ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಪ್ರಾಚೀನ ಭಾರತೀಯ ಪರಂಪರೆಯಲ್ಲಿ ಗುರುವಿಗೆ ವಿಶಿಷ್ಟವಾದ ಸ್ಥಾನವಿದೆ. ‘ಗುರುʼ ಎಂಬ ಪದವೇ ರೋಮಾಂಚನವನ್ನುಂಟು ಮಾಡುವ ದಿವ್ಯ ಪ್ರಭೆ.
“ಗುಕಾರಸ್ತ್ವಂಧಕಾರಶ್ಚ ರುಕಾರಸ್ತೇಜ ಉಚ್ಚತೇ,
ಅಜ್ಞಾನ ಗ್ರಾಸಕಂ ಬ್ರಹ್ಮ ಗುರುದೇವ ನ ಸಂಶಯಃ”
ಗುರುವೆಂಬ ಎರಡಕ್ಷರದಲ್ಲಿ ‘ಗುʼ ಎಂದರೆ ಕತ್ತಲೆ, ‘ರುʼ ಎಂದರೆ ಹೋಗಲಾಡಿಸುವವನು, ಕತ್ತಲೆಯನ್ನು ದೂರಮಾಡಿ ಬೆಳಕನ್ನು ನೀಡುವವನು, ಅಜ್ಞಾನದ ಕತ್ತಲೆಯನ್ನು ನುಂಗುವ ಬ್ರಹ್ಮನೇ ಗುರುವು ಇದರಲ್ಲಿ ಸಂಶಯವಿಲ್ಲ, ಎಂದು ಮೇಲಿನ ಶ್ಲೋಕವು ತಿಳಿಸುತ್ತದೆ.
ಗುರು ಯಾವಾಗಲೂ ಜ್ಞಾನದ ನೀಲಾಗಸದಲ್ಲಿ ನಕ್ಷತ್ರದಂತೆ ಹೊಳೆಯುತ್ತಿರುತ್ತಾನೆ. ಆತ ವ್ಯಕ್ತಿಯನ್ನು ಅಜ್ಞಾನದ ಅಂಧಕಾರದಿಂದ ಹೊರತೆಗೆದು ಜ್ಞಾನಸಾಗರದಲ್ಲಿ ಮುಳುಗಿಸುತ್ತಾನೆ. ಗುರುವೆಂದರೆ ಬ್ರಹ್ಮ, ಆತ ಲೋಕಜ್ಞಾನವಿಲ್ಲದ ಮಾಂಸದ, ಮುದ್ದೆಯಂತಿರುವ ಮೆದುಳಿಗೆ ಲೋಕಜ್ಞಾನದ ಅರಿವನ್ನು ನೀಡುತ್ತಾ, ತನ್ನಲ್ಲಿರುವ ಅಗಾಧವಾದ ಪಾಂಡಿತ್ಯವನ್ನು ತನ್ನ ಶಿಷ್ಯರಿಗೆ ಧಾರೆ ಎರೆಯುತ್ತಾ ಶಿಷ್ಯನ ಉನ್ನತಿಯಲ್ಲಿ ತನ್ನ ಗೆಲುವನ್ನು ಕಾಣುತ್ತಾನೆ. ಗುರು ಕೇವಲ ಒಬ್ಬ ವ್ಯಕ್ತಿಯಲ್ಲ, ಆತ ಭಗವಂತನ ಸ್ವರೂಪ.
“ಗುರು ಬ್ರಹ್ಮ ಗುರು ವಿಷ್ಣು
ಗುರುದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈಶ್ರೀ ಗುರುವೇ ನಮಃ”
ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ಮಹೇಶ್ವರ ಅಂತಹ ಗುರುವಿಗೆ ನಮಸ್ಕಾರಗಳು, ಬ್ರಹ್ಮ, ವಿಷ್ಣು, ಮಹೇಶ್ವರರು ಒಂದೊಂದು ಶಕ್ತಿಯ ಪ್ರತೀಕವಾಗಿ, ಗುರುವಿನ ರೂಪದಲ್ಲಿ ಕಾಣಿಸುತ್ತಾರೆ. ಗುರುವಿನ ಸ್ಥಾನವನ್ನು ಪೂಜ್ಯಭಾವನೆಯಿಂದ ಕಂಡು ಗೌರವಿಸಲಾಗಿದೆ.
ಗುರುಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾದದ್ದು, ಮಕ್ಕಳು ಸಂಸ್ಕಾರವಂತರಾಗಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಗುರುವಿನ ಪಾತ್ರ ಪ್ರಮುಖವಾದದ್ದು. ಆಧುನಿಕ ಕಾಲದಲ್ಲಿ ಗುರುವೆಂದರೆ ಶಿಕ್ಷಕ. ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ದೇಶಕ್ಕೆ ಉತ್ತಮವಾದ ಯುವಜನಾಂಗವನ್ನು ನೀಡುವ ಜವಾಬ್ದಾರಿ ಶಿಕ್ಷಕರದ್ದಾಗಿರುತ್ತದೆ. ದೇವರು ವಿಶ್ವದ ಸೃಷ್ಟಿಕರ್ತನಾದರೆ, ಉತ್ತಮವಾದ ರಾಷ್ಟ್ರನಿರ್ಮಾಣಕ್ಕೆ ಅಡಿಪಾಯ ಹಾಕುವವರು ಶಿಕ್ಷಕರು. ಅವರು ತಮ್ಮಲ್ಲಿರುವ ಅಗಾಧವಾದ ಜ್ಷಾನವನ್ನು ತಮ್ಮ ಶಿಷ್ಯರಿಗೆ ನೀಡಿ, ತಾಳ್ಮೆ, ಪ್ರೀತಿ, ಸಹನೆ, ಅನುಕಂಪ, ಸನ್ನಡತೆ ಮುಂತಾದ ಉತ್ತಮ ಗುಣಗಳ ಜೊತೆಗೆ ಆನಂದಮಯ ಜೀವನಕ್ಕೆ ಅಡಿಪಾಯ ಹಾಕಿ ಕೊಡುತ್ತಾರೆ. ಶಿಕ್ಷಕರು ನೈತಿಕ ಹಾಗೂ ಮಾನವೀಯ ಮೌಲ್ಯವನ್ನು ಬೆಳೆಸುವುದರೊಂದಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿ ಸಮಾಜಕ್ಕೆ ಮಾದರಿಯಾಗುತ್ತಾರೆ. ಶಿಕ್ಷಕ ವೃತ್ತಿಯೇ ಅಂತಹದ್ದು, ವಿದ್ಯಾರ್ಥಿಗಳ ಮನದಾಸೆಯನ್ನರಿತು ನಾಳಿನ ಸಮಾಜಕ್ಕೆ ಭದ್ರ ಬುನಾದಿ ಹಾಕುತ್ತಾರೆ.
ಉತ್ತಮ ಶಿಕ್ಷಕರು ವಿದ್ಯಾರ್ಥಿಗಳಿಗೆ ನೈತಿಕ ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ತಿಳಿಸುತ್ತಾ ಸಕಾರಾತ್ಮಕವಾಗಿ ಚಿಂತಿಸಲು ಪ್ರೋತ್ಸಾಹಿಸುತ್ತಾರೆ. ಹಿಂದಿಯ ಶ್ರೇಷ್ಟ ಕವಿ ಕಬೀರರು ಗುರುವಿನ ಬಗ್ಗೆ ಹೀಗೆ ಹೇಳುತ್ತಾರೆ-
“ಗುರು ಗೋವಿಂದ್ ದೋವೂ ಖಡೇ, ಕಾಕೆ ಲಾಗೂ ಪಾಯ್,
ಬಲಿಹಾರಿ ಗುರು ಆಪನೇಗೋವಿಂದ್ ದಿಯೋ ಬತಾಯ್”
ಕಬೀರರ ಅಭಿಪ್ರಾಯದಲ್ಲಿ ನನ್ನ ಎದುರಿಗೆ ಗುರು ಹಾಗೂ ಗೋವಿಂದ ಇಬ್ಬರು ಒಟ್ಟಿಗೆ ಬಂದು ನಿಂತಿದ್ದಾರೆ, ನಾನು ಮೊದಲು ಯಾರ ಪಾದಗಳಿಗೆ ನಮಸ್ಕರಿಸಲಿ, ನನ್ನ ಆಯ್ಕೆ ಗುರುವಾಗಿರುತ್ತಾರೆ, ಕಾರಣ ಶಿಷ್ಯನ ಒಳಿತಿಗಾಗಿ ತನ್ನೆಲ್ಲ ಸರ್ವಸ್ವವನ್ನು ತ್ಯಾಗ ಮಾಡಿ, ಸಮಾಜಕ್ಕೆ ಒಳ್ಳೆಯ ಪ್ರಜೆಗಳನ್ನು ನೀಡುತ್ತಿರುವ ಗುರುವೇ ಶ್ರೇಷ್ಠ. ದೇವರ ಇರುವಿಕೆಯ ಬಗ್ಗೆ ತಿಳಿಸಿಕೊಟ್ಟವರು ಗುರುಗಳೇ ಆದ್ದರಿಂದ ಗುರುಗಳ ಪಾದಗಳಿಗೆ ಮೊದಲು ನಮಸ್ಕರಿಸುತ್ತೇನೆಂದು ತಿಳಿಸುತ್ತಾರೆ. ಎಂತಹ ಉನ್ನತ ಆಲೋಚನೆಯಲ್ಲವೇ.
