ಅಭಿಲಾಷೆ (ಕಾದಂಬರಿ ಭಾಗ – 02)

ಸಂಚಿಕೆ -17

ಹಿಂದಿನ ಸಂಚಿಕೆಯಲ್ಲಿ

ಇನ್ಸ್ ಪೆಕ್ಟರ್ ರವರು ಮೈಸೂರಿನ ಯುವಕನ ಮನೆಗೆ ಬಂದು ವಿಚಾರಣೆ ಮಾಡುತ್ತಿರುವಾಗ, ಆ ಮನೆಯ ಯಜಮಾನ ನನ್ನ ಮಗ ಹೋಗಿ ವರ್ಷವಾಯ್ತು ಸಾರ್ ಎಂದು ಅಳುತ್ತಾ ಹೇಳಿದಾಗ
ನಿಮ್ಮ ಹುಡುಗ ಎಲ್ಲಿಗೆ ಹೋದನೆಂದು ಇನ್ಸ್ ಪೆಕ್ಟರ್ ಕೇಳುತ್ತಾರೆ

ಕಥೆಯನ್ನು ಮುಂದುವರೆಸುತ್ತಾ

ನಿಮ್ಮ ಹುಡುಗ ಎಲ್ಲಿ ಹೋದನೆಂದು ಇನ್ಸ್ ಪೆಕ್ಚರ್ ಕೇಳಲು
ಇನ್ನೆಲ್ಲಿ ಹೋಗುತ್ತಾನೆ? ಪರಲೋಕಕ್ಕೆ ಹೋದನೆಂದು ಕಣ್ಣೊರಸಿಕೊಂಡಾಗ
ಐ ಆಮ್ ಸಾರಿ ಯಜಮಾನರೇ, ಏನಾಗಿತ್ತು ಎಂದು ಕೇಳಬಹುದಾ ಎಂಬ ಇನ್ಸ್ ಪೆಕ್ಟರ್ ಪ್ರಶ್ನೆಗೆ
ಅವನ ಅಕ್ಕನ ಮನೆಗೆ ಹೋಗಿದ್ದ ಮನೆಯಲ್ಲೇ‌ ಕುಸಿದು ಬಿದ್ದ‌ ಅಲ್ಲೇ ಅವನ ಪ್ರಾಣ ಪಕ್ಷಿ ಹಾರಿಹೋಗಿತ್ತು, ಅಲ್ಲೇ ಕಾರ್ಯ ಮುಗಿಸಿ ಬಂದೆವು ಎಂದು ಹೇಳುತ್ತಾರೆ.
ನಿಮ್ಮ ಮಗಳ‌ ಮನೆ ಎಲ್ಲಿದೆ? ಅವರ ವಿಳಾಸ‌ ಕೊಡಿರೆಂದು ಇನ್ಸ್ ಪೆಕ್ಟರ್ ಕೇಳಲು
ನನ್ನ ಮಗಳು ಬೆಂಗಳೂರಿನಲ್ಲಿದ್ದಾಳೆಂದು ಮನೆಯ ಯಜಮಾನ ಮಗಳ‌‌ ವಿಳಾಸ‌ ಕೊಟ್ಟಾಗ
ಓಕೆ ನಿಮ್ಮ ಮಗ ಬದುಕಿದ್ದರೆ ಚೆನ್ನಾಗಿರುತ್ತಿತ್ತೆಂದು ಹೇಳಿ ತಮ್ಮ ಸಿಬ್ಬಂದಿ ಇರುವಲ್ಲಿಗೆ ಬಂದು ಫೋನ್ ಮಾಡಿದ್ದ ಯುವಕನನ್ನು ನೀವು ಹೋಗಬಹುದೆಂದು ಹೇಳಿ ಸೀದಾ‌ ಸ್ಟೇಷನ್ ಗೆ ಬರುತ್ತಾರೆ
ಅಂದೇ ಸಂಜೆಯೇ ಮೈಸೂರಿನವರು ನೀಡಿದ್ದ ವಿಳಾಸದ ಮನೆಗೆ ಬಂದು ವಿಚಾರಿಸಿದಾಗ
ನಮ್ಮ ಮನೆಯಲ್ಲಿ ಸಾಗರ್ ಮೃತಪಟ್ಟಿದ್ದು ನಿಜವೆಂದು ಹೇಳಿ ಯಜಮಾನರ ಮಗಳು ಮರಣ ಪತ್ರ ನೀಡಿದಾಗ
ಓಕೆ ನಿಮಗೆ ತೊಂದರೆ ಕೊಟ್ಟಿದ್ದಾಯ್ತೆಂದು ಹೇಳಿ‌ದ ನಂತರ
ಇನ್ಸ್ ಪೆಕ್ಟರ್ ರವರು ಕೋದಂಡರಾಮ್ ರವರಿಗೆ ಫೋನ್ ಮಾಡಿದಾಗ
ಕೋದಂಡರಾಂ ರವರು ಉತ್ಸುಕದಿಂದ ನಮ್ಮ ಮಗ ಸಿಕ್ಕಿದ್ನಾ ಸಾರ್ ಎಂದು ಪ್ರಶ್ನಿಸಲು
ನೀವು ನಿಮ್ಮ ಮನಸ್ಸು ಗಟ್ಟಿ ಮಾಡಿಕೊಂಡು ಕೇಳಿ ಎಂಬ ಇನ್ಸ್ ಪೆಕ್ಟರ್ ಮಾತಿಗೆ
ಅಲ್ಲಿಯವರೆಗೂ ಸಮಾಧಾನ ದಿಂದ ಮಾತನಾಡುತ್ತಿದ್ದ ಕೋದಂಡರಾಂ ರವರು. ಅಯ್ಯೋ ನನ್ನ ಮಗನಿಗೆ ಏನಾಯ್ತು ಸಾರ್ ಎಂದು ದುಃಖದಿಂದ ಕೇಳಲು
ಮೈಸೂರಿನವರು ಹೇಳಿದ ವಿಷಯವನ್ನು ಕೋದಂಡರಾಮ್ ಗೆ ಇನ್ಸ್ ಪೆಕ್ಟರ್ ತಿಳಿಸಿದಾಗ
ಕೋದಂಡರಾಮ್ ರವರು ಏನ್ ಸಾರ್ ಹೇಳುತ್ತಿದ್ದೀರೀ? ನಮ್ಮ ಮಗ ಸಿಕ್ಕಿದ ಎಂದುಕೊಂಡು ಸ್ವಲ್ಪ ಸಮಾಧಾನ ದಿಂದ ಇದ್ದೆ, ಈ ಸುದ್ದಿ ನನ್ನ ಜಂಘಾಬಲವನ್ನೇ ಉಡುಗಿಸಿದೆ ಎಂದು ಹೇಳಿ ಜೋರಾಗಿ ಅಳಲು ಶುರುಮಾಡುತ್ತಾರೆ.
ಗುರುಗಳೇ ,,,, ಗುರುಗಳೇ ಸ್ವಲ್ಪ ಸಮಾಧಾನ ಮಾಡಿಕೊಳ್ಳಿ ಎಂದು ಇನ್ಸ್ ಪೆಕ್ಟರ್ ಹೇಳಿದಾಗ
ಎಲ್ಲಿಯ ಸಮಾಧಾನ ಇನ್ಸ್ ಪೆಕ್ಟರ್ ? ಐದು ವರ್ಷದವನಿದ್ದಾಗಲೇ ಹೋದನೆಂದು ಹೇಳಿದ್ರೀ ಆಗ ಹೇಗೋ ಸಮಾಧಾನ ಮಾಡಿಕೊಂಡೆವು. ಈಗ ಆ ಸುದ್ದಿ ಸುಳ್ಳೆಂದುಕೊಂಡು ಸಮಾಧಾನದ ನಿಟ್ಟುಸಿರು ಬಿಟ್ಚಿದ್ದೆವು. ಮೈಸೂರಿನಿಂದ ಪುೋನ್ ಬಂದಾಗ, ಮಗ ಬದುಕಿರುವನಲ್ಲಾ ಎಂದು ಪುನಃ ಮನಸ್ಸಿನಲ್ಲಿ ಆಸೆ ಚಿಗುರಿತ್ತು,ಈಗ ನನ್ನ ಎದೆಯೊಡೆಯುವಂತಹ ಭಯಂಕರ ಸುದ್ದಿ ಹೇಳಿದ್ದೀರಿ ಎಂದು ಗಳಗಳನೆ ಅಳುತ್ತಿರುವಾಗ
ಗುರುಗಳೇ ದಯವಿಟ್ಚು ಸಮಾಧಾನ ಮಾಡಿಕೊಳ್ಳಿ, ನಾನೇ ಬಂದು ಹೇಳೋಣವೆಂದುಕೊಂಡಿದ್ದೆ, ಸಮಯ ಇಲ್ಲದಿರುವುದರಿಂದ ಫೋನ್ ಮಾಡಿ ಹೇಳಿದೆ. ಗುರುಗಳೇ ಸಮಾಧಾನ ಮಾಡಿಕೊಳ್ಳಿರೆಂದು ಪರಿಪರಿಯಾಗಿ ಇನ್ಸ್ ಪೆಕ್ಟರ್ ಹೇಳಲು
ಆಯ್ತು ಸಾರ್ ಈಗ ಎಷ್ಟು ಅತ್ತರೂ ಏನೂ ಪ್ರಯೋಜನವಿಲ್ಲ. ನನಗೆ ನಾನೇ ಸಮಾಧಾನ ಮಾಡಿಕೊಳ್ಳಲೇಬೇಕೆಂದು ಹೇಳಿ ಫೋನ್ ಆಫ್ ಮಾಡಿ, ಚಿಂತಾಕ್ರಾಂತರಾಗಿ ಕುಳಿತಿರುವಾಗ
ಅವರ ಪತ್ನಿ ಬಂದು ಏಕೆ ಆಕಾಶ ಬಿದ್ದವರಂತೆ ಚಿಂತೆಯಲ್ಲಿ ಕುಳಿತಿದ್ದೀರೀ ಎಂದು ಪ್ರಶ್ನಿಸಲು
