ಉದಕವನೆರೆದವರಾರಯ್ಯಾ?
ಭತ್ತದಿಂದ ಆಗುವ ಅನ್ನಕ್ಕೆ ಘಮವನ್ನು ಓಗರವನ್ನು ನೀರನ್ನು ಹಾಕಿ ಬೆಳೆಸಿದವರು ಯಾರು?
ಪ್ರಕೃತಿಗೆ ಬೀಳುವ ಮಳೆ, ಬೀಸುವ ಗಾಳಿ, ಭೂಮಿಯ ಮೇಲಿನ ಮಣ್ಣು ಎಲ್ಲವೂ ಒಂದೇ ಆಗಿದ್ದರೂ ಭೂಮಿಯ ಮೇಲೆ ಬೆಳೆದಿರುವ ಸಸ್ಯ, ಅವುಗಳಲ್ಲಿ ಬಿಡುವ ಹಣ್ಣುಗಳ ರುಚಿ ಬೇರೆ ಬೇರೆ…

ಮರುಗ ಮಲ್ಲಿಗೆ ಪಚ್ಚೆ ಮಡಿವಾಳಕ್ಕೆ ಪರಿಮಳದುದಕವನೆರೆದವರಾರಯ್ಯಾ?
ಮರುಗ, ಮಲ್ಲಿಗೆ, ಪಚ್ಚೆಗಳಿಗೆ ಪರಿಮಳವನ್ನು ನೀಡಿದವರು ಯಾರು?
ಪ್ರಕೃತಿಯ ವಿವಿಧ ಪುಷ್ಪಗಳಿಂದ ಸುಗಂಧ ನೀಡಿದವರು ಯಾರಿರಬಹುದು.
ಇಂತೀ ಜಲವು ಒಂದೆ ನೆಲನು ಒಂದೆ
ಆಕಾಶವು ಒಂದೆ.
ಇಲ್ಲಿ ಜಲವೊಂದೇ, ನೆಲವೊಂದೆ, ಆಕಾಶವೂ ಒಂದೇ ಆಗಿರಲು ಇಷ್ಟೂಂದು ವಿವಿಧತೆ ಏಕೆ?

ಜಲವು ಹಲವು ದ್ರವ್ಯಂಗಳ ಕೂಡಿ ತನ್ನ ಪರಿಬೇರಾಗಿಹ ಹಾಗೆ ಅನೇಕ ಅನಿಲಗಳಿಂದಾದ ಸಸ್ಯ ತನ್ನ ತನಕ್ಕೆ ಅನುಗುಣವಾಗಿ ರುಚಿಯನ್ನು ಹೊಂದಿರುತ್ತದೆ. ಜಗತ್ತಿನಲ್ಲಿರುವ ಎಲ್ಲ ಜೀವಿಗಳು ಸೃಷ್ಟಿಕರ್ತನಾದ ಭಗವಂತನಿದಾದ ವರವೇ ಸರಿ. ಅಣು ರೇಣು ತೃಣ ಕಾಷ್ಟಗಳೆಲ್ಲವೂ ದೇವರ ಅನುಗ್ರಹ ವಿಲ್ಲದೆ ಬದುಕಲಾರವು.

ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು ಹಲವು ಜಗಂಗಳ ಕೂಡಿಕೊಂಡಿರ್ದಡೇನು? ತನ್ನ ಪರಿ ಬೇರೆ.
ಅದೇ ರೀತಿ ತನ್ನ ಸ್ವಾಮಿ ಚೆನ್ನಮಲ್ಲಿಕಾರ್ಜುನನು ಹಲವು ರೀತಿಗಳಲ್ಲಿ ಜೀವರಕ್ಷಕನಾಗಿದ್ದು, ಜ್ಞಾನ ವಿಜ್ಞಾನಕ್ಕೂ ನಿಲುಕದ ಕೂತೂಹಲಗಳಿಂದ ಕೂಡಿರುವ ಭಗವಂತನನ್ನು ಅಕ್ಕ ಕಾಣುವ ರೀತಿಯೇ ಬೇರೆ.

  • ಲೇಖಕರು: ಇಂದಿರಾ ಲೋಕೇಶ್, ಹಾಸನ