ಮನಸ್ಸು

ನಮ್ಮ ಮನಸ್ಸು ಭಾವನೆಗಳ ಮಹಾಪೂರ, ಹಲವಾರು ಆಲೋಚನೆಗಳು ಹೊರ ಹೊಮ್ಮುತ್ತಿರುತ್ತವೆ. ಆಲೋಚನೆಗಳು ಉತ್ತಮವಾಗಿದ್ದಾಗ ನಮ್ಮ ನಡವಳಿಕೆ ಶುದ್ಧವಾಗಿರುತ್ತದೆ. ಮನಸ್ಥಿತಿಯೆ ನಮ್ಮ ವರ್ತನೆಗೆ ಮೂಲ. ಆದ್ದರಿಂದ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡಾಗ ಮಾತ್ರ ಉದ್ದೇಶಗಳು ಒಳ್ಳೆಯದಾಗಿರುತ್ತವೆ. ಆಗ ನಾವು ಮಾಡುವ ಪ್ರತಿಯೊಂದು ಕಾರ್ಯವು ಯಶಸ್ಸಿನ ಕಡೆ ಸಾಗುತ್ತದೆ. ಚಂಚಲ ಚಿತ್ತವಿದ್ದಾಗ ಏಳ್ಗೆ ಕುಂಠಿತವಾಗುತ್ತದೆ. ಬಾಳಿಗೊಂದು ಗುರಿ ಇಲ್ಲದಿದ್ದಾಗ ನಾವು ಸಫಲತೆಯನ್ನು ಕಾಣಲಾರೆವು. ಜೀವನ ಪಯಣ ದಿಕ್ಕು ತಪ್ಪದಿರಲು ಏಕಾಗ್ರತೆ, ಶ್ರದ್ಧೆ ಬಹಳ ಮುಖ್ಯ. ನಾವು ಯಾವ ಕಾರ್ಯವನ್ನೇ ಕೈಗೊಂಡರು ಅದರಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ಅದು ಪರಿಪೂರ್ಣವಾಗುವುದು.

ಶ್ರೀಕೃಷ್ಣ ಪರಮಾತ್ಮ ಹೀಗೆ ಹೇಳುತ್ತಾನೆ-

“ಪರಿಶುದ್ಧವಾದ ಆಸೆ ನಿಮ್ಮನ್ನು
ಮೇಲ್ಮಟ್ಟಕ್ಕೆ ಒಯ್ಯುತ್ತದೆ. ಆದರೆ
ಕೆಟ್ಟ ಆಸೆಗಳು ನಿಮ್ಮನ್ನು ಕೆಡಿಸಿ
ಪಾತಾಳದಷ್ಟು ಕೆಳಮಟ್ಟಕ್ಕೆ ನೂಕುತ್ತದೆ”

ಆಸೆ ಪಡುವುದಕ್ಕೆ ಮಿತಿ ಇರಬೇಕು, ಅತಿ ಆಸೆಯು ನಮ್ಮ ಆಲೋಚನೆಗಳನ್ನು ತಲೆಕೆಳಗಾಗುವಂತೆ ಮಾಡುತ್ತದೆ. ಮನಸು ಬಿಸಿಲ್ಗುದುರೆಯಂತೆ ಓಡುತ್ತಿದ್ದರೆ ಅದಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಮನ ಚಂಚಲಗೊಂಡು ಅದು ಕಡಿವಾಣವಿಲ್ಲದ ಕುದುರೆಯಂತೆ ಓಡುತ್ತ ನಮ್ಮ ಪ್ರಯತ್ನಗಳನ್ನು ವಿಫಲಗೊಳಿಸುತ್ತದೆ. ನಾಳೆಯೆಂಬ ಚಿಂತೆಯಿದ್ದಾಗ ಬಾಳಿನ ದಾರಿ ಸುಗಮವಾಗುವುದು, ಮುಂದಿನ ಭವಿಷ್ಯ ರೂಪಿಸಲು ಸಾಧ್ಯವಾಗುವುದು. ಮನುಷ್ಯನಿಗೆ ಆಸ್ತಿ, ಅಂತಸ್ತು, ಹಣ ಎಷ್ಟೇ ಇದ್ದರೂ ತನಗೆ ಇಷ್ಟ ಬಂದಂತೆ ಹೋದಾಗ ಬಯಕೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಆಗದೆ ಬಾಳು ಪತನವಾಗುತ್ತದೆ.
ಕಟ್ಟುಪಾಡುಗಳಿಗೆ ಕಟ್ಟುಬಿದ್ದು ಸಂಪ್ರದಾಯವೆಂಬ ಬಂಧನದಲ್ಲಿ ಸಂಸ್ಕಾರವಂತರಾಗಿ ಹಿರಿಯರ ಆಣತಿಯಂತೆ ಜೀವನ ಸಾಗಿದಾಗ ಬಾಂಧವ್ಯದ ಬೆಸುಗೆಯಲ್ಲಿ ಉತ್ತಮ ನಡೆ-ನುಡಿ ಕಲಿತು ಪ್ರೀತಿ, ವಿಶ್ವಾಸದಿಂದ ಎಲ್ಲರೊಡಗೂಡಿ ಭಾವೈಕ್ಯತೆ ಬೆಳೆದು ಸಂತೋಷದಿಂದ ಬಾಳುವೆವು. ಆಗ ನಮ್ಮ ಬಾಳಿಗೊಂದು ಅರ್ಥ ಇರುತ್ತದೆ ಮತ್ತು ಮಾದರಿ ಕುಟುಂಬವಾಗಿ ಇತರರಿಗೆ ಆದರ್ಶವಾಗಿ ಮನೆತನ ಬೆಳೆಯುತ್ತದೆ. ಇವೆಲ್ಲವು ನಮ್ಮ ಮನಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ.

“ಒಳ್ಳೆಯ ಮನಸ್ಸಿನಿಂದ ಹೊಂದಿಕೊಂಡಿರುವುದೇ ಧರ್ಮ
ವೈಮನಸ್ಸಿನಿಂದ ಬೇರೆಯಾಗುವುದೇ ಅಧರ್ಮ”- ದ.ರಾ. ಬೇಂದ್ರೆ

ಎಲ್ಲರೂ ಹೊಂದಿಕೊಂಡು ಬಾಳಿದಾಗ ಮನೆಯೇ ನಂದನವನವಾಗುತ್ತದೆ. ಸಹ ಜೀವನ, ಸಹಬಾಳ್ವೆ ಮಾನವೀಯ ಮೌಲ್ಯಗಳನ್ನು ಬೆಳೆಸಲು ಅನುಕೂಲವಾಗುತ್ತದೆ. ನಾವು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಆತುರ ಪಡದೆ ನಿಧಾನವಾಗಿ ಯೋಚಿಸಿ ಮುಂದಡಿಯಿಟ್ಟಾಗ ಜಗವನ್ನೇ ಗೆಲ್ಲುವೆವೆಂಬ ಆತ್ಮ ವಿಶ್ವಾಸ ನಮ್ಮಲ್ಲಿ ಮೂಡುತ್ತದೆ. ಆತ್ಮ ವಿಶ್ವಾಸವು ನಮ್ಮ ಬಲವನ್ನು ಹೆಚ್ಚಿಸುತ್ತದೆ, ಇತರ ಕೆಟ್ಟ ಯೋಚನೆಗಳು ನಮ್ಮ ಮನಸ್ಸಿನಿಂದ ದೂರ ಉಳಿಯುತ್ತವೆ. ಸಂಬಂಧಗಳು ಮನುಜರ ಮನಸ್ಸುಗಳನ್ನು ಬೆಸೆಯುವಂತ ಕೊಂಡಿಗಳಾಗುತ್ತವೆ. ಇವು ಶಾಶ್ವತವಾಗಿ ಉಳಿಯಲು ನೋವು-ನಲಿವನ್ನು ಹಂಚಿಕೊಂಡು ಕಷ್ಟ-ಸುಖದಲ್ಲಿ ಭಾಗಿಯಾಗಿ ಅನ್ಯೋನ್ಯತೆಯಿಂದ ಬಾಳುತ್ತ ಸಾಮರಸ್ಯದಿಂದ ಕೂಡಿದಾಗ ಬಾಂಧವ್ಯದ ಕೊಂಡಿ ಬೆಸೆಯುತ್ತದೆ ಆಗ ಬಾಳು ರಸಪೂರ್ಣವಾಗುತ್ತದೆ.

