Table of Contents

ಹೆತ್ತ ತಾಯಿ ಸತ್ತ ಮ್ಯಾಗ

ಹೆಗಲ ಮ್ಯಾಲೆ ಹೊತ್ತ ವೈಯ್ತಾರ

ಗೋರಿ ಮುಂದ ಕುಂತ ಅತ್ತರೇನ

ಹೆತ್ತ ತಾಯಿ ಮರಳಿ ಬರ್ತಾಳಾ..? ||ಪಲ್ಲವಿ||

ಪತಿಯೇ ಪರಮೇಶ್ವರನೆಂದು ತಿಳಿದು ಬಾಳಿ

ರಾತ್ರಿ-ಹಗಲೆನ್ನದೆ ಕಷ್ಟದಾಗ ಕೈ ತೊಳೆದಾಕಿ

ಗಂಡ ಸತ್ತ ಮೂರು ತಿಂಗಳಾಗ ಹೆತ್ತಾಳ ಮಗನ

ಸುಖದ ಸುಪ್ಪತ್ತಿಗೆ ಮ್ಯಾಗ ಬೆಳಸ್ಯಾಳ ಅವನ ||೧||

 

ಸಾಲ ಮಾಡಿ ಅಂದದ ಮನಿ ಕಟ್ಟಿ

ಮಗನ ಕೈಗಿ ಚೆಂದದ ಸೊಸೆಯ ನಿಟ್ಟಾಳ

ಸೊಸೆ ಬಂದ ಮರುಗಳಿಗ್ಯಾಗ

ವೈಮನಸ್ಸು ಮೂಡ್ಯಾವ ಯಾರಿಗೂ ತಿಳಿಯದ್ಹಂಗ ||೨||

 

ಹೆಂಡ್ತಿ ಗುಲಾಮನಾಗಿ ಊರಾಗ ತಿರಗ್ಯಾನ

ಎತ್ತ ನೋಡಿದರತ್ತ ದುಷ್ಟರ ಸಂಘ ಮಾಡ್ಯಾನ

ಹೆತ್ತ ಕರುಳ ಮರೆತು ಕಾಲ ಕಳಿಯ್ತಾನ

ತಿಳಿದು-ತಿಳಿಯದ್ಹಂಗ ತುಳಿದು ಹೋಗ್ತಾನ ||೩||

 

ಹೆತ್ತ ತಾಯಿ ಹಾಸಿಗೀಯ ಹಿಡದಾಳ

ಹೆಂಡ ಕುಡಿದ ಮಗನ ಬೈಗುಳ ಕೇಳ್ಕೊಂತ

ನಟ್ಟ-ನಡು ಓಣ್ಯಾಗ ನಿಂತ ಸೊಸೆ ಹೇಳ್ತಾಳ

ಅತ್ತಿ-ಮಗನ ಕಲಾಗ ಜೀವನ ಬ್ಯಾಸರಾಯ್ತ ||೪||

 

ಹೆತ್ತ ಕರುಳ ಹೊತ್ತಿ ಉರಿತೈತಿ

ನಡು ಬೀದಿಯೊಳ್ಗ ನಿಂತ ಬಿಕ್ಕಿ-ಬಿಕ್ಕಿ ಅಳತೈತಿ

ಯ್ಯಾಕಾರ ಹುಟ್ಟಿದ್ನಿ ಈ ಭೂಮಿ ಮ್ಯಾಗಂತ

ಭಾರವಾದ ಜೀವ ಗೋರೀಯ ನೆನಸೈತಿ ||೫||

 

ಮಗನ ನೆನೆಸಿ ಗೋಳ್ಯಾಡಿ ಅಳ್ಕೊಂತ

ಮನದಾಗ ಮರುಗ್ಯಾಳ, ತನ್ನ ಕಷ್ಟ

ಮಗನೀಗಿ ಬಾರದಿರಲಿ ಅಂತ

ದೇವರಿಗಿ ಕೈ ಮುಗಿದು ರೆಪ್ಪೆಯ ಮುಚ್ಚ್ಯಾಳ ||೬||

 

ಬಾಕಿ ಇರುವ ಲೆಕ್ಕಾ ಚುಕ್ತಾ ಮಾಡಿ

ಹೊಂಟಾಳ ತಾಯಿ ಮಗನ ಹರಿಸಿ

ಕರುಳ-ಬಳ್ಳಿಯ ಬಳಗ ನೋಡಿ

ಕಣ್ಣೀರ ಸುರಿಸ್ತಾನ ಸತ್ತ ತಾಯಿ ನೆನಸಿ ||೭||

 

ಹೆತ್ತ ತಾಯಿನ್ನ ಹೊತ್ತ ವೈಯ್ತಾರ

ನಟ್ಟ-ನಡು ಓಣ್ಯಾಗ ಹಾಸಿ

ಸುತ್ತಲೆಲ್ಲಾ ನಿಂತ ನೋಡತೈತಿ ಮಂದಿ

ತಿಳಿಯ್ದಾಗೈತಿ ಹುಟ್ಟು-ಸಾವಿನ ನಡುವೆನೈತಿ ||೮||

 

ಮನಿಗಿ ಬಂದ ಮಂದಿ ಮಗ-ಸೊಸಿಯ ನೋಡಿ

ತಿಳಿದು-ತಿಳಿಯದ್ಹಂಗ ತುಳಿದು ಹೊಂಟಾರ

ಮಂದ ಬುದ್ಧಿ ಎರಚಿದ ದುಷ್ಟರ ನೋಡಿ

ಹೆತ್ತ ಕರುಳ ನೆನೆಸಿ ಹೊಸ್ತಿಲ ಮ್ಯಾಗ ಕುಂತ ಅಳ್ತಾರ ||೯||

 

-✍️ ಲಾಲಸಾಬ ಹುಸ್ಮಾನ ಪೆಂಡಾರಿ

            ಜಿಲ್ಲಾಧ್ಯಕ್ಷರು: ಕಸ್ತೂರಿ ಸಿರಿಗನ್ನಡ ವೇದಿಕೆ-ವಿಜಯಪುರ