ಇನ್ನೇನು ಉಳಿದಿದೆ ಎಲ್ಲಾ ಮುಗಿದುಹೋಯ್ತು ಕಣೇ ಎಂಬ ಕೋದಂಡರಾಮ್ ರವರ ಮಾತಿಗೆ
ಏನಾಯ್ತು? ಏನು ಮುಗಿದೋಯ್ತು ಸರಿಯಾಗಿ ಹೇಳಿದರೆ ತಾನೇ ತಿಳಿಯೋದು ಎಂದು ಅವರ ಪತ್ನಿ ಕೇಳಿದಾಗ
ಕೋದಂಡರಾಂ ರವರು ಮಗನ ವಿಚಾರವನ್ನು ತಮ್ಮ ಪತ್ನಿಗೆ ಹೇಳಲು
ಇರುವ ಒಬ್ಬ ಮಗನನ್ನು ಎಷ್ಟು ಸಲ ಸಾಯಿಸುತ್ತಾರೆ? ಸ್ವಲ್ಪ ದಿನದ‌ ಹಿಂದೆ ಮಗುವಿದ್ದಾಗಲೇ ಹೋದ ಎಂದರು ಈಗ ದೊಡ್ಡವನಾದ‌ ಮೇಲೆ ಹೋದ ಎನ್ನುತ್ತಿದ್ದಾರೆ, ಯಾವುದನ್ನು ನಂಬುವುದು? ಯಾವುದನ್ನು ಬಿಡುವುದು? ಮಗನನ್ನು ಹುಡುಕಲು ನೀವು ಹೋಗಲೇಬಾರದಿತ್ತು ರೀ, ಎಲ್ಲೋ ಇದ್ದಾನೆಂದು ಸುಮ್ಮನಿದ್ದೆವು ಈಗ ನೋಡಿ ಪುತ್ರ ಶೋಕಂ ನಿರಂತರಂ ಎಂದು ಮಗನ ಬಗ್ಗೆ ದಿನವೂ ದುಃಖಿಸುವಂತಾಗಿದೆ ಎಂದು ಅವರ ಪತ್ನಿ ಹೇಳಲು
ನಾನೂ ಸುಮ್ಮನೆ ಇದ್ದೆ ಆದರೆ ಮಗಳಿಂದ ಇಷ್ಟೆಲ್ಲಾ ಆಯ್ತೆಂಬ ಕೋದಂಡರಾಂ ಮಾತಿಗೆ
ನೀವು ಬಾಯಿತಪ್ಪಿ ಮಗನ ವಿಚಾರ‌ ಮಗಳಿಗೆ ಹೇಳಿದ್ದೇ ತಪ್ಪಾಯಿತು. ಈಗ ಎಲ್ಲವೂ ಮಗಳಿಂದಲೇ ಆಗುತ್ತಿರುವುದು, ಮದುವೆ ಮಾಡದಿದ್ದರೆ ಇನ್ನೊಂದು ರಾದ್ಧಾಂತ ಮಾಡುತ್ತಾಳೆಂದು ಹೇಳಿ ಅವರ ಪತ್ನಿ ವಿಷಾಧಿಸಿದಾಗ
ಇರುವ ಒಬ್ಬ ಮಗಳು ಅವಳನ್ಮೂಕಳೆದುಕೊಳ್ಳಲು ಆಗುವುದಿಲ್ಲ.‌ಅವಳು ಯಾರನ್ನು ಒಪ್ಪುತ್ತಾಳೋ ಅವರಿಗೆ ಕೊಟ್ಟು ಮದುವೆ ಮಾಡಿ ಕಳಿಸೋಣ .ಆದರೆ ಆ ಹುಡುಗ ಸರಿಯಾಗಿದ್ದರೆ ಮಾತ್ರ ಒಪ್ಪುತ್ತೇನೆ. ಏನಾದರೂ ಸುಳ್ಳು ಕಪಟವೆಂದು ಕಂಡು ಬಂದರೆ ನಾನು ಖಂಡಿತಾ ಒಪ್ಪುವುದಿಲ್ಲವೆಂದು ಕೋದಂಡರಾಮ್ ಹೇಳಲು
ರೀ ಬೇಡಾ ರೀ ಏನೂ ಮಾತನಾಡಬೇಡ್ರೀ, ಮಗಳು ದುಡುಕಿ ಕೆಟ್ಟ‌ ನಿರ್ಧಾರ ತೆಗೆದುಕೊಂಡರೆ ಆ ದುಃಖವನ್ನು ಸಹಿಸಿಕೊಳ್ಳಲು ಆಗುವುದಿಲ್ಲವೆಂದು ಅವರ ಪತ್ನಿ ನುಡಿಯಲು
ಹಾಗಂತ ಕಳ್ಳ ಸುಳ್ಳನಿಗೆ ಮಗಳನ್ನು ಕೊಡಬೇಕಾ ಎಂದು ಕೋದಂಡರಾಮ್ ಪ್ರಶ್ನಿಸುತ್ತಾರೆ
ಆದಷ್ಟೂ ಅಪ್ಪ ಮಗಳು ಜಗಳ ಮಾಡಿಕೊಂಡು ನಿಷ್ಟೂರವಾಗುವುದು ಬೇಡ ರೀ ಎಂದು ಅವರ ಪತ್ನಿ ಹೇಳಿದಾಗ
ಕೋದಂಡರಾಂ ರವರು ಅಲ್ಲಿವರೆಗೂ ಬರಲಿ ನೋಡೋಣವೆನ್ನುತ್ತಾರೆ.
ಈಗ ಇನ್ನೊಂದು ವಿಚಾರ ಇದನ್ನು ನೀವು ಆಗುವುದಿಲ್ಲವೆಂದು ದಯವಿಟ್ಟು ಹೇಳಬೇಡರೀ ಎಂದು ಆಶಾಳ ಅಮ್ಮ ದೈನ್ಯತೆಯಿಂದ ಕೇಳಿದಾಗ
ಮೊದಲು ವಿಷಯ ಹೇಳು ಆಮೇಲೆ ನಿರ್ಧರಿಸೋಣವೆಂಬ ಕೋದಂಡರಾಮ್ ಮಾತಿಗೆ
ಇನ್ಸ್ ಪೆಕ್ಟರ್ ಮಗನ ವಿಚಾರ ಹೇಳಿದ್ರಲ್ಲಾ ಅವನು ,,,, ಎಂದಷ್ಟೇ ಹೇಳಿ ಮೌನವಾಗುತ್ತಾರೆ.
ಅವನು ಎಂದು ಹೇಳಿ ನಿಲ್ಲಿಸಿದರೆ ಹೇಗೆ ಅರ್ಥವಾಗಬೇಕು ಪೂರ್ತಿ ವಿಷಯ ತಿಳಿಸಬಾರದಾ ಎಂದು ಕೋದಂಡರಾಮ್ ಕೇಳಲು
ಮೈಸೂರಿನವರು ತಮ್ಮ ಮಗ ಹೋದನೆಂದು ಹೇಳಿದ್ರಲ್ಲಾ ಆ ದಿನಾಂಕ ಯಾವುದು ತಿಳಿದುಕೊಳ್ರಿ ವರ್ಷದ ಕಾರ್ಯವನ್ನಾದರೂ ಮಾಡಬಹುದೆಂದು ಕೋದಂಡರಾಮ್ ಪತ್ನಿ ಹೇಳಿದಾಗ
ಕೋದಂಡರಾಮ್ ರವರು ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ, ಇದೊಂದು ಬಾಕಿ ಇತ್ತು ಎನ್ನುತ್ತಾರೆ.
ಏನು ಮಾಡೋದು ಏನು ಕೇಳಿಕೊಂಡು ಬಂದಿದ್ದೇವೆಯೋ ಆ ಕರ್ಮ ಅನುಭವಿಸಬೇಕು ಎನ್ನುತ್ತಾ ತನ್ನ ಕೆಲಸಕ್ಕೆ ಹೋದ‌ ನಂತರ
ಕೋದಂಡರಾಮ್ ರವರು ಇನ್ಲ್ ಪೆಕ್ಟರ್ ಗೆ ತಿಳಿಸಿದಾಗ
ಇನ್ಸ್‌ ಪೆಕ್ಟರ್ ರವರು ಯುವಕನ ಡೆತ್ ಸರ್ಟಿಫಿಕೇಟನ್ನು ವಾಟ್ಸಪ್ ಮೂಲಕ ಕಳುಹಿಸುತ್ತೇನೆಂದು ಹೇಳಿ ತಕ್ಷಣ ಯುವಕನ ಮರಣ ಪತ್ರದ ಫೋಟೋ ತೆಗೆದು ಕೋದಂಡರಾಮ್ ಗೆ ಕಳುಹಿಸಿದಾಗ
ಕೋದಂಡರಾಮ್ ರವರು ಥ್ಯಾಂಕ್ಸ್ ಇನ್ಸ್‌ಪೆಕ್ಟರ್ ಎಂದು ಹೇಳಿ ಫೋನ್ ಆಫ್ ಮಾಡಿ, ನಂತರ ಇನ್ಸ್ ಪೆಕ್ಟರ್ ಕಳುಹಿಸಿದ್ದ ಪ್ರಮಾಣ ಪತ್ರದಲ್ಲಿರುವ ಯುವಕನ ತಂದೆಯ ಹೆಸರನ್ನು ನೋಡಲು ರಂಗರಾಜ್ ಎಂದಿರುತ್ತದೆ. ಓ ಹೋ ಇವರೇ ನನ್ನ ಮಗನ ಸಾಕು ತಂದೆ ಇರಬೇಕೆಂದುಕೊಳ್ಳುತ್ತಾರೆ.

