ಹೆಣ್ಣೆಂದರೆ ಶಾಪವೇ?

ಅಮ್ಮನೊಡಲಿನಾಳದ
ಸಂಕಟವ ನಾ ಬಲ್ಲೆ
ಹೆಣ್ಣೆಂಬ ಅಸಡ್ಡೆಯನು
ಗರ್ಭದೊಳಗಿರುವಾಗಲೇ ನಾ ಕಂಡೆ
ಏಕೆ ? ಹೆಣ್ಣೆಂದರೆ ಅನಿಷ್ಟವೇ?
ಅವಮಾನವೇ ? ಶಾಪವೇ?

ಅಮ್ಮ ಗರ್ಭವತಿ ಎಂದೊಡನೆ
ಮೊದಲನೆಯದೂ ಹೆಣ್ಣು
ಎರಡನೆಯದು ಹೆಣ್ಣಾದರೆಂಬ
ಅಪ್ಪನ ಭಯ, ಅಜ್ಜಿಯ
ಆಕ್ರೋಶದ ನುಡಿಗಳಿಗೆ
ಒದ್ದಾಡಿದ ಜೀವವ ಕಂಡು
ಮರುಗುತ್ತಿದ್ದೆನು
ಏಕೆ? ಹೆಣ್ಣೆಂದರೆ ಅನಿಷ್ಟವೇ?
ಅವಮಾನವೇ? ಶಾಪವೇ?

ನಾ ಮರುಗುತಾ ಒದ್ದಾಡಿದಾಗೆಲ್ಲ
ಅಮ್ಮನ ಕೋಮಲವಾದ ಕೈಗಳು
ನನ್ನನ್ನು ಸಂತೈಸುತ್ತಿದ್ದವು
ಭ್ರೂಣವನು ತೆಗೆಸೆಂದು ಕಿರುಚಾಡಿದ ಅಪ್ಪನ ಬೈಗುಳದ ನುಡಿಗಳಿಗೆ ನೊಂದು
ಹಸಿವಿನಿಂದ ಮಲಗಿದಾಗ
ನಾನೂ ಹಸಿವಿನಿಂದ ಒದ್ದಾಡುತ್ತಿದ್ದೆ,
ಒದೆತದ ಹೊಡೆತ ಅವಳಿಗೆ ನೋವನೀಡದೆ
ಕಚಗುಳಿ ಇಟ್ಟಂತೆ ಖುಷಿ ತಂದಿತು ಅಮ್ಮನಿಗೆ
ಏಕೆ? ಹೆಣ್ಣೆಂದರೆ ಅನಿಷ್ಟವೇ?
ಅವಮಾನವೇ? ಶಾಪವೇ?

ದಿನಕಳೆದಂತೆ ಅಪ್ಪನ ಕೋಪ
ಅಜ್ಜಿಯ ಆಕ್ರೋಶದ ನುಡಿಗಳು
ಅಭಿಮನ್ಯುವಿಗೆ ಕೇಳಿಸಿದಂತೆ
ನನಗೂ ಕೇಳಿಸುತ್ತಿತ್ತು
ನಾ ಅಸಹಾಯಕಳಾಗಿ ಅಪ್ಪನಿಗೆ
ಹಿಡಿಶಾಪ ಹಾಕಿದ್ದು ಅಪ್ಪನಿಗೆ ಕೇಳಿಸಲೇ ಇಲ್ಲ
ಅಮ್ಮನ ಅಳುವಿನೊಂದಿಗೆ
ನಾನೂ ಅಳುತ್ತಿದ್ದೆ
ಆದರದು ಯಾರಿಗೂ ಕೇಳಿಸಲೇ ಇಲ್ಲ
ಏಕೆ? ಹೆಣ್ಣೆಂದರೆ ಅನಿಷ್ಟವೇ? ಅವಮಾನವೇ? ಶಾಪವೇ?

ರಚನೆ: ಇಂದಿರಾ ಲೋಕೇಶ್, ಹಾಸನ