ಪ್ರೀತಿಯೊಸಗೆ

ಒಲವಿನಲಿ ಕಾಣ್ಕೆ ಪ್ರೀತಿಯೊಸಗೆ
ಹೃನ್ಮನವ ಸೆಳೆದಂಥ ಭಾವದೊಳಗೆ
ಸೆರೆಯಿಟ್ಟ ಹೃದಯದ ಭಿತ್ತಿಯೊಳಗೆ

ಪ್ರೇಮದಲಿ ಜೇನು ಸುರಿವಂತೆ ಸರಿಗಮ
ಜೋಡಿ ಬದುಕಿಗೆ ಹಣತೆಯಂತೆ ಸಮಾಗಮ
ರೆಕ್ಕೆ ಹಚ್ಚಿದ ಹಕ್ಕಿಗಳಂತೆ ಪರಾಕ್ರಮ

ನನ್ನಿಷ್ಟ ನಿನ್ನಿಷ್ಟ ನಾ ರೆಪ್ಪೆ ನೀ ಕಣ್ಣು
ಒಡನಾಡಿ ಒಡಗೂಡಿ ಬಂಗಾರ ಮಣ್ಣು
ಉಚ್ಚ್ರಾಯ ಸಂಪತ್ತು ಬಾಳ್ವೆಯಲಿ ಹೆಣ್ಣು

ನೀನಿತ್ತ ಉಡುಗೊರೆ ಸುಖ ಸಾಗರ
ವರ್ಣಿಸಲಸದಳ ಮನೋವಿಹಾರ
ನೀನೆಲ್ಲ ನಾನೆಲ್ಲ ನಾ ನಿನ್ನ ನೀ ನನ್ನ ಚಂದ್ರ ಚಕೋರ

ಈ ಭುವಿಯು ಆಗಸ ಸೂರ್ಯ ಚಂದ್ರ ತಾರೆ
ನನ್ನ ನಿನ್ನ ಸಂಗಾತಿ ಸಂಪ್ರೀತಿ ತೋರೆ
ಹಸಿರು, ಕಾನನ ಬೆಟ್ಟ ಗುಡ್ಡ ಅಪ್ಪಿದೆ ಮನಸಾರೆ

ಪ್ರೇಮ ಬೀಜವು ಮೊಳೆದು ಹಸಿಯಾಗಲಿದೆ
ಪ್ರೀತಿ ಹಂದರದಲ್ಲಿ ನೆರಳಾಗಲಿದೆ
ನಾಳೆಯ ಬೆಳಗಿಗೆ ಉಷೆಯಾಗಿ ಮಂಜಾಗಿ ಹನಿಸಲಿದೆ

  • ಕಲ್ಪನಾಅರುಣ