ರಾತ್ರಿ ಅಪ್ಪ ಮಗಳು ಊಟಮಾಡುತ್ತಿರುವಾಗ,
ಆಶ‌ ಮಾತನಾಡಿ, ಅಪ್ಪಾ ಮೈಸೂರಿನಲ್ಲಿ ನಮ್ಮಣ್ಣನಂತೆ ಒಬ್ಬನು ಇದ್ದಾನೆಂದು ಹೇಳಿದ್ದರಲ್ಲಾ ಇನ್ಸ್‌ಪೆಕ್ಟರ್ ವಿಚಾರಿಸಿದ್ರಾ‌ ಎಂದು ಕೇಳಲು
ಈ ಮಾತು ಕೇಳಿದ ತಕ್ಷಣ ಕೋದಂಡರಾಂ ಗೆ ನೆತ್ತಿ ಹತ್ತಿದಂತಾಗಿ ಜೋರಾಗಿ ಕೆಮ್ಮು ಬಂದು ಕೆಮ್ಮೀ ಕೆಮ್ಮೀ ಕಣ್ಣಲ್ಲಿ ನೀರು ಬಂದಿದ್ದನ್ನು ಕಂಡ
ಆಶಾ ಅಪ್ಪಾ ನೀರು ಕುಡಿಯಪ್ಪಾ ಮೇಲೆ ತಲೆ ಎತ್ತಿ ನೋಡೆಂದಾಗ
ಕೋದಂಡರಾಂ ಕೆಮ್ಮುತ್ತಲೇ‌ ನೀರನ್ನು ಕುಡಿದು, ತಲೆ ಎತ್ತಿ ನೋಡಿದರೂ ಕೆಮ್ಮು ಕಡಿಮೆಯಾಗುವುದಿಲ್ಲ.
ತಕ್ಷಣ ಆಶ‌ ಮೇಲೆದ್ದು ಅಪ್ಪನ ಬೆನ್ನು ಸವರುತ್ತಾ ಏನಾಯ್ತಪ್ಪಾ ಬಹುಷಃ ನನ್ನ ಅಣ್ಣನು ಅಪ್ಪನನ್ನು ಜ್ಞಾಪಿಸಿಕೊಳ್ಳುತ್ತಿರಬಹುದು ಅಲ್ಲವೇನಮ್ಮಾ ಎಂದು ಪಕ್ಕದಲ್ಲಿ ನಿಂತಿದ್ದ ಅವಳಮ್ಮನಿಗೆ ನಗುತ್ತಾ ಹೇಳಲು
ಕೋದಂಡರಾಂ ರವರು ಕೆಮ್ಮುತ್ತಲೇ ತನ್ನ ಜೇಬಿನಿಂದ ಮೊಬೈಲ್‌ ತೆಗೆದು ವಾಟ್ಸಪ್ ಓಪನ್ ಮಾಡಿ ಇದನ್ನು ನೋಡಮ್ಮಾ ಎಂದಾಗ
ಇದೇನಪ್ಪಾ ಎಂದು ಆಶಾ‌ ಪ್ರಶ್ನಿಸಿದಾಗ
ಕೋದಂಡರಾಂ ರವರು ಕೆಮ್ಮುತ್ತಾ ,, ನೀ,,,,,, ನೀ,,,,,ನೀನೇ ನೋಡಮ್ಮಾ ಎನ್ನುತ್ತಾರೆ
ಅಪ್ಪಾ ಇದೇನಪ್ಪಾ? ಮೊಬೈಲಿನಲ್ಲಿ ಏನಿದೆ ಎಂದು ಆಶಾ ಕೇಳಲು
ನಿನಗೆ ಓದಲು ಬರುತ್ತಲ್ಲಾ ನೀನೇ ಓದಿ ಹೇಳೆಂದು ಅವಳಪ್ಪನ ಮಾತಿಗೆ
ಇದರಲ್ಲೇನಿದೆಯಪ್ಪಾ ಎನ್ನುತ್ತಾ, ಓದಲು ಶುರು ಮಾಡಿ, ಮರಣ ಪ್ರಮಾಣ ಪತ್ರ ಎಂದಿರುವುದನ್ನು ನೋಡಿ, ಇದು ಯಾರದ್ದಪ್ಪಾ ಡೆತ್ ಸರ್ಟಿಫಿಕೇಟ್ ಎಂದು ಹೇಳುತ್ತಾ ಮುಂದೆ ಓದಿ, ಸಾಗರ್ ತಂದೆ ಹೆಸರು ರಂಗರಾಜ್ ಇದೆಯಲ್ಲಾ ಇವರೆಲ್ಲರೂ ಯಾರೆಂದು ಕೇಳಲು
ಅವನೇ ನಿಮ್ಮಣ್ಣ ಕಣಮ್ಮಾ ಎಂದು ಕೋದಂಡರಾಮ್ ಹೇಳಲು
ಅಂದರೆ ನಮ್ಮಣ್ಣಾ,,,,,,,, ಎಂದು ಮಾತು ನಿಲ್ಲಿಸಿದಾಗ
ಹೌದಮ್ಮಾ ಅದಕ್ಕೆ ನಿನಗೆ ಹೇಳಲಿಲ್ಲವೆಂಬ ತನ್ನ ತಂದೆಯ ಮಾತಿಗೆ
ಅಪ್ಪಾ ಇದನ್ನು ನಾನು ನಂಬುವುದಿಲ್ಲಪ್ಪಾ, ನಮ್ಮಣ್ಣ ಬದುಕಿದ್ದಾನೆ ಎಂಬುದು ನನ್ನ ದೃಢವಾದ ನಂಬಿಕೆ ಎಂಬ ಆಶಾಳ‌ ಮಾತಿಗೆ
ಹುಚ್ಚು ಹುಡುಗಿ, ಡೆತ್‌ ಸರ್ಟಿಫಿಕೇಟ್‌ ತಂದು ತೋರಿಸಿದರೂ ನಿನಗೆ ನಂಬಿಕೆ ಇಲ್ಲವೆಂದರೆ ಏನು ಮಾಡಲಿ ಹೇಳಮ್ಮಾ ಎಂದು ಅವಳಪ್ಪ ನುಡಿದಾಗ
ಅಪ್ಪಾ ಯಾರ್ಯಾರದ್ದೋ ಸರ್ಟಿಫಿಕೇಟ್ ತಂದು ನಿಮ್ಮಣ್ಣನದ್ದೆಂದು ಹೇಳಿದರೆ ಹೇಗಪ್ಪಾ ನಂಬುವುದೆಂದು ಆಶ ಅವರಪ್ಪನನ್ನು ಪ್ರಶ್ನಿಸಿದಾಗ,
ನಮಗೆ ಗೊತ್ತಿಲ್ಲದಿದ್ದರೆ ನಂಬಲೇಬೇಕಮ್ಮಾ ಎಂದು ಅವಳಪ್ಪ ಹೇಳುತ್ತಾರೆ.

ಮುಂದುವರೆಯುತ್ತದೆ …..

ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ಅಂಶವೇನೆಂದರೆ

ಒಂದೊಂದು ಸಲ ವಾಸ್ತವದಲ್ಲಿ ಕಣ್ಣೆದುರಿಗೆ ಇರುವುದನ್ನು ನಂಬಿರಿ ಎಂದು ಹೇಳಿದರೂ ಅದನ್ನು ನಂಬದ ಜನರು ಕನ್ನಡಿಯಲ್ಲಿರುವ ಪ್ರತಿಬಿಂಬವನ್ನೇ ನಿಜವೆಂದು ನಂಬುತ್ತಾರೆ.

ಅಭಿಲಾಷೆ ಕಾದಂಬರಿ

ಸಂಚಿಕೆ -18

ಕೋದಂಡರಾಂ ರವರು ತಮ್ಮ ಮೊಬೈಲ್‌ ಗೆ ಬಂದಿದ್ದ ಡೆತ್ ಸರ್ಟಿಫಿಕೇಟನ್ನು ಆಶಾಳಿಗೆ ತೋರಿಸಿದಾಗ
ಯಾರ್ಯಾರದ್ದೋ ಡೆತ್ ಸರ್ಟಿಫಿಕೇಟ್ ತೋರಿಸಿದರೆ ನಾವು ನಂಬಬೇಕಾ ಎಂದು ಅಪ್ಪನನ್ನು ಪ್ರಶ್ನಿಸಿದಾಗ
ಗೊತ್ತಿಲ್ಲದಿದ್ದರೆ ನಂಬಲೇಬೇಕಮ್ಮಾ ಎಂದು ಕೋದಂಡರಾಮ್ ರವರು ಹೇಳಿರುತ್ತಾರೆ

