ಗಾನ ವಿಶಾರದರು

ಭೋರ್ಗರೆದು ಧುಮುಕುವ ನದಿಯಂತೆ
ಗಾನ ಸುಧೆಯನು ಹರಿಸಿ
ಸಮುದ್ರದಲೆ ಮೇಳೈಸಿ ಬರುವಂತೆ
ಸಪ್ತಸ್ವರಗಳಿಂದ ರಾಗ ಹೊಮ್ಮಿಸಿ
ಗಾಳಿ ಗಂಧವಾಗಿ ಪಸರಿಸುವಂತೆ
ವಾದ್ಯಗಳಿಂದ ನಾದ ಝೇಂಕರಿಸಿ
ಸುರ ಲೋಕದ ಸಂಗೀತವನು
ಧರೆಗೆ ಬಿತ್ತರಿಸಿದ
ಗಾನವಿಶಾರದರು

ಒಳಗಣ್ಣಿನಿಂದಲೇ
ಜ್ಞಾನ ದೇವತೆಗೆ ನಮಿಸಿ
ಜಗವೇ ಕೊಂಡಾಡುವಂತೆ ಆಶ್ರಮ ಬೆಳೆಸಿ
ಅಕ್ಷರಾಭ್ಯಾಸವನು ವಿದ್ಯಾರ್ಥಿ ವೃಂದಕೆ ಕಲಿಸಿ
ಸಾಕ್ಷರತೆಯಿಂದ ಉನ್ನತ ಶ್ರೇಣಿಯಲ್ಲಿರಿಸಿ
ನಾಟಕಕಾಗಿ ರಂಗ ಮಂದಿರ ಸ್ಥಾಪಿಸಿ
ಅನಾಥರಿಗೆ ಅಂಧರಿಗೆ ಬಡವರಿಗೆ ಉಣಿಸಿ
ತಾಯಿ ತಂದೆ ಗುರುವಾಗಿ ಕಾಯುತ
ಪ್ರಖ್ಯಾತಿಯ ಮೇರು ಶಿಖರಕೆ ಏರಿದರು

ದಿನ ಬೆಳಗುವ ಬೆಳಕಿನ ಸೂರ್ಯನಂತೆ
ಜ್ಞಾನದ ಬೆಳಕಿನಿಂದ ಅಜ್ಞಾನ ಓಡಿಸಿ
ಸುರ ಲೋಕದ ಗಾನ ಗಂಧರ್ವರಂತೆ
ಗಾಯನ ಮಾಡಿ ಗಾನ ಸಾಮ್ರಾಟರೆನಿಸಿ
ಭೂಮಿಯ ಮೇಲೆ ನಡೆದಾಡುವ ದೇವರಂತೆ
ಶ್ರೀವೀರೇಶ್ವರ ಪುಣ್ಯಾಶ್ರಮ ಮಠದ ಗುರುವೆನಿಸಿ
ಕೈಮುಗಿದು ನಿಂತರೆ ಎಲ್ಲರ ಪೊರೆಯುತಿರುವ
ಪದ್ಮಶ್ರೀ ಪುರಸ್ಕೃತ
ಡಾIIಗುರು ಪುಟ್ಟರಾಜಗವಾಯಿ ಅವರು.

✍️ ಶ್ರೀ ಗೌರಿ ಸುರೇಶ್, ದಾವಣಗೆರೆ