ಗುರುವಿನ ಕರುಣೆಯಿಂದ ಅಕ್ಕಮಹಾದೇವಿಗೆ ಆದ ಅನುಭವವನ್ನು ಆಕೆಯ ಮಾತುಗಳಲ್ಲೇ ಕೇಳಬೇಕು. –
“ಗುರುವಿನ ಕರುಣದಿಂದ ಲಿಂಗವ ಕಂಡೆ
ಜಂಗಮನ ಗುರುವಿನ ಕರುಣದಿಂದ
ಪಾದೋದಕವ ಕಂಡೆ
ಗುರುವಿನ ಕರುಣದಿಂದ
ಸಜ್ಜನ ಸದ್ಭಕ್ತರ ಸದ್ಗೋಷ್ಟಿಯ ಕಂಡೆ
ಚೆನ್ನಮಲ್ಲಿಕಾರ್ಜುನಯ್ಯ
ನಾ ಹುಟ್ಟಲೊಡನೆ ಶ್ರೀ ಗುರು ವಿಭೂತಿಯ ಪಟ್ಟವ ಕಟ್ಟಿ
ಲಿಂಗಸ್ವಾಯತವ ಮಾಡಿದನಾಗಿ ಧನ್ಯಳಾದೆನು.”
ಅಕ್ಕಮಹಾದೇವಿ ಗುರುವಿನ ಬಗ್ಗೆ ಹೊಂದಿದ್ದ ಭಕ್ತಿ ಬಾವನೆಯನ್ನು ನಾವಿಲ್ಲಿ ಕಾಣಬಹುದು. –
“ಅಜ್ಷಾನ ತಿಮಿರಾಂಧಸ್ಯ , ಜ್ಞಾನಾಂಜನ ಶಲಾಕಯಾ
ಚಕ್ಷುರುನ್ಮೀಲಿತಂ ಏನ ತಸ್ಮೈ ಶ್ರೀ ಗುರುವೇ ನಮಃ”
ಅಜ್ಞಾನವೆಂಬ ಕಣ್ಣಪೊರೆಯಿಂದ, ಕುರುಡನಾದವನಿಗೆ ಜ್ಞಾನಾಂಜನೆವೆಂಬ ಕಡ್ಡಿಯಿಂದ ಕಣ್ಣನ್ನು ಯಾವನು ತೆರೆಯಿಸುತ್ತಾನೆಯೋ ಅಂತಹ ಗುರುವಿಗೆ ನಮಸ್ಕಾರಗಳು ಎಂದು ಹೇಳಲಾಗಿದೆ . ಹೌದು ಶಿಕ್ಷಕರು ರಾಷ್ಟ್ರ ನಿರ್ಮಾಣದ ಶಿಲ್ಪಿಗಳು, ವಿದ್ಯಾರ್ಥಿಗಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುತ್ತಾ. ಮೇಲು-ಕೀಳು, ಬಡವ-ಬಲ್ಲಿದನೆಂಬ ಭೇದವಿಲ್ಲದೆ ಮಕ್ಕಳ ಭವಿಷ್ಯಕ್ಕೆ ದುಡಿಯುತ್ತಾರೆ. ಭಾರತೀಯ ಪರಂಪರೆಯಲ್ಲಿ ಉತ್ತಮ ಗುರುಶಿಷ್ಯರನ್ನು ಕಾಣುತ್ತೇವೆ. ಈ ಸಂದಂರ್ಭದಲ್ಲಿ ಅಲ್ಲಮ ಪ್ರಭು ಹೀಗೆ ಹೇಳುತ್ತಾರೆ. –
“ಒಂದೆಂಬೆನೆ ? ಎರಡಾಗಿದೆ,
ಎರೆಡೆಂಬೆನೆ ? ಒಂದಾಗಿದೆ
ಗುರುಶಿಷ್ಯರೆಂಬ ಭಾವಕ್ಕೆ ಭೇದವುಂಟೇ”
ಹೌದು ಎಂತಹ ಅದ್ಭುತವಾದ ಮಾತುಗಳಿವು, ಗುರುಶಿಷ್ಯರೆಂದರೆ ಭೇದವಿಲ್ಲ, ಆತ್ಮ ಒಂದೇ ದೇಹವೆರೆಡು ಎಂದು ತಿಳಿಸುತ್ತಾರೆ. ಆಧುನಿಕ ಕಾಲವಾದ ಇಂದು ನಾಗರೀಕತೆಯ ನಾಗಲೋಟದಲ್ಲಿ, ತಂತ್ರಜ್ಞಾನದ ತುತ್ತತುದಿಯಲ್ಲಿರುವ ಇಂದಿನ ಯುವ ಪೀಳಿಗೆಗೆ ಗುರುವೆಂಬ ಭಕ್ತಿಯಾಗಲೀ, ಗುರುವಿನ ಬಗ್ಗೆ ಪೂಜ್ಯ ಭಾವನೆಯಾಗಲೀ, ಶ್ರದ್ಧೆಯಾಗಲೀ ನೋಡಲು ಸಾಧ್ಯವಿಲ್ಲ. ಪ್ರಸ್ತುತ ವರ್ತಮಾನ ಪರಿಸ್ಥಿತಿಯಲ್ಲಿ ಶಿಕ್ಷಕರನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ಮಾನವೀಯ ಮೌಲ್ಯಗಳನ್ನು ತಿಳಿಸಿ, ತಪ್ಪು – ಸರಿಗಳ ವಿವೇಚನೆಯನ್ನು ಮಾಡಿ ಸನ್ಮಾರ್ಗದಲ್ಲಿ ನಡೆಯಲು ತಿಳಿಸಿ, ಜೀವನಕ್ಕೊಂದು ಅರ್ಥ ಕಲ್ಪಿಸಿ, ಬುದ್ಧಿವಾದ ಹೇಳುವ ಗುರುಗಳಿಗೆ ಚಾಕು-ಚೂರಿ, ಕತ್ತಿ-ಮಚ್ಚುಗಳನ್ನು ಹಿಡಿದು ಹೊಡೆಯಲು ಬರುತ್ತಾರೆ ಎಂದಾದರೆ ನಾವಿಂದು ವಾಸ್ತವಿಕ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿ, ಶಿಕ್ಷಕರಾಗಿ ನಾವೆಲ್ಲಿ ಎಡವಿದ್ದೇವೆಂದು ನಾವೊಮ್ಮೆ ಪರಾಮರ್ಶಿಸಿಕೊಳ್ಳ ಬೇಕಾದ ಅವಶ್ಯಕತೆಯಿದೆ.
ಇಂದಿನ ಸಾಮಾಜಿಕ ಪರಿಸ್ಥಿತಿ ಇಷ್ಟೊಂದು ಹದಗೆಡಲು ಕಾರಣವನ್ನು ಹುಡುಕಬೇಕಾದ ಅನಿವಾರ್ಯತೆ ಇದೆ. ಗುರುಗಳ ಬಗ್ಗೆ ಕಿಂಚಿತ್ತೂ ಭಯ ಭಕ್ತಿ ಇಲ್ಲದಿರುವುದು, ಗುರುವಿನ ಅಸ್ತಿತ್ವಕ್ಕೆ ಧಕ್ಕೆ ಯುಂಟಾಗುತ್ತಿದ್ದರೂ ಮೂಕವಿಸ್ಮಿತರಾಗಿದ್ದೇವೆ. ಬದಲಾದ ಕಾಲಮಾನಕ್ಕೆ ಗುರು ಶಿಷ್ಯರ ಬದಲಾದ ಸಂಬಂಧದ ಬಗ್ಗೆ ಅಲ್ಲಮ ಪ್ರಭುಗಳು ಒಂದೆಡೆ ಹೀಗೆ ಹೇಳುತ್ತಾರೆ. –
“ಕೃತಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬಡಿದು
ಬುದ್ಧಿಯ ಕಲಿಸಿದರೆ, ಆಗಲಿ ಪ್ರಸಾದವೆಂದವಯ್ಯ
ತ್ರೇತಾಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬೈದು
ಬುದ್ಧಿಯ ಕಲಿಸಿದರೆ, ಆಗಲಿ ಪ್ರಸಾದವೆಂದವಯ್ಯ
ದ್ವಾಪರ ಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಝಂಕಿಸಿ
ಬುದ್ಧಿಯ ಕಲಿಸಿದರೆ, ಆಗಲಿ ಪ್ರಸಾದವೆಂದವಯ್ಯ
ಕಲಿಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ವಂದಿಸಿ
ಬುದ್ಧಿಯ ಕಲಿಸಿದರೆ, ಗುಹೇಶ್ವರಾ,
ನಿಮ್ಮ ಕಾಲದ ಕಟ್ಟಳೆಯ
ಕಲಿತನಕೆ ನಾ ಬೆರೆಗಾದೆನು.”