ಕಥೆಯನ್ನು ಮುಂದುವರೆಸುತ್ತಾ

ಅಪ್ಪಾ ನಮ್ಮಣ್ಣನಂದು ಹೇಳಿ ಯಾರದ್ದೋ ಡೆತ್ ಸರ್ಟಿಫಿಕೇಟ್ ತೋರಿಸಿದರೆ, ಇದನ್ನು ನಂಬುವವರು ಮೂರ್ಖರಷ್ಟೇ ಎಂಬ ಆಶಾ ಮಾತಿಗೆ
ನೀನು ಸೋಸಿಯಲ್ ಮೀಡಿಯಾ ಗಳಿಗೆ ಫೋಟೋ ಕಳಿಸಿರುವಂತೆ ಮೈಸೂರಿನವರು ಹೇಳಿದ್ದಂತೆ ಇನ್ಸ್ ಪೆಕ್ಟರ್ ರವರು ಅವರ ಮನೆ ಕಂಡು ಹಿಡಿದು, ವಿಷಯ ತಿಳಿಸಿದ್ದಾರೆ ಕಣಮ್ಮಾ,ಇದನ್ನು ಒಪ್ಪದೆ ಬೇರೆ ದಾರಿಯಿಲ್ಲ. ನಿಮ್ಮಣ್ಣ ಮೃತನಾದ ದಿನಾಂಕ ಕೇಳುವಂತೆ ನಿಮ್ಮಮ್ಮ ಹೇಳಿದಳು.ನಾನು ಇನ್ಸ್ ಪೆಕ್ಟರ್ ಗೆ ಕೇಳಿದ್ದಕ್ಕೆ ಸರ್ಟಿಫಿಕೇಟ್ ಕಳುಹಿಸಿಕೊಟ್ಚಿದ್ದಾರೆಂದು ಕೋದಂಡರಾಮ್ ಹೇಳಿದಾಗ
ಅಪ್ಪಾ ಯಾರೋ ಮೃತರಾದ ದಿನಾಂಕ ಅಮ್ಮನಿಗೇಕೆ ಬೇಕಂತೆ ಎಂದು ಆಶಾ ಪ್ರಶ್ನಿಸಲು
ಮೃತರಾಗಿರುವವನು ತನ್ನ ಮಗನೆಂದು ಖಾತ್ರಿ ಮಾಡಿಕೊಂಡಿದ್ದಾಳೆ. ಅದಕ್ಕೆ ಅವನು ಮೃತ‌ನಾದ ದಿನಾಂಕದಂದು ತಿಥಿ ಮಾಡಬೇಕೆಂದು ಹೇಳಿದ್ದಾಳಮ್ಮಾ ಎಂಬ ಅವಳಪ್ಪನ ಮಾತಿಗೆ
ಅಪ್ಪಾ ದಯವಿಟ್ಟು ಈ ರೀತಿ ಯಾರದ್ದೋ ತಿಥಿ ಮಾಡಬೇಡಪ್ಪಾ ಇನ್ನೂ ಸ್ವಲ್ಪ ದಿನ ನೋಡೋಣವೆಂದು ಆಶಾ ಹೇಳಲು
ನಾವು ಕಾಯುವುದರಿಂದ ಏನೂ ಪ್ರಯೋಜನವಿಲ್ಲಮ್ಮ ನಿಮ್ಮಣ್ಣನ ಫೋಟೋದಲ್ಲಿರುವವನೇ ಮೃತನಾಗಿರುವುದಾಗಿ ಅವನ ಸಾಕು ತಂದೆಯೇ ಇನ್ಸ್ ಪೆಕ್ಟರ್ ಗೆ ಹೇಳಿದ್ದಾರೆ ಎಂದಾಗ
ಈ ಮಾತು ನಿನಗೆ ಯಾರು ಹೇಳಿದ್ರು ಎಂಬ ಆಶಾ ಪ್ರಶ್ನೆಗೆ, ಆ ಯುವಕನಿದ್ದ ಮನೆಯ ಯಜಮಾನ ಹೇಳಿದ್ದಾರಂತೆ ಎಂದು ಕೋದಂಡರಾಂ ಮಾತಿಗೆ
ಫೋಟೋದಲ್ಲಿರುವವನು ಮೃತನಾಗಿರಬಹುದು, ಅವನು ಮೈಸೂರಿನ ಮನೆಯಲ್ಲಿ ಇರಬಹುದು ಆ ಹುಡುಗನ ತಿಥಿಯನ್ನು ಅವರೇ ಮಾಡಿಕೊಳ್ಳುತ್ಕಾರೆ ನಿನಗೇಕೆ ಈ ಉಸಾಬರಿ ? ಮೃತನಾದವನು ನಮ್ಮಣ್ಣ ಅಲ್ವಪ್ಪಾ ಪ್ಲೀಸ್ ಈ ಸುಳ್ಳಿನ ಸುದ್ದಿ ನಂಬಬೇಡಪ್ಪಾ ಎಂದು ಆಶಾ ದೈನ್ಯತೆಯಿಂದ ಅಪ್ಪನಿಗೆ ಹೇಳಿದಾಗ
ಇನ್ಸ್‌ಪೆಕ್ಟರ್ ಹೇಳಿದ್ದರಲ್ಲಿ ನನಗೆ ನಂಬಿಕೆ ಬರುತ್ತಿದೆಯೆಂದು ಕೋದಂಡರಾಮ್ ಹೇಳಲು
ಅಪ್ಪಾ ಇನ್ಸ್ ಪೆಕ್ಟರ್ ರವರು ಐದು ವರ್ಷದವನಿದ್ದಾಗಲೇ ತೀರಿಕೊಂಡಿದ್ದ ಎಂದು ಹೇಳಿದರು, ಈಗ ನೋಡಿದರೆ ಪುನಃ ಈ ಯುವಕ ಮೃತನಾಗಿದ್ದಾನೆಂದು ಹೇಳುತ್ತಿದ್ದಾರೆ. ಯಾವುದನ್ನು ನಂಬಬೇಕಪ್ಪಾ? ನನಗಂತೂ ಈಗಲೂ ನಮ್ಮಣ್ಣ ಬದುಕಿದ್ದಾನೆ ಯಾವತ್ತೋ ಒಂದು ದಿನ ಮನೆಗೆ ಬಂದೇ ಬರುತ್ತಾನೆಂಬ ನಂಬಿಕೆ ನನಗೆ ಇದೆ. ದಯವಿಟ್ಟು ತಿಥಿಯ ಕಾರ್ಯ ಮಾಡಬೇಡಪ್ಪಾ ಎನ್ನುತ್ತಾಳೆ
ನಿನ್ನ ಮನಸ್ಸಿಗೇಕೆ ನೋವುಂಟು ಮಾಡಲಿ? ತಿಥಿಯ ಕಾರ್ಯ ಮಾಡುವುದಿಲ್ಲ ಬಿಡಮ್ಮ. ನಿಮ್ಮಣ್ಣನಿಗೆ ಆಯಸ್ಸು ಜಾಸ್ತಿಯಾಗಿ ಮನೆಗೆ ಬೇಗ ಬರಲೆಂದು ಕೋದಂಡರಾಮ್ ಹೇಳಿದಾಗ
ಈ ವಿಷಯದಲ್ಲಾದರೂ ಚಿಕ್ಕವಳಾದ ನನ್ನ ಮಾತು ಕೇಳಿದೆಯಲ್ಲಾ ಥ್ಯಾಂಕ್ಸ್ ಕಣಪ್ಪಾ ಎಂಬ ಆಶಾಳ ಮಾತಿಗೆ,
ಯಾವಾಗ ನಿನ್ನ ಮಾತು ಕೇಳಿಲ್ಲಾ ಹೇಳು? ಯಾರನ್ನೋ ಪ್ರೀತಿಸಿದ್ದೇನೆಂದು ಹೇಳಿದ್ದಕ್ಕೆ ನಾನೇನಾದರೂ ತಕರಾರು ಮಾಡಿದ್ನಾ? ಆ ಹುಡುಗನನ್ನು ಕರೆದುಕೊಂಡು ಬಾ ಮದುವೆ ಮಾತುಕತೆ ಆಡೋಣವೆಂದು ಹೇಳಿಲ್ಲವೇನಮ್ಮಾ ಎಂದು ಅವಳಪ್ಪ ಪ್ರಶ್ನಿಸಿದಾಗ
ಹೌದಪ್ಪಾ, ನೀನು ಮಗಳ ಮನಸ್ಸು ಅರ್ಥಮಾಡಿಕೊಂಡಿದ್ದೀಯಾ ಎಂದು ಗೊತ್ತೆಂದು ಹೇಳಿ ತನ್ನ ರೂಮಿಗೆ ಹೋಗುತ್ತಿರುವಾಗ
ಮಗಳೇ ಆಶಾ ಆ ಹುಡುಗನನ್ನು ಯಾವಾಗ ಕರೆದುಕೊಂಡು ಬರುತ್ತೀಯಾ ಹೇಳಮ್ಮಾ ಎಂದು ಅವಳಪ್ಪ ಕೇಳಲು
ನೀನು ಯಾವಾಗ ಹೇಳಿದರೂ ಕರೆದುಕೊಂಡು ಬರುತ್ತೇನೆ. ಆದರೆ ಅವರಿಗೆ ಶಾಲೆಯಲ್ಲಿ ಪಾಠ‌ ಮಾಡುವಂತೆ ವಿಷಯವನ್ನು ಹೇಳಬೇಡವೆಂದು ನಗುತ್ತಾ ಹೇಳಿದಾಗ
ಏಯ್ ಕಳ್ಳೀ ನಿನ್ನಪ್ಪನನ್ನೇ ಹಾಸ್ಯ ಮಾಡುತ್ತೀಯಾ? ಎಂದು ಕೋದಂಡರಾಮ್ ರನರು ಛೇಡಿಸುತ್ತಾರೆ.
ಸಾರಿ ಕಣಪ್ಪಾ ಸುಮ್ಮನೆ ಹೇಳಿದೆ ಎನ್ನುತ್ತಾ, ನಾಳೆ ಭಾನುವಾರ ಮನೆಗೆ ಬರುವಂತೆ ಹೇಳುತ್ತೇನೆಂದಾಗ
ಓ ಕೆ ಕಣಮ್ಮಾ ಎನ್ನಲು
ಆಶಾ ನಗುತ್ತಾ ರೂಮಿಗೆ ಹೋಗಿ ವಿಕ್ರಮ್ ಗೆ ಫೋನ್ ಮಾಡಿ ಭಾನುನಾರ ಮನೆಗೆ ಬರಲು ಹೇಳಿದಾಗ
ಅಯ್ಯಯ್ಯೋ ನಾನೊಬ್ಬನೇ ನಿಮ್ಮ ಮನೆಗೆ ಬರುವುದಿಲ್ಲಪ್ಪಾ ಎನ್ನುತ್ತಾನೆ ವಿಕ್ರಮ್
ಯಾಕೆ ವಿಕ್ರಮ್ ಹೆದರಿಕೆಯಾ ಎಂದು ಆಶಾ ಪ್ರಶ್ನಿಸಲು
ನಿಮ್ಮಪ್ಪ ಟೀಚರ್ ಆಗಿದ್ದಾರೆ ಬಹಳ ಸ್ಚ್ರಿಕ್ಟ್ ಎಂದು ಹೇಳಿದ್ದೀಯಾ ಅಕಸ್ಮಾತ್ ನಾನು ಮನೆಗೆ ಬಂದು ನಿಮ್ಮಪ್ಪ ಏನಾದರೂ ನನಗೆ ಗೊತ್ತಿಲ್ಲದಿರುವ ಪ್ರಶ್ನೆ ಕೇಳಿದರೆ ಏನು ಮಾಡಲಿ? ಎಂದು ವಿಕ್ರಮ್ ಪ್ರಶ್ನಿಸಲು
ನಾನಾಗಲೇ ನಮ್ಮಪ್ಪನಿಗೆ ಇನ್‌ಸ್ಟ್ರಕ್ಷನ್ ಕೊಟ್ಟಿದ್ದೇನೆ ನೀನು ಧೈರ್ಯವಾಗಿ ಬಾ ನಿನ್ನ ಫ್ಯಾಮಿಲಿ ಬಗ್ಗೆ ಕೇಳುತ್ತಾರೆ ಅಷ್ಟೇ. ಆದರೆ ನಮ್ಮಪ್ಪನ ಮುಂದೆ ಯಾವುದಾದರೂ ‌ವಿಚಾರದಲ್ಲಿ ಸುಳ್ಳು ಹೇಳಿದರೆ ಮಾತ್ರ ನಮ್ಮಪ್ಪ ಸಹಿಸುವುದಿಲ್ಲವೆಂದು ಆಶಾಳ ಮಾತಿಗೆ,
ನಾನು ಇರುವ ವಿಷಯ ಹೇಳುತ್ತೇನೆ ಸುಳ್ಳೇಕೆ ಹೇಳಲಿ ಎಂದು ವಿಕ್ರಮ್ ಪ್ರಶ್ನಿಸಲು.
ಅದು ನನಗೂ ಗೊತ್ತು, ನಮ್ಮಪ್ಪನ ಮುಂದೆ ಏನಾದರೂ ಹೆಚ್ಚಿನ ಬಿಲ್ಡ್ ಅಪ್ ತೆಗೆದುಕೊಳ್ಳುವುದಕ್ಕೆ ಹೇಳಿ ಅದು ಸುಳ್ಳಾದರೆ ಮಾತ್ರ ನಮ್ಮಪ್ಪ ಸಹಿಸುವುದಿಲ್ಲ. ಮೊದಲೇ‌ ನಮ್ಮಫ್ಪನ ಬಗ್ಗೆ ಕ್ಲೂ ಕೊಟ್ಟಿದ್ದೇನೆ. ಅದರಂತೆ ಮಾತನಾಡು ಎಂದಾಗ
ಓಕೆ ಆಶಾ ಡಿಯರ್ , ಏನಾದರೂ ವ್ಯತ್ಯಾಸವಾದರೆ ನೀನು ಇರುತ್ತೀಯಲ್ಲಾ ಎಂದಾಗ
ನೋಡೋಣ ಬಾ ಎಂದು ಹೇಳಿ ಫೋನ್ ಕಟ್ ಮಾಡುತ್ತಾಳೆ.

