ಪ್ರಕೃತಿಮಾತೆ

ಬ್ರಹ್ಮಸೃಷ್ಟಿಗೆ ಸ್ಪೂರ್ತಿಯಾಗುತಲಿ
ಮೋಹಕ ನಗೆಯ ಬೀರುತಲಿ
ಉಬ್ಬು ತಗ್ಗಿನ ಬೆಟ್ಟಗಳೊಡಲಲಿ
ಹಸಿರುಟ್ಟ ನಿಸರ್ಗ ಮಾತೆ ಎಮ್ಮ ಹರಸುತಲಿ

ಕೊರೆವ ಇಬ್ಬನಿ ಹನಿಗಳೊಂದಿಗೆ
ಚಲಿಸುವ ಮೋಡಗಳ ನೃತ್ಯದೊಂದಿಗೆ
ಅಂತರಾತ್ಮದ ಆನಂದಾನುಭವದೊಂದಿಗೆ
ಹಾಡುತಿಹಳು ಮಂತ್ರ ಮುಗ್ದೆಯಾಗಿ
ಭಾವಲಹರಿಯೊಂದಿಗೆ

ಕಾವ್ಯ ರಸಿಕರ ಮನದಲಿ ನೆಲಸಿ
ವೀಣೆ ಮೀಟಿ ನಾದ ಹರಿಸಿ
ಖಗಗಳಿಂಚರದಿ ಸಪ್ತ ಸ್ವರ ನುಡಿಸಿ
ಮಂದಹಾಸದಿ ಜೀವ ಸಂಕುಲ ಉಳಿಸಿ

ಧನ್ಯತೆಯ ಭಾವದೊಲುಮೆ ಯೊಂದಿಗೆ
ನಿಂತಿಹಳು ಪ್ರಕೃತಿ ಮಾತೆ ವಾತ್ಸಲ್ಯದೊಂದಿಗೆ
ವಸಂತನಾಗಮನದ ಸಂತಸದೊಂದಿಗೆ
ಹರಸಿಹಳು ಎಮ್ಮನು ಹರುಷದೊಂದಿಗೆ

ರಚನೆ: ಇಂದಿರಾ ಲೋಕೇಶ್, ಹಾಸನ