ಅಲ್ಲಾ ಸ್ವಾಮಿ ನಾವು ಮಾಡಿದ ತಪ್ಪಾದರೂ ಏನು?  ನಮ್ಮ ಕರ್ತವ್ಯವನ್ನು ನಮ್ಮಿಂದಾದಷ್ಟು ನಿರ್ವಹಿಸಿಕೊಂಡು ಬಂದಿದ್ದೇವೆ. ಪರಿಸರದಲ್ಲಿ ನಿಮ್ಮೊಡನೆ ಹೊಂದಿಕೊಂಡು ಬದುಕುತ್ತಿದ್ದೇವೆ. ಅಂತಹ ನಮ್ಮ ಸಂತತಿಯನ್ನು ನಾಶ ಮಾಡಲು ಹೊರಟಿರುವಿರಲ್ಲ, ಇದು ಮಾನವರಾದ ನಿಮಗೆ ನಿಮಗೆ ನ್ಯಾಯ ಸಮ್ಮತವೇ?? ಇದು ಮಾನವೀಯತೆಯೇ??

Table of Contents

ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಇದು ಇದು ನಿಮ್ಮ ಹಿರಿಯರು  ಸಮಾಜದಲ್ಲಿ ನಮಗೆ ನೀಡಿದ,  ಅವರ ಅನುಭವದ ಮಾತು & ನಿಜವು ಕೂಡ. ಹೌದು, ನಾವು ಬೀದಿ ನಾಯಿಗಳು. ಪರಿಸರದಲ್ಲಿ ನಮ್ಮ ಕರ್ತವ್ಯ ನಿಭಾಯಿಸಿಕೊಂಡು ನ್ಯಾಯಯುತವಾಗಿ ಬದುಕುತ್ತಿದ್ದೆವು. ಅದರಿಂದಾಗಿಯೇ ನಮಗೆ ನಿಯತ್ತಿನ ನಾಯಿಗಳು ಎಂದು ಕರೆಯುತ್ತಿದ್ದರು. ಆದರೆ ಇಂದು ಆ ನಿಯತ್ತೇ ನಮ್ಮಲ್ಲಿ ಇಲ್ಲದಂತಾಗಿದೆ, ಪರಿಸರ ಅಸಮತೋಲನವಾಗಿದೆ. ಬೀದಿಗೆ ನ್ಯಾಯ ಒದಗಿಸುತ್ತಿದ್ದ ಬೀದಿ ನ್ಯಾಯಗಳು ನಾವು. ಬೀದಿಗಿಳಿದವರನ್ನು ಕಚ್ಚಿ ಸಾಯಿಸುವಂತಾಗಿದೆ. 
ಅಂದು ಅವಿದ್ಯಾವಂತರಾದನಿಮ್ಮ ಹಿರಿಯರು ಅವರು ತಿನ್ನುವ ಆಹಾರದಲ್ಲಿ ಕೊಂಚ ನಮಗೆ ನೀಡಿ, ನಮ್ಮನ್ನು ಬದುಕಿಸಿದರು ಅವರು ನಿಶ್ಚಿಂತೆಯಿಂದ ಬದುಕಿದರು. ನಾವು ಕೂಡ ಅವರು ನೀಡಿದ ಆಹಾರವನ್ನು ತಿಂದು ಅವರ ಮನೆ ಮತ್ತು ಬೀದಿಯನ್ನು ಕಾಯುತ್ತಿದ್ದೆವು. ಹಾಗಾಗಿ ಅವರು ನಿಶ್ಚಿಂತೆಯಿಂದ ನಿದ್ರೆ ಮಾಡುತ್ತಿದ್ದರು. ನಾವು ಇರುವುದರಿಂದಾಗಿಯೇ, ಎಷ್ಟೊ ಸಾರಿ ಕಳ್ಳತನ ವಾಗುವುದನ್ನು ತಡೆದಿದ್ದೇವೆ. ಹಾಗಾಗಿ ಕಳ್ಳತನ ದರೋಡೆ ಅನಾಚಾರಗಳು ಕಡಿಮೆಯಾಗುತ್ತಿತ್ತು.
