ಗ್ರಹಣ ಗ್ರಹಚಾರ

ಗ್ರಹಣ ಗ್ರಹಚಾರವೋ
ಬಾನೊಮ್ಮೆ, ನೋಡು
ಬಾನಂಗಳದಿ ಮೂಡುತಿಹ
ವಿಸ್ಮಯವ

ರವಿ ವದನಕೆ ತೆರೆ
ಎಳೆದಿಹನು ಶಶಿಯು
ಶಶಿಯ ರೂಪವ ಧರಿಸಿ
ಆಡುತಿಹನು ರವಿಯು
ಕಣ್ಣಾಮುಚ್ಚಾಲೆ ಆಟ
ಬಾನೊಮ್ಮೆ ನೋಡು
ಬಾನಂಗಳದಿ ಮೂಡುತಿಹ
ವಿಸ್ಮಯವ

ಬೀದಿಯಲಿ ಜನರಿಲ್ಲದೆ
ಅಸ್ತವ್ಯಸ್ತವಾಗಿಹುದು ಲೋಕ
ಗಂಟೆ ಹತ್ತಾದರೂ
ತೆರೆದಿಲ್ಲ ಮನೆ ಮಠ
ಹೊಟ್ಟೆಗಿಟ್ಟಿಲ್ಲದೆ
ಮಾಡುತಿಹರು ಜಪವ

ಎಲ್ಲ ದೇವರಿಗಂದು ರಜೆಯು
ಗುಡಿ ಬಾಗಿಲ ತೆರೆದಿಲ್ಲ
ಇರುವ ದೇವರಿಗೆಲ್ಲ
ದರ್ಭೆ ಗರಿಕೆಗಳ ಬಂಧ
ಬಾನೊಮ್ಮೆ ನೋಡು
ಬಾನಂಗಳದಿ ಮೂಡುತಿಹ
ವಿಸ್ಮಯವ

ಬಂಧ ಬಿಡಿಸುವ ದೇವನೇ
ಬಂಧಿಯಾಗಿರುವಾಗ
ರವಿಗಾರು ನೀಡರು
ಸಹಾಯ ಹಸ್ತ
ಬಾನೊಮ್ಮೆ ನೋಡು
ಬಾನಂಗಳದಿ ಮೂಡುತಿಹ
ವಿಸ್ಮಯವ

ನಿತ್ಯ ಮಿಂಚುವ ದಿನಕರನ
ಕಾಂತಿ ಸೊರಗಿರಲಂದು
ನುಡಿಯುತಿಹರು ಭವಿಷ್ಯ
ಎಣ್ಣೆ ಹಚ್ಚಿ , ಜಳಕ ಮಾಡಿ
ದಾನ ಮಾಡಿ ಧಾನ್ಯ
ಎಳ್ಳು, ಗೋಧಿ , ಹುರುಳಿ,ಎಣ್ಣೆ
ಕೊಟ್ಟರಷ್ಟೇ ಶಮನ
ಬಾನೊಮ್ಮೆ ನೋಡು
ಬಾನಂಗಳದಿ ಮೂಡುತಿಹ
ವಿಸ್ಮಯವ

ಗ್ರಹಣ ಗ್ರಹಚರವಲ್ಲ
ಇದುವೇ ಪ್ರಕೃತಿ ವಿಸ್ಮಯವು
ವಿಜ್ಞಾನಿಗಳ ಜ್ಞಾನಕ್ಕೊಂದು ಕೌತುಕ
ವಿಸ್ಮಯದೊಳಗೆ ವಿಸ್ಮಯವು ಇದುವೇ
ಬಾನೊಮ್ಮೆ ನೋಡು
ಬಾನಂಗಳದಿ ಮೂಡುತಿಹ
ವಿಸ್ಮಯವ

ರಚನೆ: ಇಂದಿರಾ ಲೋಕೇಶ್ ಹಾಸನ