🌹ಗಜ಼ಲ್🌹

ಕಾಡಿಗೆಯು ಬೇಡ ಹಗಲಲೇ ಮಿನುಗಿವೆ ನಿನ ಕಣ್ಣುಗಳು
ನಡಿಗೆಯು ಬೇಡ ಜಾಡನು ಹರಸಿವೆ ನಿನ ಕಣ್ಣುಗಳು

ಏಕಾಂತ ಬಯಸಬೇಡ ಅಯಸ್ಕಾಂತ ಸೆಳೆತ ಮೊಳೆತ ಮೇಲೆ
ಸಲುಗೆ ಮಾತಿಗೆ ಮದಿರೆಯ ಕುಡಿಸಿವೆ ನಿನ ಕಣ್ಣುಗಳು

ಜಡವು ಕೊಳದಿ ಮುಳುಗಿಸದಿರಲಿ ತಡ ಮಾಡದೆ ದಡ ಸೇರುವ
ಗಡುವು ಕೊಟ್ಟು ತಂತಿ ಮೀಟಿವೆ ನಿನ ಕಣ್ಣುಗಳು

ಅಂಬರಕೆ ಕನಕಾಂಬರ ಮುಡಿಸಿದ ಕಾಮನಬಿಲ್ಲು ಸೆಟೆದಿದೆ ಶರವನೂಡಲು
ತಿರುಗು ಬಾಣವ ಬಿಟ್ಟು ಕೆಣಕಿವೆ ನಿನ ಕಣ್ಣುಗಳು

ನುಡಿಸಿಯೇ ಬಿಟ್ಟೆ ಕೊನೆಗೂ ಕುಮಾರನ ಅಂತಃರಂಗ ಮೃದಂಗವನು
ಎದೆಬಡಿತಕೆ ಪಕ್ವತೆಯನು ತಂದು ರುಚಿಸಿವೆ ನಿನ ಕಣ್ಣುಗಳು

🎸 ಸುಕುಮಾರ