ಆದರೆ ಪ್ರಜ್ಞಾವಂತರದ ನೀವು ಮಾಡುತ್ತಿರುದಾದರೂ ಏನು ಸ್ವಾಮಿ? ಸಾವಿರಾರು ರೂಪಾಯಿಗಳನ್ನು ಕೊಟ್ಟು  ವಿದೇಶಿ ತಳಿಯ ನಾಯಿಗಳನ್ನು ತಂದು ಸಾಕುತ್ತಿರುವಿರಿ. ಅವುಗಳಿಗೆ ಅನ್ನ ಆಹಾರಗಳನ್ನು ಪ್ರತ್ಯೇಕವಾಗಿ ಖರೀದಿಸುವಿರಿ, ಅನಾರೋಗ್ಯವಾದರೆ ಡಾಕ್ಟರ್ ಬಳಿಗೆ ಕರೆದುಕೊಂಡು ಹೋಗುವಿರಿ, ಅವುಗಳ ಲಾಲನೆ, ಪಾಲನೆ, ಒಂದು, ಎರಡು, ಎಲ್ಲವನ್ನೂ ನೀವೇ ಮಾಡುತ್ತಿರುವಿರಿ.  ಅವುಗಳನ್ನು ಒಂಟಿಯಾಗಿ ಬೀದಿಗಿಳಿಯದಂತೆ ನೀವೇ ಕಾಯುತ್ತಿರುವಿರಿ. ನಾಯಿಗಳೆಂದರೆ ಮನೆ ಕಾಯಲು ಇರುವ ಪ್ರಾಣಿಗಳು, ನೀವೇ ಅವುಗಳನ್ನು ಕಾಯುತ್ತಿರುವಿರಿ.
ಹೀಗೆ ನೀವು ವಿದೇಶಿ ತಳಿಯ ನಾಯಿಗಳನ್ನು ತಂದು ಸಾಕುತ್ತಿರುವುದರಿಂದ  ನಮ್ಮ ಪರಿಸ್ಥಿತಿ ತುಂಬಾ ವಿಷಾಧನೀಯವಾಗಿದೆ. ಇಂದಿನ ಬಹುತೇಕ ನಗರದ ಪರಿಸರದಲ್ಲಿ ನಮಗೆ ತಿನ್ನಲು ಆಹಾರವೇ ಸಿಗದಂತಾಗಿದೆ. ಕಸದ ತೊಟ್ಟಿಯಲ್ಲಿ ಬಿಸಾಡಿದ ಅಲ್ಪಸ್ವಲ್ಪ ಆಹಾರ ಸಿಕ್ಕರು ಅದು ವಿಷಪೂರಿತ, ಕಲಬೆರಿಕೆ, ಪ್ಲಾಸ್ಟಿಕ್  ಮಯವಾಗಿರುತ್ತದೆ. ಅಂತಹ ಆಹಾರವನ್ನು ತಿಂದ ನಮ್ಮ ದೇಹದಲ್ಲಿ   ಅಸಮತೋಲನ ಹೆಚ್ಚಾಗಿ ಹುಚ್ಚು ಹಿಡಿದು ಎಷ್ಟೋ ಕಂದಮ್ಮಗಳನ್ನು ಕಚ್ಚಿ ಸಾಯಿಸುವಂತಾಗಿದೆ, ದಾರಿ ಹೋಕರನ್ನು, ಬೀದಿ ವ್ಯಾಪಾರಿಗಳನ್ನು ಸಾರ್ವಜನಿಕರನ್ನು ಕಚ್ಚಿ ತೊಂದರೆ ಉಂಟು ಮಾಡುವಂತೆ ಮಾಡುವಂತಾಗಿದೆ ಎಂದರೆ ಪರಿಸರ ಸಮತೋಲನವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದರ್ಥ.
