ಕೀರ್ತಿ ಪಾತ್ರ
——————-

ಒಣ ಮಣ್ಣಲ್ಲೂ ಹಸಿರಿನ ಕಣ್ಣ
ತೆರೆಸುವ ಇವ ಜಗದಣ್ಣ.
ದಿಟ್ಟ ಸಾಹಸ, ಗಟ್ಟಿ ಗುಂಡಿಗೆ,
ಉಸಿರುಸಿರ ದೊರೆ ರೈತಣ್ಣ.

ಬರ ಬಂದು ಬರೆ ಎಳೆವುದು
ವರುಷ ಪ್ರತೀ ವರುಷ.
ವರ್ಷಧಾರೆಯ ಮುನಿಸಿಹುದು,
ಕುಗ್ಗಲಾರನಿವ ತಳೆವ ಛಲವ.

ದೀಪವಿವನೆ ನಾಡ ಗುಡಿಗೆ
ಶ್ರಮ ಬಲದಿ ಬೆಳಗುವನು.
ಕಷ್ಟದ ಕಡಲಿನೀಜುಗಾರ
ನೋವುಂಡು ನಲಿವನ್ನೆರೆವವ.

ನಾಡಿನೇಳ್ಗೆ ಇಲ್ಲ ಇವನಿಲ್ಲದೆ
ಅನ್ನದಾತನ ಕೈಲಿದೆ ಸೂತ್ರ.
ಇವನ ಗೆಲುವಲ್ಲಿದೆ ಶುಭ ಸಿರಿ
ಸಕಲ ಕೀರ್ತಿಗೂ ರೈತ ಪಾತ್ರ.

✍️ ದಿನೇಶ್, ಎನ್, ಅಮ್ಮಿನಳ್ಳಿ