ಭಾನುವಾರದ ದಿನ ಬಂದಿದ್ದು, ಆಶಾ‌ ಬೇಗ ಎದ್ದು ರಡಿಯಾಗುತ್ತಿರುವುದನ್ನು ಕಂಡ ಅವಳಮ್ಮ ಇದೇನೇ ಆಶಾ ಭಾನುವಾರ ಬೇಗನೆ ಎದ್ದು ರಡಿಯಾಗಿದ್ದೀಯಲ್ಲಾ ಎಲ್ಲಿಗೆ ಹೋಗುತ್ತೀಯಾ ಎಂದು ಅವಳಮ್ಮ ಕೇಳಲು
ಇದೇನಮ್ಮಾ ಹೀಗೆ ಕೇಳುತ್ತಿದ್ದೀಯಾ? ಭಾನುವಾರ ವಿಕ್ರಮ್ ನನ್ನು ಮನೆಗೆ ಕರೆಯುವಂತೆ ಅಪ್ಪ ಹೇಳಿಲ್ಲವಾ? ಅದಕ್ಕೆ ವಿಕ್ರಮ್ ಗೆ ಮನೆಗೆ ಬರುವಂತೆ ಹೇಳಿದ್ದೇನೆ ಎಂದು ಆಶ ಹೇಳಲು
ಯಾವಾಗ ಬರಲು ಹೇಳಿದ್ದೀಯಾ ಎಂದು ಅವಳಮ್ಮ ಪ್ರಶ್ನಿಸಲು
ಈ ದಿನ ಸಂಜೆ ಬರುತ್ತಾನೆ ಎಂದು ಆಶ‌ ಹೇಳುತ್ತಾಳೆ
ನಿಮ್ಮಪ್ಪನೂ ವಿಷಯ ಮರೆತಿರಬಹುದು, ಒಂದು ಸಲ ಜ್ಞಾಪಿಸು ಎಂದು ಅವಳಮ್ಮನ ಮಾತಿಗೆ,
ಅಪ್ಪನಿಗೆ ಗೊತ್ತಿದೆಯಮ್ಮಾ ಎನ್ನುತ್ತಾಳೆ ಆಶಾ
ಉದಾಸೀನ ಏಕೆ ಒಂದು ಸಲ‌ ಹೇಳಿಬಿಡು, ಆಗ ಮನೆಯಲ್ಲೇ ಇರುತ್ತಾರೆನ್ನುವಾಗ
ಕೋದಂಡರಾಂ ‌ರವರು ಸ್ನಾನ ಮಾಡಿ ಬಾತ್ ರೂಮಿನಿಂದ ಹೊರಗೆ ಬರುತ್ತಾ ಯಾರಿಗೆ ಏನು ಒಂದು ಸಲ‌ ಹೇಳಬೇಕು? ಎಂದು ಕೇಳಲು
ಇವತ್ತು ಸಂಜೆ ನಿಮ್ಮ ಅಳಿಯ ನಾಗುವವರು ಬರುತ್ತಾರಂತೆ‌ ಎಂದು ಆಶಾಳ ಅಮ್ಮನ ಮಾತಿಗೆ,
ಯಾರು ಹೇಳಿದರೆಂದು ಕೋದಂಡರಾಂ ಪ್ರಶ್ನಿಸಿದಾಗ
ಅಪ್ಪಾ ಇದೇನಪ್ಪಾ ಹೀಗೆ ಹೇಳುತ್ತಿದ್ದೀಯಾ? ಈ ಭಾನುವಾರ ನಮ್ಮ ಮನೆಗೆ ವಿಕ್ರಮ್ ಗೆ ಬರುವಂತೆ ಹೇಳೆಂದು ನೀನೇ ಹೇಳಿದ್ದೆ ಆಗಲೇ ಮರೆತುಬಿಟ್ಚೆಯಾ ಎಂದು ಆಶಾ ಕೇಳಲು.
ಓ ಹೌದಲ್ಲನಾ? ಮರೆತೇ ಬಿಟ್ಟಿದ್ದೆ ಕಣಮ್ಮಾ, ಯಾವಾಗ ಬರುವುದಕ್ಕೆ ಹೇಳಿದ್ದೀಯಾ ಎಂದು ಕೋದಂಡರಾಮ್ ಕೇಳಲು
ಸಂಜೆ ಬರುತ್ತಾರಂತೆ ಎಂಬ ಆಶಾಳ‌ ಮಾತಿಗೆ
ನನಗೆ ಸಂಜೆ ಸ್ವಲ್ಪ ಕೆಲಸವಿತ್ತು ಬೇಗನೇ ಮುಗಿಸಿಕೊಂಡು ಬರುತ್ತೇನೆಂದು ಕೋದಂಡರಾಂ ಹೇಳಲು
ಹೋಗಲೇಬೇಕೇನಪ್ಪಾ? ಅವರು ಬಂದಾಗ ನೀನು ಇಲ್ಲದಿದ್ದರೆ ಬೇಸರ ಪಟ್ಟುಕೊಳ್ಳುವುದಿಲ್ಲವಾ ಎಂದು ಆಶಾ ಪ್ರಶ್ನಿಸಲು
ಅವಳಪ್ಪನು ಮಾತನಾಡಿ ಬೇಗ ಬಂದು ಬಿಡುತ್ತೇನೆ . ತುಂಬಾ ಮುಖ್ಯವಾದ ವಿಷಯ ಇದೆ ಎಂದಾಗ‌
ನೀನು ಮನೆಗೆ ಬಂದ ಮೇಲೆ ವಿಕ್ರಮ್ ಗೆ ಬರಲು ಹೇಳುತ್ತೇನೆಂಬ ಆಶಾಳ‌ ಮಾತಿಗೆ
ಹಾಗೇ ಮಾಡಮ್ಮಾ ಎಂದು ಹೇಳಿ ತಮ್ಮ ರೂಮಿಗೆ ಹೋಗುತ್ತಾರೆ
ಸಂಜೆಯಾಗುತ್ತಿದ್ದಂತೆ ಆಶ ವಿಕ್ರಮ್ ಗೆ ಫೋನ್ ಮಾಡಿ, ನಮ್ಮಪ್ಪ ಎಲ್ಲೋ ಹೋಗಿದ್ದಾರೆ, ಮನೆಗೆ ಬಂದ ತಕ್ಷಣ ಕಾಲ್ ಮಾಡುತ್ತೇನೆಂದು ಹೇಳಿದಾಗ
ನಾನು ನಿಮ್ಮ ಮನೆಗೆ ಬಂದು ನಿಮ್ಮಪ್ಪನ ಜೊತೆ ಮಾತನಾಡಲು ಕಾತರದಿಂದ ಕಾಯುತ್ತಿರುತ್ತೇನೆ. ನಿಮ್ಮಪ್ಪ ಬಂದ ತಕ್ಷಣ ಮರೆಯದೆ ಕಾಲ್ ಮಾಡೆಂದು ಹೇಳಿ ಫೋನ್ ಕಟ್ ಮಾಡುತ್ತಾನೆ

