Table of Contents

ಒಳಿತು ಮಾಡು ಮಾನವ

ವಿಧಿ ಬರಹದ ಮುಂದೆ ಹರಿ ಹರ ಭ್ರಹ್ಮರೂ ಏನೂ ಮಾಡಲಾರರು! ಬ್ರಹ್ಮನನ್ನೇ ಬಿಡದ ಹಣೆಬರಹ ನಮ್ಮನ್ನು ಬಿಟ್ಟೀತೆ ಎಂಬ ಮಾತೊಂದನ್ನು ನಮ್ಮ ಹಿರಿಯರು ಹೇಳುವುದನ್ನ ಕೇಳಿರಲೂ ಸಾಕು. ಅಂದರೆ ಬ್ರಹ್ಮ ಸೃಷ್ಟಿ ಕಾರ್ಯಕ್ಕೂ ಮೊದಲು ವಿಧಿ ದೇವತೆಯನ್ನು ಸೃಷ್ಟಿ ಮಾಡುತ್ತಾನೆ. ಕಾರಣ ಎಲ್ಲಾ ಕಾರ್ಯಗಳಿಗೆ ಒಂದು ನಿಯಮವಿರಬೇಕಲ್ಲವೆ, ವಿಧಿದೇವತೆಯ ಸೃಷ್ಟಿ ಆದ ತಕ್ಷಣವೇ ಕಂಡದ್ದು ಬ್ರಹ್ಮ. ಆ ದೇವತೆಯ ಕೆಲಸವೇ ವಿಧಿ(ನಿಯಮ) ಬರೆಯುವುದು ಅದರಂತೆ ಸೃಷ್ಟಿಕರ್ತನಿಗೂ ಹಣೆ ಬರೆಹ ಬರೆದರು. ನೀನು ಸೃಷ್ಟಿ ಮಾಡಿದವಳನ್ನೇ ವಿವಾಹವಾಗು ಎಂದು. ಈ ಕತೆಯನ್ನು ನಮ್ಮ ಮನೆಗೆ ಬರುತ್ತಿದ್ದ ಗಣಪತಿ ಅಜ್ಜ ಹೇಳುತ್ತಿದ್ದರು. ಏನೇ ಆದರೂ ಆತ ಹೇಳುತ್ತಿದ್ದುದು ಇದೊಂದೆ ಮಾತು. “ಬ್ರಹ್ಮನನ್ನ ಬಿಡದ ಹಣೆಬರಹ ನಮ್ಮನ್ನ ಬಿಡುತ್ತದೆಯೇ”, ನನಗೆ ಈಗೀಗ ಅನಿಸುತ್ತದೆ ಆ ಹಿರಿಯ ಅನಕ್ಷರಸ್ಥನ ಅನುಭವದ ಮಾತು ಎಷ್ಟೊಂದು ಸತ್ಯ ಅಂತ.
ನಮ್ಮ ಜನ್ಮ ಜನ್ಮದ ಕರ್ಮ ಫಲಗಳೇ ಈ ಜನ್ಮದ ದುಃಖಕ್ಕೆ ಕಾರಣ. ಕಷ್ಟ ಬಂದಾಗ ಓ ದೇವರೇ ನನಗೇಕೆ ಇಷ್ಟು ಕಷ್ಟ ಎಂದು ಹೇಳುತ್ತೇವೆ. ಅಯ್ಯಾ ನೀ ಮಾಡಿದಾ ಕರ್ಮ ಬಲವಂತ ವಾದೊಡೆ ನಾ ಏನ ಮಾಡಲಿ ಎಂದು ಭಗವಂತ ಹೇಳುತ್ತಾನೆ. ಕಾರಣ ಇಲ್ಲದೆ ಯಾವ ಕಷ್ಟಗಳೂ ಮನುಷ್ಯನಿಗೆ ಆಗಲಿ ಜೀವಿಗಳಿಗೆ ಆಗಲಿ ಬರುವುದಿಲ್ಲ . ಜನ್ಮ ಜನ್ಮಾಂತರಗಳಲ್ಲಿ ಹಲವಾರು ಪಾಪಗಳನ್ನು ಮಾಡಿ ಈ ಜನ್ಮದಲ್ಲಿ ಹುಟ್ಡಿದಾಕ್ಷಣ ಹೊಸ ಹುಟ್ಟು ಬಂದಾಕ್ಷಣ ಎಲ್ಲಾ ಪಾಪ ಕರ್ಮಗಳೂ ಹೋಗಿ ಬಿಡುತ್ತದೆಯಾ..? ಅಯ್ಯಾ ನೀ ಇಂದು ಈ ಜನ್ಮದಲ್ಲಿ ಬಹು ವಿಧದ ಕಷ್ಟ ಅನುಭವಿಸುತ್ತಿದ್ದೀಯ ಎಂದರೆ ಅದು ಪೂರ್ವ ಜನ್ಮದ ಪಾಪದ ಕರ್ಮ ಫಲವಷ್ಟೇ ಅದಕ್ಕೆ ದೇವರನ್ನು ದೂರುವುದು ಎಷ್ಟು ಸರಿ. ಮಾಡಬಾರದ ಪಾಪ ಕೃತ್ಯಗಳನ್ನು ಮಾಡಿ ಸತ್ತು ಹೊಸ ಜನ್ಮ ಎತ್ತಿದೊಡೆ ಕರ್ಮ ಬೆನ್ನತ್ತಿ ಬರದೆ ಇರುತ್ತದೆಯಾ… ದಾರಿಯಲಿ ಭಿಕ್ಷುಕ ಹೆಳವ ಅನಾಥ ಅಂಗವಿಕಲರ ಕಂಡಾಗ ಕರುಳು ಚುರ್ರ್ ಎಂದು ಅಯ್ಯೋ ನಿಷ್ಕರುಣಿ ದೇವರೇ ನಿನಗೇ ದಯೆ ಎಂಬುದೇ ಇಲ್ಲವೇ ಇವರೆಲ್ಲಾ ಏನು ಮಾಡಿದ್ದರು ಇವರಿಗೆ ಇಷ್ಟು ಕಷ್ಟ ಯಾಕೆ ಎಂದು ದೇವರನ್ನು ದೂರುವವರೇ ಬಹಳ.
ಆದರೆ ಎಂದಾದರೂ ಒಮ್ಮೆ ಯೋಚಿಸಿದ್ದೀರಾ ಯಾಕೆ ಇವರಿವೆಲ್ಲಾ ಇಂತಹ ಜೀವನ ಎಂದು. ಕರ್ಮ ಫಲವಯ್ಯಾ ಕರ್ಮಫಲ ಅವರ ಹಿಂದಿನ ಜನ್ಮದಲ್ಲಿ ನಾನಾ ಪಾಪ ಕೃತ್ಯಗಳನ್ನು ಮಾಡಿರುತ್ತಾರೆ ಕೊಲೆ ದರೋಡೆ ಅತ್ಯಾಚಾರ ಅನಾಚಾರ ಮಾಡಿ ಈಗ ಈ ಜನ್ಮದಲ್ಲಿ ಇಂತಹ ರೂಪದಲ್ಲಿ ಜನಿಸಿ ತಮ್ಮ ಜನ್ಮಾಂತರಗಳ ಪಾಪಗಳನ್ನು ಕಳೆದು ಕೊಳ್ಳುತ್ತಾರೆ. ಅಯ್ಯಾ ದೇವರು ಸುಮ್ಮನೆ ಯಾರಿಗೂ ಕಷ್ಟ ಕೊಡುವುದಿಲ್ಲ. ಅಯ್ಯಾ ಅವರು ಮಾಡಿದ ಕರ್ಮಗಳ ಅನುಸಾರ ಅವರು ನಾನಾ ಕಷ್ಟಗಳನ್ನು ಅನುಭವಿಸುತ್ತಾರೆ. ಇದರಲ್ಲಿ ದೇವರು ನಿಷ್ಕರುಣಿ ಎಂದರೆ ಹೇಗೆ..?