ಹೌದು ಸ್ನೇಹಿತರೆ ಅಲ್ಲಮ ಪ್ರಭುವಿನ ಈ ಮಾತು ನೂರಕ್ಕೆ ನೂರು ಸತ್ಯವಾಗಿದೆ, ಇಂದಿನ ವಿದ್ಯಾರ್ಥಿಗಳಿಗೆ ಶಿಕ್ಷಕರೇ ಅವರ ಮನೆಗಳಿಗೆ ಹೋಗಿ ಕೈ ಮುಗಿದು ಶಾಲೆಗೆ ಬನ್ನಿ, ನಾಲ್ಕು ಅಕ್ಷರ ಕಲಿಯಿರಿ ಎಂದು ಹೇಳುವ ಪರಿಸ್ಥಿತಿಯನ್ನು ತಲುಪಿದ್ದೇವೆ. ಇಂದಿನ ವಿದ್ಯಾರ್ಥಿಗಳಲ್ಲಿ ಗುರುಭಕ್ತಿಯ ಜೊತೆಗೆ ಗುರಿಯೂ ಇಲ್ಲ, ಸೂತ್ರವಿಲ್ಲದ ಗಾಳಿಪಟದಂತೆ ಮನಸೋಇಚ್ಛೇ ವರ್ತಿಸುತ್ತಾರೆ. ಅವರನ್ನು ತಿದ್ದಿ ಸಮಾಜದ ಸತ್ಪ್ರಜೆಗಳನ್ನಾಗಿಸುವ ಹೊಣೆ ನಮ್ಮೆಲ್ಲರದ್ದಾಗಿದೆ.
ಭವ್ಯ ಭಾರತದ ಭಾವೀ ಪ್ರಜೆಗಳನ್ನು ಸೃಷ್ಟಿಸುತ್ತಿರುವ ನಾವಿಂದುತಾಳ್ಮೆ, ಸಹನೆ, ಭಕ್ತಿ, ನೀತಿ, ಸತ್ಯ , ಧರ್ಮ, ಶ್ರದ್ಧೆ, ಕೃತಜ್ಞತೆ, ವೈಚಾರಿಕತೆ, ವೈಜ್ಞಾನಿಕತೆ, ನೈತಿಕ ಮೌಲ್ಯ, ಮಾನವೀಯ ಮೌಲ್ಯ ಹಾಗೂ ಬದ್ಧತೆಯಿಂದ ಕೂಡಿದ ಜೀವನಕ್ಕೆ ಮಾರ್ಗದರ್ಶಕರಾಗಿ ಭವ್ಯ ಭಾರತದ ಭವಿಷ್ಯತ್ತಿಗಾಗಿ ಶ್ರಮಿಸೋಣ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು.
ಪ್ರೀತಿಯ ವಿದ್ಯಾರ್ಥಿಗಳೇ ಗುರುವಿನ ಗುಲಾಮನಾದಾಗ ಮಾತ್ರ ಸಾಧನೆಯ ಉತ್ತುಂಗವೇರಲು ಸಾಧ್ಯ. ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ಲೇಖಕರು: ಇಂದಿರಾ ಲೋಕೇಶ್, ಹಾಸನ
Hi! This is my first comment here so I just wanted to
give a quick shout out and say I truly enjoy reading through your articles.
Can you suggest any other blogs/websites/forums that go over the same
topics? Thanks a ton!
What’s up, everything is going fine here and ofcourse every one is sharing facts, that’s actually good, keep up writing.