ಹಿಂದೆ ಯಾವ ಮನೆಗೆ ಹೋಗಿ ಬಾಲ ಅಲ್ಲಾಡಿಸಿದರು ಅವರು ತಿಂದು ಮಿಕ್ಕಿದ ಆಹಾರವನ್ನಾದರೂ ಹಾಕಿ ಸಲಹುತಿದ್ದರು.  ಆದರೆ, ಇಂದು ತಿಂದು ಮಿಕ್ಕಿದ ಆಹಾರಗಳನ್ನು ಫ್ರಿಜ್‌ಗಳಲ್ಲಿ ಇಟ್ಟು ಮರುದಿನ ತಿನ್ನುತ್ತಿದ್ದಾರೆ. ಇದರಿಂದಾಗಿ ನಮ್ಮ ಬೀದಿಗಳಲ್ಲಿ ನಮಗೇ ಆಹಾರಗಳಿಲ್ಲದಂತಾಗಿದೆ. ಸಿಕ್ಕಸಿಕ್ಕ ಆಹಾರವನ್ನು ತಿಂದು ಎಷ್ಟೊ ಬೀದಿನಾಯಿಗಳು ಸಾವನ್ನಪ್ಪಿವೆ. ಸ್ವದೇಶಿ ತಳಿಯ ನಾಯಿಗಳ ಸ್ಥಾನವನ್ನು ಅಂದರೆ ಬೀದಿ ನಾಯಿಗಳ ಸ್ಥಾನವನ್ನು ವಿದೇಶಿ ತಳಿಯ ನಾಯಿಗಳಿಗೆ ನೀಡಿ. ನಮಗೆ ಬದುಕುವ ಹಕ್ಕನ್ನೇ, ಇಲ್ಲದಂತಾಗಿ ಮಾಡಿದ್ದೀರಿ. ಇದಷ್ಟೇ ಅಲ್ಲ ಸಂತಾನ ಹರಣ ಮಾಡಿ, ನಮ್ಮ ಸಂತತಿಯನ್ನು ನಾಶ ಮಾಡಲು ಹೊರಟಿದ್ದೀರಿ. ಇನ್ನೂ ಶೋಚನೀಯ ವೆಂದರೆ ನಮ್ಮ ದೇಹದ ಮಾಂಸವನ್ನು, ಬಿಡದೆ ಬಿರಿಯಾನಿಯಾಗಿ ಮಾಡಿಕೊಂಡು ತಿನ್ನುತ್ತಿದ್ದಾರೆ ಹಲವರು. ಹೇಳಿ ಸ್ವಾಮಿ ನಾವು ಮಾಡಿದ ತಪ್ಪಾದರೂ ಏನು ನಮಗೆ ಭೂಮಿಯ ಮೇಲೆ ಬದುಕುವ ಹಕ್ಕಿಲ್ಲವೇ??
ಬೇರೆ ದೇಶದವರಿಗೆ ನಿಮ್ಮ ದೇಶವನ್ನು  ಬಿಟ್ಟು ಕೊಡುವಿರಾ??? ಮತ್ತೆ ನಮ್ಮ ವಿಷಯದಲ್ಲಿ ಮಾತ್ರ ಹೀಗೇಕೆ??? ಪ್ರಕೃತಿಯಲ್ಲಿ, ಎಲ್ಲಾ ಜೀವಿಗಳು ಪರಸ್ಪರ ಹೊಂದಿಕೊಂಡು ಬದುಕಿದಾಗ  ಮಾತ್ರ ಪರಿಸರ ಸಮತೋಲನ ಸಾಧ್ಯ. ತಿನ್ನುವ ಆಹಾರವನ್ನೇ ವಿಷಯವನ್ನಾಗಿ ಮಾಡಿದ್ದೀರಾ, ಮತ್ತದೇ ಆಹಾರವನ್ನು ನಿಮ್ಮ ಮಕ್ಕಳಿಗೆ  ತಿನ್ನುವಂತೆ ಮಾಡುತ್ತಿದ್ದಿರಾ..? ಇವುಗಳಿಗೆ ಕಾರಣ ನಿಮಗೆ ಹಣದ ಮೇಲಿರುವ ಅಮೋಘವಾದ ದುರಾಸೆ. ಈ ದುರಾಸೆಯಿಂದಾಗಿ ಬೆಳೆಯುವ ರೈತನನ್ನೇ ಕಡೆಗಣಿಸಿದ್ದೀರಾ. ಆತನಿಗೆ ಅನ್ನ ಬೆಳೆಯಲು