ಮದ್ಯಾಹ್ನ ಹೊರಗೆ ಹೋಗಿದ್ದ ಕೋದಂಡರಾಂ ರವರು ಸಂಜೆ ಏಳು ಗಂಟೆಯಾದರೂ ಮನೆಗೆ ಬಂದಿರುವುದಿಲ್ಲ
ಸಂಜೆ ಐದು ಗಂಟೆಗೆ ವಿಕ್ರಮ್ ಆಶಾಗೆ ಫೋನ್ ಮಾಡಿ ನಿಮ್ಮಪ್ಪ ಮನೆಗೆ ಬಂದ್ರಾ ಎಂದು ಕೇಳಿದಾಗ
ನಮ್ಮಪ್ಪ ಮನೆಗೆ ಬಂದ ತಕ್ಷಣ ಫೋನ್ ಮಾಡುತ್ತೇನೆ ಎಂಬ ಆಶಾಳ‌ ಮಾತಿಗೆ ಓ ಕೆ ಎಂದು ಹೇಳಿ ಫೋನ್ ಕಟ್‌ ಮಾಡುತ್ತಾನೆ
ಪುನಃ ಆರು ಗಂಟೆಗೆ ವಿಕ್ರಮ್ ಫೋನ್ ಮಾಡಿದಾಗ
ಇನ್ನೂ ಬಂದಿಲ್ಲ ವಿಕ್ರಮ್ ಎಂದು ವಿಷಾಧಿಸುತ್ತಾಳೆ
ಒಂಬತ್ತು ಗಂಟೆಯಾದರೂ ಕೋದಂಡರಾಂ ‌ರವರು ಮನೆಗೆ ಬಂದಿರುವುದೇ ಇಲ್ಲ.
ವಿಕ್ರಮ್ ಗೆ ಉತ್ತರ ಹೇಳೀ ಹೇಳೀ ಆಶಾಗೆ ಸಾಕಾಗಿ ಹೋಗುತ್ತದೆ

ಮುಂದುವರೆಯುತ್ತದೆ

ಹಿರಿಯರಾದವರು ನಮಗೇ ಎಲ್ಲಾ ತಿಳಿದಿದೆಯೆಂದು, ತನ್ನ ಮಾತೇ ನಡೆಯಬೇಕೆಂದು ಒಣ ಪ್ರತಿಷ್ಠೆ ತೋರದೆ ಕಿರಿಯರು ಹೇಳುವುದರಲ್ಲಿಯೂ ಸತ್ಯ ಇದೆಯೆಂದು ತಿಳಿದು ಅವರ ಭಾವನೆ ಹಾಗೂ ಮಾತಿಗೂ ಬೆಲೆ ಕೊಟ್ಟರೆ ಕಿರಿಯರಿಗೂ ಪ್ರೋತ್ಸಾಹ ದೊರಕಿದಂತಾಗುತ್ತದೆ.

– ಡಾ. ಎನ್.‌ಮುರಳೀಧರ್
ವಕೀಲರು ಹಾಗೂ ಸಾಹಿತಿ, ನೆಲಮಂಗಲ