Table of Contents

ಹೆಣ್ಣು ಅಂದರೆ ಶಕ್ತಿ

ಹೆಣ್ಣು ಜಗದ ಕಣ್ಣು, ಪ್ರಕೃತಿಯ ಮಾತೆ, ಶಕ್ತಿಗಳ ಸಂಗಮ. ಮಮತೆ, ಕರುಣೆ, ವಾತ್ಸಲ್ಯ ಅವಳ ಆಭರಣಗಳು. ಯಾವ ಮನೆಯಲ್ಲಿ ಹೆಣ್ಣಿಗೆ ಸ್ಥಾನ ಮಾನವಿದೆಯೋ, ಅಲ್ಲಿ ದೇವತೆಯು ಮಂಡಿಯೂರಿ ಕುಳಿತಿರುವಳು. “ಯಂತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾ” ಎಂದು ಹಿರಿಯರು ಹೆಣ್ಣಿನ ಶ್ರೇಷ್ಠತೆಯ ಬಗ್ಗೆ ಗೌರವಾದರ ಬಗ್ಗೆ ಆಡಿದ ನುಡಿಗಳಿವು. ಆದರೂ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗೆ ಎಷ್ಟೇ ಕಷ್ಟ, ನೋವು, ಅವಮಾನ ಕೊಟ್ಟರು, ಅದನ್ನೆಲ್ಲ ಸಹಿಸುವ ತಾಳ್ಮೆ, ಶಕ್ತಿ ಅವಳು ತನ್ನಲ್ಲಿ ಹುಟ್ಟಿದಾಗಿನಿಂದಲೂ ಬೆಳೆಸಿಕೊಂಡಿರುತ್ತಾಳೆ. ಹೆಣ್ಣಿನಿಂದಲೇ ಈ ಭೂಮಂಡಲಕೆ ಕಳೆ. ಆದರೂ ಅಜ್ಞಾನಿ ಜನ ಅವಳ ಬೆಲೆಯನ್ನು ತಿಳಿಯದವರು ಆಗಿದ್ದಾರೆ. ಒಂದು ಕುಟುಂಬದಲ್ಲಿ ಹೆಣ್ಣು ಇರದಿದ್ದರೆ ಅವರು ಜೀವನ ಎಲ್ಲ ರೀತಿಯಲ್ಲೂ ಎಷ್ಟು ಅಸ್ತವ್ಯಸ್ತವೆಂಬುದು ಅನುಭವವಾದವರಿಗೆ ಗೊತ್ತು. ಬೆಳಗಾದರೆ  ಮೊದಲು ಸೃಷ್ಟಿಗೆ ನಮಿಸುವಳು ಹೆಣ್ಣು. ಪೂರ್ತಿ ದಿನ ಅವಳ ದರ್ಶನವಿರದ ಮನೆಗಳೇ ಇಲ್ಲ. ಈಗ ಸಮಾಜದಲ್ಲಿ ಸರ್ಕಾರ ಹೆಣ್ಣುಮಕ್ಕಳಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿ, ತಲೆ ಎತ್ತಿ ಬದುಕುವಂತೆ ಮಾಡಿದ್ದಾರೆ. ಅದರಲ್ಲಿ ಸಧ್ಯದ ಆಧುನಿಕ ಯುಗದಲ್ಲಿ ಹೆಣ್ಣನ್ನು ಮಿರಿಸುವವರು ಯಾರುಯಿಲ್ಲ.