ಅವಕಾಶ ಮಾಡಿಕೊಡಿ ಆತ, ಹೆಚ್ಚು ಹೆಚ್ಚು ಆಹಾರ ಬೆಳೆದಷ್ಟು  ಎಲ್ಲ ಜೀವಿಗಳಿಗೂ ಆಹಾರ ಸುಲಭವಾಗಿ ಸಿಗುತ್ತದೆ. ಆಹಾರ ಎಲ್ಲ ಜೀವಿಗಳಿಗೂ ಸುಲಭವಾಗಿ ಸಿಕ್ಕಾಗ ಕಲಬೆರಕೆ ಕಡಿಮೆಯಾಗುತ್ತದೆ. ಅನ್ನಾ ಆಹಾರಗಳು ಎಲ್ಲರಿಗೂ ಸುಲಭವಾಗಿ ಸಿಕ್ಕಾಗ ಕಳ್ಳತನ, ದರೋಡೆ, ಅನಾಚಾರಗಳು, ಸಮಾಜದಲ್ಲಿ ಕಡಿಮೆಯಾಗುತ್ತದೆ. ಆದ್ದರಿಂದ ರೈತರಿಗೆ ಬೆಳೆ ಬೆಳೆಯಲು ಪ್ರೋತ್ಸಾಹ ನೀಡಿ ಸಹಕರಿಸಿ. ಮರ-ಗಿಡಗಳನ್ನು ಬೆಳೆಸಿ, ಕಾಡನ್ನು ಉಳಿಸಿ. ಆಗ ಎಲ್ಲಾ ಪ್ರಾಣಿ, ಪಕ್ಷಿಗಳಿಗೂ, ಆಹಾರ ನೀಡಿದಂತೆ ಆಗುತ್ತದೆ. ಕಾಡಿನ ಪ್ರಾಣಿಗಳು ನಾಡಿಗೆ ಬರುವುದು ತಪ್ಪುತ್ತದೆ.
ಪ್ರಕೃತಿಯಲ್ಲಿ ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ, ಪರಸ್ಪರ ಸಕಲ ಜೀವರಾಶಿಗಳು ಹೊಂದಿಕೊಂಡು ಬದುಕಿದಾಗಲೇ ಪರಿಸರ ಸಮತೋಲನ ಸಾಧ್ಯ. ಭೂಕಂಪನ, ಸುನಾಮಿ, ಚಂಡಮಾರುತಗಳಂತಹ ಪ್ರಕೃತಿ ವಿಕೋಪಗಳಿಂದ ಜೀವರಾಶಿಗಳನ್ನು ಕಾಪಾಡಿಕೊಳ್ಳಲು ಹೆಚ್ಚು ಹೆಚ್ಚು ಕಾಡು ಬೆಳೆಸಬೇಕಾಗಿದೆ. ಕೇವಲ ನೀವು ಬದುಕುವುದಕ್ಕಾಗಿ, ಕಾಡು ಕಡಿದು, ಕಟ್ಟಡ ಕಟ್ಟುತ್ತಾ ಹೋದರೆ ವಿನಾಶವೇ ಸರಿ. ಕಾಡಿನ ಜೀವಿಗಳನ್ನು ನಾಡಿಗೆ ಬರುವಂತೆ ಮಾಡಿದ್ದೀರಾ..? ನಾಡಿನ ಜೀವಿಗಳನ್ನು ಕಾಡಿಗೆ ಹೋಗುವಂತೆ ಮಾಡಿದ್ದೀರಾ..? ಮುಂದೊಂದು ದಿನ ಇಡೀ ಭೂಮಿಯ ಮೇಲೆ ಎಲ್ಲಾ ಜೀವರಾಶಿಯನ್ನು ಬಿಟ್ಟು, ಕೇವಲ ಮನುಕುಲವೊಂದೇ ಬದುಕಬೇಕು ಎಂದರೆ ಅದು ಮನುಕುಲದ ಅಂತ್ಯವೇ ಸರಿ. ಇನ್ನಾದರೂ ಎಲ್ಲ ಜೀವಿಗಳನ್ನು ಬದುಕಲು ಬಿಡಿ, ನೀವು ಬದುಕಿ. ಪ್ರಕೃತಿ ವಿರುದ್ಧ ಬೀದಿ ನ್ಯಾಯಿಗಳು.