ಗಜ಼ಲ್

ತಳುಕಿನ ಹೊರಕವಚವ ಬಿಟ್ಟು ಹೊಳೆಯುವ ಒಳ ವಜ್ರವನು ನೋಡು
ಮನದ ಅಂಧಕಾರವ ತೊರೆದು ಎದೆಯೊಳಗಿನ ಅಂದವನು ನೋಡು

ನೂರೊಂದು ಹಣ್ಣುಗಳು ನಳ ನಳಿಸುತ್ತಿವೆ ಇಳಿಬಿಟ್ಟ ರೆಂಬೆಗಳಿಂದ
ಫಲದ ಸಿಪ್ಪೆಯನು ಕಳಚಿ ತಿರುಳ ರುಚಿಯನು ನೋಡು

ಹಾಲಿಗೆ ಬಿದ್ದ ಹಲ್ಲಿ ಹಾಲಾಹಲವಾಗುವುದು ಆಲಸ್ಯ ತೋರಿದಾಗ
ಮೊಸರು ಕಡೆದು ತಳದ ಬೆಣ್ಣೆಯ ಸ್ವಾದವನು ನೋಡು

ಕರದ ಸರಪಳಿಯ ಹಿಂದೆ ಸಮೂಹದ ಪರಿಶ್ರಮವು ಅಡಗಿದೆ
ಮಧು ಬಟ್ಟಿಲಲಿ ಸಂಗ್ರಹಿಸಿದ ಜೇನಿನ ಸವಿಯನು ನೋಡು

ಮಗುವಾಗಿ ನಗುಮೊಗದ ನೇಹವ ಹರಡುವ ಸ್ನೇಹ ಸಾಂಗತ್ಯಕೆ
ಹರುಷದ ಹೊನಲು ಪಸರಿಸಿ ಧನ್ಯತೆಯ ವಿಸ್ಮಯವನು ನೋಡು

– 🎸ಸುಕುಮಾರ