ನೋಡಿ ಸಮಾಜದಲ್ಲಿ ಗಂಡು ಹೆಣ್ಣು ಸಮಾನ ಮನಸ್ಕರರಾಗಿ ದುಡಿಯುತ್ತಿದ್ದಾರೆ. ಹೆಣ್ಣು ಸಾಕಷ್ಟು ಸ್ವಾವಲಂಬಿಯಾಗಿ ಕುಟುಂಬ ಮತ್ತು ತನ್ನ ಉದ್ಯೋಗವನ್ನು ಬಹಳ ಆಸಕ್ತಿಯಿಂದ ಸರಿದೂಗಿಸಿಕೊಂಡು ಛಲದಿಂದ ಬದುಕಿ ತೋರಿಸುತ್ತಿದ್ದಾಳೆ. ಒಬ್ಬ ಹೆಣ್ಣಿನಿಂದಲೇ ಪುರುಷನ ಜೀವನ ಪರಿಪೂರ್ಣ. ಒಂದು ಹೆಣ್ಣು ತಾನು ಕಟ್ಟಿಕೊಂಡ ಕನಸನ್ನು ಕೈಗೂಡಿಸಿ ಕೊಳ್ಳಲು ಎಲ್ಲರೊಡನೆ ನಗುತ ಆತ್ಮೀಯತೆ ಮತ್ತು ಗೌರವದಿಂದ ಮಾತನಾಡಿಸುತ್ತಾ ತನ್ನ ಸುತ್ತಲಿರುವ ಸಮಾಜದೊಳಗೆ ಒಂದು ಸ್ಥಾನಮಾನ ಗಿಟ್ಟಿಸಿಕೊಳ್ಳುವ ಮೊದಲ ಪ್ರಯತ್ನ ಮಾಡಿದ್ದಾಳೆ. ತನ್ನ ಪರಿಚಿತರ ಹೃದಯದಲ್ಲಿ ತನ್ನ ಹೆಸರು ಸ್ಥಾವರವಾಗಿಸಿ ತನಗೆ ಬೇಕಾಗುವ ಅಥವಾ ತನ್ನ ಕಾರ್ಯ ಸುಲಲಿತವಾಗಿ ಸರಿದೂಗಿಸಿಕೊಳ್ಳಲು ಅನುಕೂಲ ಮಾಡಿಕೊಂಡಿದ್ದಾಳೆ. ತಾನು ಯಾರಿಗಿಂತಲೂ ಕಡಿಮೆಯಿಲ್ಲ ಅನ್ನುವ ಭಾವನೆ ಅವಳನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಿ ಬದುಕುವ ಮಾರ್ಗವನ್ನು ಸೂಚಿಸಿದೆ. ತನ್ನ ಸ್ವಭಾವಕ್ಕೆ ಸರಿದೂಗುವ, ವ್ಯರ್ಥ ಸಮಯ ಕಳೆಯದ, ತನಗೆ ಸಕಾರಾತ್ಮಕ ಫಲನೀಡುವ ಸಮೂಹದಲ್ಲೆ ಸಹಭಾಗಿಯಾಗಿರುತ್ತಾಳೆ, ಸಮಯ ಕಳೆಯುತ್ತಿರುತ್ತಾಳೆ. ಸಮಯಕ್ಕೆ ನಾವು ಬೆಲೆ ಕೊಟ್ಟರೆ ಸಮಯ ನಮಗೆ ಬೆಲೆ ನೀಡುತ್ತದೆ, ಅದು ವ್ಯರ್ಥ ಹೋಗುವುದಿಲ್ಲ. ನಮ್ಮನ್ನು ಯಾವಾಗಲೂ ಸಂತಸದಿಂದ, ನೆಮ್ಮದಿಯಿಂದ ಬದಕಲು ಸಹಕರಿಸುತ್ತದೆ. ಹೆಣ್ಣುಮಕ್ಕಳಲ್ಲಿ ಇರುವ ಹವ್ಯಾಸಗಳನ್ನು ಪರಿಗಣಿಸಿದಾಗ, ಈಗಿನ ಆಧುನಿಕ ಜೀವನದಲ್ಲಿ ಗಂಡಸರನ್ನು ಹೆಣ್ಣಿಗೆ ಸಮಾನರಾಗಿರಲು ಸಾಧ್ಯವಿಲ್ಲ. ಶಾಂತಿ, ಸಹನೆ, ಕರುಣೆ, ಸಾಹಸಿ ಮತ್ತು ಧೈರ್ಯದಿಂದ ಸಹಕಾರಿಯಾಗಿ ನಿಲ್ಲುವ ಅಂಬಿಕೆ(ದುರ್ಗೆ) ಅಂದರು ತಪ್ಪಾಗಲಾರದು. ಒತ್ತಡದ ಬದುಕಿನಲ್ಲೂ ಸಹನೆಯಿಂದ ವರ್ತಿಸುವ ಮಹಾಮಾತೆಯಾಗಿರುವಳು. ನವರಾತ್ರಿಯ ನವರೂಪಗಳು ಆ ಅಂಬೆಗೆ ಹೇಗೆ ಬಂದಿದೆಯೋ ಅದೇ ಅವತಾರ ಪ್ರತಿ ಹೆಣ್ಣಿನಲ್ಲಿ ಗೌಪ್ಯವಾಗಿದೆ. ಜೀವನದಲ್ಲಿ ನೊಂದು ಬೆಂದು ಶಿಲೆಯಾದವಳು. ತನ್ನ ಪ್ರತಿಕಾರವನ್ನ ಆಯಾ ಸಮಯ ಸಂದರ್ಭವ ನೋಡಿಕೊಂಡು ಹೊರಹಾಕುತ್ತಾಳೆ. 
ಇದೇ ಸ್ವಾತಂತ್ರ್ಯದ ಪೂರ್ವದಲ್ಲಿ ಇರುವ ಹೆಣ್ಣುಮಕ್ಕಳು ಮತ್ತು ಈಗಿನ ಸಧ್ಯದ ಸಮಾಜದಲ್ಲಿ ಕಂಡು ಬರುವ ಹೆಣ್ಣುಮಕ್ಕಳಲ್ಲಿ ಅಜಗಜಾಂತರ ಬದಲಾವಣೆಯನ್ನ ಕಾಣುತ್ತಿದ್ದೇವೆ. ಆಗ ಪುರುಷ ಪ್ರಧಾನ ಸಮಾಜದೊಳಗೆ ಹೆಣ್ಣಿಗೆ ಸ್ಥಾನ ಮಾನ ಕಾಲಕೆಳಗೆ ಇತ್ತು. ಹೆತ್ತ ಮನೆಯಲ್ಲೂ ಮತ್ತು ಜವಾಬ್ದಾರಿ ಹೊತ್ತ ಮನೆ (ಗಂಡನ ಮನೆ)ಯಲ್ಲೂ ದಾಸಿಯಾಗಿ, ತನ್ನ ಆಸೆ ಆಕಾಂಕ್ಷೆಗಳನ್ನೆಲ್ಲ ಗಾಳಿಗೆ ತೂರಿ, ಕ್ಷಣಿಕ ಸಂತಸಕ್ಕಾಗಿ ಹಿಂಬಾಲಿಸುತ್ತಿದ್ದವಳು. ದೊಡ್ಡ ದೊಡ್ಡ ಕುಟುಂಬಗಳಲ್ಲಿ ಹೆಣ್ಣಿಗೆ ಉಸಿರು ತೆಗೆದುಕೊಳ್ಳಲು ಕಷ್ಟ. ಅಂದರೆ ಅಷ್ಟೊಂದು ಕೆಲಸದಲ್ಲಿ ನಿರತಳಾಗಿರುತ್ತಿದ್ದಳು. ಅವಳನ್ನು ಪ್ರೀತಿಸುವ ಹೃದಯಗಳು ಕಾಣುತ್ತಿರಲಿಲ್ಲ. ಈಗಲೂ ಪುರುಷ ಪ್ರಧಾನ ಸಮಾಜವಾಗಿದ್ದರೂ ಮಹಿಳೆಯರಿಗೆ ದೊರಕುವ ಸೌಲಭ್ಯಗಳಿಂದ ತನ್ನ ಬದುಕನ್ನು