A        ಒಂದು ದಿನ ಮಧ್ಯಾಹ್ನದ ಊಟ ಮುಗಿಸಿ ಗ್ರಂಥಾಲಯದಲ್ಲಿ ಪತ್ರಿಕೆ ಓದ್ಬೇಕು ಅಂತ ಪತ್ರಿಕೆ ತಗೊಂಡು ಖುರ್ಚಿ ಮೇಲೆ ಕುಳ್ತಕೊಂಡೆ. ಇನ್ನೇನೂ ಪತ್ರಿಕೆ ಬಿಚ್ಚಿ ಓದ್ಬೇಕು ಎನ್ನುವಷ್ಟರಲ್ಲಿ ಇಬ್ಬರು ವಿದ್ಯಾರ್ಥಿಗಳು ಧಾವಿಸಿ ಬಂದು ಸರ್ ಒಂದು ಪ್ರಶ್ನೆ ಎಂದರು. ಸರಿ ಕೇಳಿ ಅಂದೆ. ಪ್ರಶ್ನೆ ಸರಳವಾಗಿದ್ದರು ಬಹಳ ಅರ್ಥಗರ್ಭಿತವಾಗಿತ್ತು.  ಸರ್ ಅನಾದಿಕಾಲದಲ್ಲಿ ಗೆಡ್ಡೆ-ಗೆಣಸು ತಿಂದು ಅಳೆಯುತ್ತಿದ್ದ ಮಾನವ ಇಂದು ಐಷಾರಾಮಿ ಜೀವನ ಸಾಗಿಸಲು ಕಾರಣವೇನು..? ವಿಶಾಲವಾದ ಈ ಭೂಮಿ ಮೇಲೆ ಅಸಂಖ್ಯ ಜೀವ-ಸಂಕುಲಗಳಿದ್ದರು ಕೇವಲ ಮಾನವನಷ್ಟೇ ಏಕೆ ಕ್ಷಣ-ಕ್ಷಣಕ್ಕೂ ವೇಗವಾಗಿ ಸಾಗುತ್ತಿದ್ದಾನೆ..? ಪ್ಲೀಸ್ ಹೇಳಿ ಸರ್ ಎಂದು ಇಬ್ಬರು ಒಟ್ಟೊಟ್ಟಿಗೆ ಪ್ರಶ್ನೆಗಳನ್ನು ಕೇಳಿದರು. ಅವರಿಬ್ಬರಲ್ಲಿರುವ ಜ್ಞಾನ-ದಾಹದ ಆತುರತೆಯನ್ನು ಕಂಡು ಕುಳಿತ್ಕೊಳ್ಳಿ ಹೇಳುವೆ ಎಂದೆ. ಅಷ್ಟರಲ್ಲಿ ಗ್ರಂಥಾಲಯದ ಶಿಕ್ಷಕರು ಕೂಡ ಊಟ ಮುಗಿಸಿ ನಮ್ಮ ಬಳಿ ಬಂದು ಕುಳಿತುಕೊಂಡ್ರು. ಒಂದು ಕ್ಷಣ ಹೊರ್ಗಡೆ ನೋಡ್ದೆ, ಊಟಾ ಮಾಡಿದ ಮಕ್ಕಳು ಒಬ್ಬರಿಗೊಬ್ಬರು ಮಾತನಾಡುತ್ತ ಸುತ್ತಾಡ್ತಿದ್ರು. ಸುತ್ತಲೂ ಗದ್ದಲ ಆವರಿಸಿತ್ತು.

        ನೋಡಿ ಮಕ್ಕಳೇ ತಾವು ಹೇಳಿದ ಹಾಗೆ ಈ ಭೂಮಿ ಮೇಲೆ ಅಸಂಖ್ಯ ಜೀವ-ಸಂಕುಲಗಳಿವೆ.  ಮಾನವ ಹೇಗೆ ಜನಿಸುತ್ತಾನೆಯೊ ಅದೇ ರೀತಿ ಪಶು-ಪಕ್ಷಿಗಳು; ಗಿಡ-ಮರಗಳು ಕೂಡ ಜನಿಸುತ್ತವೆ. ವಿಕಾಸ ಹೊಂದುತ್ತವೆ. ಬೆಳೆವಣಿಗೆಗೆ ತಕ್ಕಂತೆ ಬದಲಾಗುತ್ತ ಸಾಗುತ್ತವೆ. ಒಂದು ದಿನ ಮಾನವನಂತೆಯೇ ಪಶು-ಪಕ್ಷಿಗಳು ಸತ್ತೋಗ್ತವೆ. ಗಿಡ-ಮರಗಳು ಒಣಗೊಗ್ತವೆ. ಇದೆಲ್ಲ ಪ್ರಕೃತಿಯ ನಿಯಮ. ತಮಗೆಲ್ಲ ಗೊತ್ತಿರುವ ಸಂಗತಿ.

