ಹಸಿರಿನ ತವರಾಗ ಹಳ್ಳಿಯ ಸೊಗಡು
ಮುಂಜಾವ ಹನಿದಾಗ ಹೊಂಗಿರಣ ನಾಡು
ಪ್ರಕೃತಿಯ ಬಿನ್ನಾಣ ಚೆಲುವಿನ ಬೀಡು
ವ್ಯವಸಾಯ ಭೂಮಿಯು ಫಲವತ್ತ ಕಾಡು
ಕೋಳಿಯು ಕೂಗ್ಯಾವ ಬೆಳದಿಂಗಳು ಹರಿದಾವ
ಏಳಯ್ಯ ಯಜಮಾನ ಹೊಲಮನೆ ನೋಡಯ್ಯ
ಕೊಟ್ಟಿಗೆ ಕರುವಿನ ಹಸಿವಿಗೆ ನೀಡಯ್ಯ
ಎತ್ತು ನೇಗಿಲ ಹೊತ್ತು ಭೂಮ್ತಾಯ ನೆನೆಯಯ್ಯ
ಯಜಮಾನಿ ಬೆಳಗೆದ್ದು ಹೊಸಿಲನು ತೊಳೆದಾಳ
ರಂಗೋಲಿ ಬಿಡಿಸಿ ದೇವನ ನೆನೆದಾಳ
ತುಳಸಿಗೆ ನೀರೆರೆದು ರವಿಯನು ನಮಿಸ್ಯಾಳ
ಅರಿಶಿನ ಕುಂಕುಮ ಗೋಗ್ರಾಸ ಗೋಮಾತೆಗೆ
ಮೈತೊಳೆದು ದೀಪವ ದೇವಗೆ ಬೆಳಗ್ಯಾಳ
ಬೆಳಗಿನ ಉಪಹಾರ ಸಿದ್ಧತೆ ಮಾಡ್ಯಾಳ
ಪತಿ ಬರುವ ಹೊತ್ತಿಗೆ ಬಿಸಿಬಿಸಿ ಊಟವಿಟ್ಟಾಳ
ಮಕ್ಕಳಿಗೆ ತಿಂಡಿಯ ಉಣಿಸುತ ಬಡಿಸುತ ಬೀಗ್ಯಾಳ
ಹಳ್ಳಿಯ ಗರತಿ ಮನೆತನದ ಮರ್ಯಾದೆ ಉಳಿಸ್ಯಾಳ
ಪತಿಯೊಡನೆ ಸಹಕರಿಸಿ ದುಡಿಯುತ ನಕ್ಕಾಳ
ಪಾಲಿಗೆ ಬಂದುದ ಪಂಚಾಮೃತವೆಂದು ತಿಳಿದುಕೊಂಡಾಳ
ಅಚ್ಚುಕಟ್ಟಾಗಿ ಜೀವನ ದಾರಿಯ ಅರಿತಾಳ
ಕಲ್ಮಷವಿಲ್ಲದ ನೆಲಮನೆಯಾಗ
ಪ್ರೀತಿ ಆದರದ ಮನವಿರುವಾಗ
ಕೊರತೆಯು ಕಾಣದ ಬಾಳುವೆಯಾಗ
ಅತಿಥಿ ಸತ್ಕಾರಗಳು ಸನ್ಮಾನದಾಗ
ಹಬ್ಬ ಹರಿದಿನ ಜೋರಾಗಿ ನಡೆದೈತೆ
ಕಜ್ಜಾಯ ಹೋಳಿಗೆ ಒಲಿಯಾಗ ಬೆಂದೈತೆ
ಹರಟೆ ಹಾಡು ಭೋಜನ ಸುಖವಾಗಿರತೈತೆ
ಎಲೆ ಅಡಿಕೆ ಸುಣ್ಣ ಪಟ್ಟಾಗಿ ಜಗಿದೈತೆ
ವಿಶಾಲದಂಗಳ ದೊಡ್ದ ಮನೆ ಸುತ್ತ ಹೂರಾಶಿ ಚೆಲ್ಲೈತೆ
ಮನಸಿಗೆ ಸಂತೋಷ ಆರೋಗ್ಯ ಭಾಗ್ಯ ವಿಲ್ಲೈತೆ
ನೆರಳಿನ ಸುಖವಿಲ್ಲಿ ಸಖ್ಯತೆ ಬದುಕಲ್ಲಿ ನಂಟಾಗೈತೆ
ಸರಳತೆ ಶುದ್ಧತೆ ಪರಿಸರವಿಲ್ಲಿ ಸಂಪದ್ಭರಿತವಾಗೈತೆ
ಜಾನಪದ ಸಂಸ್ಕೃತಿ ಸಂಸ್ಕಾರವಿಲ್ಲೈತೆ
ಹಳ್ಳಿಯ ಆಟದಿ ಮೋಜೈತೆ
ಬದುಕಿನ ಚಿತ್ರಣ ನೋಡುಗರ ಕಣ್ಣಿಗೆ ಹಬ್ಬವಾಗೈತೆ
ಹಳ್ಳಿಯ ಸುಂದರ ಭಾವನೆಯಲ್ಲಿ ಮನ ಹೂವಾಗೈತೆ
ತವರಿಗೆ ಹೋದಾಗ ಗದ್ದೆ ತೋಟಗಳು ಕೈ ಬೀಸೈತೆ
ಹೊಳೆ ತೆರೆ ಸಮುದ್ರ ಭೀಕರವಾಗಿ ಮನಸ ತಟ್ಟೈತೆ
ಖುಶಿಯಾಗಿ ನೆನಪಾಗಿ ಹಳೆಯ ಚಿತ್ರಣವೀಗ ಮೂಡೈತೆ
ಹಳ್ಳಿಯ ಜೀವನ ಚಂದವು ಅಂದವು ಎಂದೈತೆ
ಸೊಗಡಿಗೆ ಹಳ್ಳಿ ತೊಡರಲ್ಲಿ ಕಮ್ಮಿಯಾಗೈತೆ
ಶುದ್ಧದ ಸ್ವಚ್ಛದ ಆರಾಮ . ಜೀವವು ಅಲ್ಲೈತೆ
ಹಳ್ಳಿಯ ಬದುಕು ಮೊಗೆದೈತೆ ಹುರುಪು
ಸಹಕಾರ ಸಹಾಯ ಬಾಂಧವ್ಯವಿಲ್ಲಿ ಬೆಸೆದೈತೆ
-ಕಲ್ಪನಾ ಅರುಣ, ಶಿಕ್ಷಕರು, ಬೆಂಗಳೂರು