ಸುಂದರವಾಗಿ ತನ್ನ ಮನಸ್ಸಿನ ಕಲ್ಪನೆಗಳಿಗೆ ಸರಿದೂಗಿಸಿಕೊಂಡು ರೂಪಿಸಿಕೊಂಡು ಬದುಕುತ್ತಿದ್ದಾಳೆ. ಮುಖ್ಯವಾಗಿ ಶಿಕ್ಷಣದ ಸೌಲಭ್ಯ, ನಮ್ಮ ಸರ್ಕಾರದಿಂದ ಪುಕ್ಕಟೆಯಾಗಿ ಸಾಕಷ್ಟು ಶಿಕ್ಷಣ ಪಡೆಯುವ ಅವಕಾಶಗಳು ದೊರೆಯುತ್ತಿರುವುದರಿಂದ ಹೆಣ್ಣುಮಕ್ಕಳು  ಪ್ರತಿ ಹುದ್ದೆಯಲ್ಲಿ ತಮ್ಮ ಮೈಲುಗಲ್ಲು  ಸಾಧಿಸುತ್ತಿದ್ದಾರೆ. ಇನ್ನು ಚಿಕ್ಕ ಕುಟುಂಬ ಚೊಕ್ಕ  ಕುಟುಂಬವಾಗಿ ಸಮಯದ ಉಳಿತಾಯ ಮಾಡಿಕೊಂಡು ಹೆಣ್ಣು ತನ್ನ ಕಾರ್ಯಕ್ಷಮತೆಯನ್ನು ಬೆಳೆಸಿಕೊಂಡಿದ್ದಾಳೆ. ಸಹಧರ್ಮಿಣಿ, ಸಹಉದ್ಯೋಗಿ, ಸಹಪಾಠಿಯಾಗಿ ಪ್ರತಿ ಕ್ಷೇತ್ರದಲ್ಲೂ ಮುಂಚುಣಿಯಲ್ಲಿದ್ದಾಳೆ. ಗಂಡ ಹೆಣ್ಣಿಗೆ ಹೆಗಲು ಕೊಟ್ಟು, ಹೆಣ್ಣು ಗಂಡನಿಗೆ ಹೆಗಲು ಕೊಟ್ಟು, ಒಬ್ಬರಿಗೊಬ್ಬರು ಸಹಕರಿಸಿಕೊಂಡು ಜೀವನ ನಡೆಸುತ್ತಿರುವುದನ್ನು ಕಾಣುತ್ತಿದೆವೆ. ಎಲ್ಲಿ ಅಹಂ, ವ್ಯಾಮೋಹ, ಪ್ರತಿಸ್ಪರ್ಧಿಯೆಂಬ ಭಾವನೆಗಳು ಮನೆಮಾಡಿತ್ತವೆಯೋ ಅಂತಹ ಕುಟುಂಬಗಳಲ್ಲಿ ಕೌಟುಂಬಿಕ ಬಿರುಕುಗಳು ಕಾಣತೊಡಗುತ್ತವೆ. ಸಕಾರಾತ್ಮಕ ಚಿಂತನೆ ಸುಖ ಜೀವನಕೆ ಸನ್ಮಾರ್ಗದ ದಾರಿ ಕಲ್ಪಿಸುತ್ತದೆ. ಕುಟುಂಬದ ಕಣ್ಣಾಗಿ, ಸಮಾಜದೊಳಗೆ ಸಾಧಕಿಯಾಗಿರಬೇಕೆಂಬ ಮಹಿಳೆಯರ ಭಾವನೆ ಅಷ್ಟೇ ಅಲ್ಲ, ಅಂತಹ ಮಹಿಳೆಯರು ಮಹಿಳೆಯರಿಗೆ ಸ್ಪೂರ್ತಿಯಾಗುವುದನ್ನೂ ಕಾಣಬಯಸುತ್ತೆವೆ. ಹೆಣ್ಣು ಅಂದರೆ ಹೇಗಿರಬೇಕು?  ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ.
-ಶ್ರೀಮತಿ ಸುಲೋಚನಾ ಮಾಲಿಪಾಟೀಲ, ಧಾರವಾಡ