ಬೆಟ್ಟದ ಮೇಲೊಂದು ಮನೆಯ ಮಾಡಿ

ಮಾನವ ಸಂಘ ಜೀವಿ. ಆತ ಸಮಾಜದ ಒಳಿತು ಕೆಡುಕುಗಳಿಗೆ ಸ್ಪಂದಿಸುತ್ತಾ ಸಮಾಜದ ಹಿತದ ಜೊತೆಗೆ ತನ್ನ ಹಿತವನ್ನು ಕಂಡುಕೊಂಡು ಬಾಳ ಬೇಕಾಗಿರುತ್ತದೆ. 12 ನೇ ಶತಮಾನದ ವಚನಕಾರರಾದ ಅಕ್ಕಮಹಾದೇವಿಯವರು ಹೀಗೆ ಹೇಳುತ್ತಾರೆ.

ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದಡೆಂತಯ್ಯಾ ? ಸಮುದ್ರದ ತಡಿಯಲೊಂದು
ಮನೆಯ ಮಾಡಿ
ನೊರೆತೆರೆಗಳಿಗಂಜಿದಡೆಂತಯ್ಯಾ ? ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದಡೆಂತಯ್ಯಾ ? ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ
ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.

  • ಎಂದು ತಮ್ಮ ವಚನದಲ್ಲಿ ಸಮಾಜದ ಸ್ಥಿತಿಯನ್ನು ವಿವರಿಸಲಾಗಿದೆ . ಈ ವಚನ ಎಲ್ಲ ಕಾಲಕ್ಕೂ ಅನ್ವಯವಾಗುತ್ತದೆ.

ಬೆಟ್ಟದ ಮೇಲೆ ಮನೆಯೊಂದು ಮಾಡಿಕೊಂಡು ಸಮಾಜದ ಜಂಜಾಟಗಳಿಂದ ದೂರವಿರ ಬೇಕೆಂದು ಹೋದ ಮನುಷ್ಯ ಅಲ್ಲಿನ ವಾತಾವರಣಕ್ಕೆ ತಕ್ಕಂತೆ ತನ್ನ ಸಂರಕ್ಷಣೆಗೆ ಬೇಕಾದ ಸಿದ್ದತೆ ಮಾಡಿ ಕೊಳ್ಳಬೇಕಾಗುತ್ತದೆ, ಬದಲಾಗಿ ಬೆಟ್ಟದ ಮೇಲಿನ ಕಾಡು ಪ್ರಾಣಿಗಳಿಗೆ ಪ್ರತಿನಿತ್ಯ ಹೆದರಿಕೊಂಡು ಜೀವನ ನಡೆಸಲು ಸಾಧ್ಯವಿಲ್ಲ. ಪುರಂದರ ದಾಸರು ಹೇಳುವಂತೆ “ಈಸ ಬೇಕು ಇದ್ದು ಜಯಿಸ ಬೇಕು.” ಅದೇ ಜೀವನದ ಸತ್ಯ. ಅದೇ ರೀತಿ ಸಮುದ್ರದ ದಡದಲ್ಲಿ ಮನೆಯ ಮಾಡಿ ಕೊಂಡು ಅಲೆಗಳು ಯಾವಾಗ ಬಂದು ಅಪ್ಪಳಿ ಸುತ್ತೋ ಎಂದು ಹೆದರಿ ಚಿಂತಿಸುತ್ತಾ ತಲೆ ಮೇಲೆ ಕೈ ಇಟ್ಟು ಕುಳಿತರೆ ಯಾವ ಕೆಲಸವೂ ಆಗದು. ಮನೆ ಕೊಚ್ಚಿ ಹೋಗುತ್ತದೆ ಎಂದು ಸುನಾಮಿಗೆ ಹೆದರುವ ಬದಲು ಅದಕ್ಕೆ ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.

ಮನುಷ್ಯ ಕಷ್ಟ ಬಂದಾಗಲೂ ಅದನ್ನು ಎದುರಿಸುವ ಎದೆಗಾರಿಕೆ ಇರಬೇಕು. ಹಾಗೆಯೇ ಸಂತೆಯೊಳಗೆ ಮನೆ ಮಾಡಿಕೊಂಡು ಶಬ್ದಕ್ಕೆ ಹೆದರಿ ಕೊಳ್ಳದೆ ಜನಜಂಗುಳಿಯ ನಡುವೆಯೇ ಜೀವನ ನಡೆಸುವ ಅಭ್ಯಾಸ ಮಾಡಿ ಕೊಳ್ಳ ಬೇಕಾಗುತ್ತದೆ. ಬಂದದ್ದನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅಕ್ಕಮಹಾದೇವಿಯವರು ಚನ್ನಮಲ್ಲಿಕಾರ್ಜುನನನ್ನು ನೆನೆಯುತ್ತಾ ಈ ಪ್ರಪಂದಲ್ಲಿ ಹುಟ್ಟಿದ ಮೇಲೆ ಸ್ತುತಿ ನಿಂದನೆಗಳು ಒಳಿತು ಕೆಡುಕುಗಳಿಗೆ ತಲೆಬಾಗಿ ಹಂಸ ಪಕ್ಷಿಯಂತೆ ಹಾಲಿನಲ್ಲಿರುವ ಸಾರವನ್ನು ಮಾತ್ರ ಹೀರಿಕೊಂಡು ನಿಸ್ಸಾರವಾದ ನೀರನ್ನು ಬಿಡುವಂತೆ ನಾವೂ ಸಹ ಸಮಾಜದಲ್ಲಿರುವ ಒಳಿತನ್ನು ನಮ್ಮದಾಗಿಸಿ ಕೊಂಡು ಕೆಡುಕನ್ನು ನೋಡಿಯೂ ನೋಡದಂತಿರಬೇಕು . ಒಳಿತಿನ ಹೊಗಳಿಕೆಗೆ ಹಿಗ್ಗದೆ , ಕೆಡುಕಿನ ತೆಗಳುವಿಕೆಗೆ ಕುಗ್ಗದೆ , ನಿಂದನೆಗೆ ಕೋಪಗೊಳ್ಳದೆ, ತಾಳ್ಮೆ , ಸಹನೆ , ಔದಾರ್ಯದಿಂದ ನಿಂದನೆಗಳನ್ನು ಸಮಾನವಾಗಿಸ್ವೀಕರಸಬೇಕು. ಸಮಾಜದ ಒಳಿತಿಗಾಗಿ ನಾವೂ ದುಡಿಯಬೇಕೆಂದು ಜೀವನದ ಕಡು ಸತ್ಯಗಳನ್ನು ತಮ್ಮ ವಚನದ ಸಾಲುಗಳಲ್ಲಿ ತುಂಬಾ ಮಾರ್ಮಿಕವಾಗಿ ವರ್ಣಿಸಿದ್ದಾರೆ.

– ಇಂದಿರಾ ಲೋಕೇಶ್, ಹಾಸನ