        ಆದರೆ ಬುದ್ಧಿವಂತ ಮಾನವ ಇಂದು ಪಶು-ಪಕ್ಷಿ; ಗಿಡ-ಮರಗಳನ್ನು  ತನ್ನ ಸ್ವಂತಕ್ಕಾಗಿ ಬಳಸಿಕ್ಕೊಳ್ಳುತ್ತಿದ್ದಾನೆ. ಆಕಾಶದಲ್ಲಿ ಹಾರಾಡುತ್ತಿದ್ದಾನೆ. ಚಿಕ್ಕ ಕೋಣೆಯೊಳಗೆ ಕುಳಿತುಕೊಂಡು ಇಡೀ ವಿಶ್ವವನ್ನು ಅಂಗೈಯಗಲ ಮೊಬೈಲ್’ನಲ್ಲಿ ವೀಕ್ಷಿಸುತ್ತಿದ್ದಾನೆ. ಇದಕ್ಕೆಲ್ಲ ಕಾರಣ ಅವನು ಆವಿಷ್ಕಾರಿಸಿದ ಲಿಪಿಯನ್ನೊಳಗೊಂಡ ಭಾಷೆ. ಇವರೇ ಗೌತಮ ಬುದ್ದರು; ಇವರೇ ಮಹಾವೀರರು ಎಂದು ಇಂದು ನಾವು ಹೇಗೆ ಗುರುತಿಸುತ್ತೇವೆ? ನಾವೇನು ಅವರನ್ನ ನೋಡಿದ್ವಾ? ಎಂದು ಕೇಳಿದಾಗ ಇಲ್ಲ ಸರ್ ಎಂದು ಇಬ್ಬರು ತಲೆ ಅಲ್ಲಾಡಿಸಿದರು. ಇದಕ್ಕೆಲ್ಲ ಕಾರಣ ಚಿತ್ರಲಿಪಿ ಎಂದು ಬಿಡಿಸಿ ಹೇಳಿದೆ. ಅಷ್ಟೇ ಅಲ್ಲ ಇಂದು ನಾವು ರಾಮಾಯಣ-ಮಹಾಭಾರತ; ಕುರಾನ್-ಬೈಬಲ್ ಹೀಗೆ ಹತ್ತು ಹಲವಾರು ಧರ್ಮ ಗ್ರಂಥಗಳನ್ನು ಆಯಾ ಧರ್ಮಕ್ಕನುಸಾರವಾಗಿ ಪಠಿಸುತ್ತೇವೆ. ಜಪಿಸುತ್ತೇವೆ. ನಾವೇನು ರಾಮನನ್ನು ನೋಡಿದ್ವಾ? ಇಲ್ಲ ತಾನೆ..? ಈ ಚಿಕ್ಕ ವಿವರಣೆಯ ನಂತರ ಮಾನವ ಇಂದು ಆಧುನಿಕ ಕಾಲಕ್ಕೆ ಕಾಲಿಡಲು ಅತಿ ಮುಖ್ಯ ಕಾರಣ ಏನು? ನೀವೇ ಹೇಳಿ ನೋಡೋಣ ಎಂದೆ. ವಿವರಣೆಯನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡ ಮಕ್ಕಳು ‘ಭಾಷೆ’ ಎಂದು  ಹೇಳಿದರು. ಇನ್ನೇನು ಉತ್ತರ ಸಿಕ್ಕ ಖುಷಿಯಲ್ಲಿ ಥ್ಯಾಂಕ್ಸ್ ಸರ್ ಎಂದು ಉದ್ಗಾರ ತೆಗೆಯುವಷ್ಟರಲ್ಲಿ ಘಂಟೆ ಶಬ್ಧ ಕೇಳಿಸಿದಂತಾಯಿತು. ಕ್ಲಾಸಿಗೆ ಹೋಗಿ ಮಕ್ಕಳೇ ಎಂದು ಎದ್ದು ನೋಡಿದ್ರೆ, ಅದು ಶಾಲೆಯಲ್ಲಿರುವ ಘಂಟೆಯ ಶಬ್ಧವಲ್ಲ. ಮೊಬೈಲ್ನಲ್ಲಿರುವ ಅಲ್ಲಾರಂ ಶಬ್ಧವಾಗಿತ್ತು.

✍✍ ಲಾಲಸಾಬ ಹುಸ್ಮಾನ ಪೆಂಡಾರಿ | ಕಾವ್ಯನಾಮ: ಕವಿತ್ತ ಕರ್ಮಮಣಿ