ದುರುಳರು ಮಹಾ ಪಾಪ ಕಾರ್ಯ ಮಾಡಿ ಈಗ ಅಂಗವಿಕಲರಾಗಿ ಕುಂಟರಾಗಿ ಅನಾಥರಾಗಿ ಹುಟ್ಟಿ ಅನ್ನ ನೀರಿಗಾಗಿ ಅಲೆದಾಡಿದರೆ ಪಾಪ ಅನ್ನುವಿರಾ ಇನ್ನೂ ಸಾಯಲಿ ಎಂದು ಹನಿ ನೀರನ್ನೂ ಕೊಡುವುದಿಲ್ಲ. ಹಾಗೇಯೇ ಈ ಜನ್ಮದಲ್ಲಿ ಬಿಕಾರಿಗಳಾಗಿ ಜನಿಸಿ ಅವರ ಪಾಪ ವಿಮೋಚನೆ ಮಾಡಲು ಅಷ್ಟು ಕಷ್ಟ ಪಟ್ಟರೆ ಪಡಲಿ. ಅವರವರ ಕರ್ಮ ಅವರ ಬೆನ್ನ ಹಿಂದೆ. ಇದರಲ್ಲಿ ದೇವರ ತಪ್ಪು ಏನಿದೆ ನಿನ್ನ ಪಾಪ ಪುಣ್ಯಕ್ಕೆ ಅನುಸಾರವಾಗಿ ನೀನು ಕಷ್ಟ ಪಡಬೇಕು. ವಿಧಿ ಬರಹದ ಮುಂದೆ ಹರಿ ಹರ ಭ್ರಹ್ಮರೂ ಏನೂ ಮಾಡಲಾರರು. ದೇವರುಗಳು ಸಹ ಭೂಲೋಕದಲ್ಲಿ ಜನ್ಮ ವೆತ್ತಿ ಕರ್ಮ ಕಳೆದು ಕೊಂಡವರೇ. ರಾಮ ಸೀತೆ ಜನ್ಮ ತಾಳಿ ಅವರೇ ದೇವರಾಗಿದ್ದರೂ ಇಲ್ಲಿ ಬಂದು ನಾನಾ ನೋವು ಕಷ್ಟ ಎದುರಿಸಲಿಲ್ಲವೇ. ಯಾರಿಗಿಲ್ಲ ಕಷ್ಟ ಹೇಳಿ. ಪುಣ್ಯ ಬೇಕು ಎಂದರೆ ಒಳ್ಳೆಯ ಕೆಲಸ ಮಾಡಿ. ಒಬ್ಬರಿಗೆ ಸಹಾಯ ಏನೂ ಮಾಡದೆ ಸ್ವಾರ್ಥಿಯಾಗಿ ಬದುಕಿ ಈಗ ಸುಖ ಬೇಕು ಎಂದರೆ ಸಿಗುವುದಾ.
ಮಾನವ ಬುದ್ದಿ ಜೀವಿ ಮಾತು ಬರುವ ಏಕೈಕ ಜೀವಿ ಈ ಭೂಮಿ ಮೇಲೆ. ಭಾವನೆಗಳನ್ನು ಮಾತಿನಲ್ಲಿ ವ್ಯಕ್ತ ಪಡಿಸುವ ಜೀವಿ ಮಾನವ ಆಗಿದ್ದಾಗ ಒಬ್ಬರ ಕಷ್ಟ ಸುಖಗಳಲ್ಲಿ ಬೆರೆತು ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಪುಣ್ಯ ತಾನಾಗಿಯೇ ಲಭಿಸಿ ಜನ್ಮ ಜನ್ಮಗಳಲ್ಲಿ ಸುಖ ಸಂತೋಷ ನೆಮ್ಮದಿಯಿಂದ ಇರುತ್ತಾರೆ. ನಮ್ಮ ಒಳ್ಳೆಯದು ಕೆಟ್ಟದ್ದು ನಮ್ಮಲ್ಲಿಯೇ ಇದೆ ಎಂದಾಗ ದೇವರು ಹೇಗೆ ಕಾರಣ ವಾಗುತ್ತಾರೆ. ಕಾರಣ ವಿಲ್ಲದೆ ಯಾವ ಅವಘಡವೂ ನಡೆಯುವುದಿಲ್ಲ. ಅದು ವಿಧಿ ನಿಯಮ ತನ್ನ ಕಾರ್ಯ ತಾನೂ ಮಾಡಿಯೇ ಮಾಡುತ್ತದೆ. ಸಾವು ಪ್ರತಿ ಜೀವಿಗೂ ಒಂದಲ್ಲಾ ಒಂದು ದಿನ ಬರುತ್ತದೆ. ಇರುವ ವರೆಗೂ ಸಾಮರಸ್ಯದಿಂದ ಬದುಕಿ. ಒಳಿತು ಮಾಡು ಮಾನವ…. ನೀನು ಇರೋದು ಮೂರೆ ದಿವಸ. ಇರುವ ಮೂರುದಿವಸಗಳಲ್ಲಿ ನಾವೆಲ್ಲರೂ ಸತ್ಕಾರ್ಯಗಳನ್ನು ಮಾಡಿ ಆ ಭಗವಂತನ ಸಾಮಿಪ್ಯವನ್ನು ಪಡೆಯೋಣ.
✍️ ವಿಶ್ವಾಸ್. ಡಿ. ಗೌಡ, ಸಕಲೇಶಪುರ