ನಮ್ಮೊಳಗಿನ ಮನಃಸಾಕ್ಷಿಯು ನಮ್ಮನ್ನು ಸದಾ ಎಚ್ಚರಿಸುತ್ತಿರುತ್ತದೆ ಇದನ್ನು ನಾವು ಅಲ್ಲಗಳೆಯಲಾಗದು. ಏಕೆಂದರೆ ತಿಳಿದೋ ತಿಳಿಯದೆಯೋ ಏನಾದರೂ ತಪ್ಪು ಮಾಡಿದಾಗ ಒಳಗೊಳಗೇ ನಮ್ಮನ್ನು ಚುಚ್ಚುವುದು. ನಾವು ಯಾರಿಗಾದರೂ ಮೋಸ ಮಾಡಬಹುದು, ಯಾರ ಕಣ್ಣಿಗಾದರೂ ಮಣ್ಣೆರಚಬಹುದು ಆದರೆ ಆತ್ಮ ಸಾಕ್ಷಿಗೆ ಹೆದರಲೇಬೇಕು. ನಾವು ಮಾಡಿದ್ದೆಲ್ಲ ಸರಿ ಎಂದು ಅದು ಒಪ್ಪಿಕೊಳ್ಳದು ಪಾಶ್ಚಾತ್ತಾಪದಿಂದ ಒಡಲು ಧಹಿಸುವುದು. ಮೇಲ್ನೋಟಕ್ಕೆ ನಿರಪರಾಧಿಯಂತೆ ಸೋಗು ಹಾಕಿದರೂ ಅಪರಾಧಿ ಭಾವ ಮನವನ್ನು ಕದಡುತ್ತಿರುವುದು. ಯಾವ ನೋವು, ಚಿಂತೆ, ದ್ವೇಷ ನಮ್ಮನ್ನು ಕಾಡದೆ ನಾವು ನೆಮ್ಮದಿಯಾಗಿ ಜೀವನ ಮಾಡಬೇಕೆಂದರೆ ದುರಾಸೆಯನ್ನು ದೂರ ಮಾಡಬೇಕು. ಗೌತಮ ಬುದ್ಧರು ಹೇಳುವಂತೆ “ಆಸೆಯೇ ದುಃಖಕ್ಕೆ ಮೂಲ” ಎನ್ನುವ ನುಡಿಯನ್ನು ಪಾಲಿಸಿದಾಗ ಇರುವುದರಲ್ಲೇ ಸಂತೃಪ್ತಿಯನ್ನು ಹೊಂದುತ್ತೇವೆ. ಆದರೆ ಇದನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸು ಸಿದ್ಧವಿರುವುದಿಲ್ಲ ನೆಮ್ಮದಿಯ ಜೀವನ ಸಾಗಿಸುವಷ್ಟು ಗಳಿಸಿದ್ಧರೂ ಅಷ್ಟಕ್ಕೆ ತೃಪ್ತಿ ಹೊಂದದೆ ಅವಶ್ಯಕತೆಯಿಲ್ಲದಿದ್ದರೂ ಸಂಪಾದಿಸಬೇಕೆಂಬ ತುಡಿತ ತುಂಬಿ ನಾವೊಬ್ಬರು ಚೆನ್ನಾಗಿದ್ದರೆ ಸಾಕೆಂಬ ಸ್ವಾರ್ಥದಿಂದ ಸುಖ, ಶಾಂತಿಯನ್ನು ದೂರ ಮಾಡಿಕೊಳ್ಳುತ್ತೇವೆ. ನಮ್ಮ ಬಳಿ ಇರುವುದರಲ್ಲೇ ತೃಪ್ತಿ ಹೊಂದಿದಾಗ ಆಗ ಆಗುವ ಆನಂದಕ್ಕೆ ಸಾಟಿ ಇರುವುದಿಲ್ಲ. ನಮ್ಮ ಬಳಿ ಇಲ್ಲದಿರುವುದಕ್ಕೆ ಹಂಬಲಿಸಿದಾಗ ಸದಾ ಕೊರಗುತ್ತಲೇ ಇರಬೇಕಾಗುತ್ತದೆ. ಮನಸು ತಳಮಳಗೊಂಡು ಕೆಲವೊಮ್ಮೆ ಅಳು ಒತ್ತರಿಸಿ ಬರುತ್ತದೆ ಅದನ್ನು ತೋರ್ಪಡಿಸಿಕೊಳ್ಳದೆ ತೋರಿಕೆಯ ನಗುವನ್ನು ಹೊರ ಚೆಲ್ಲುತ್ತೇವೆ.

ಪರಿಸ್ಥಿತಿಗೆ ಹೊಂದಿಕೊಂಡು ಹೋಗುವುದನ್ನು ಕಲಿತಾಗ ದೃಡತೆ ಹೆಚ್ಚಾಗಿ ಮನಸು ಸ್ಥಿಮಿತ ತಪ್ಪಲಾರದು. ಪ್ರಶಾಂತವಾದ ವಾತಾವರಣವು ಇದ್ದಾಗ ಅದು ನಮ್ಮಲ್ಲಿ ಇನ್ನಷ್ಟು ಹುಮ್ಮಸ್ಸನ್ನು ತುಂಬುತ್ತದೆ.

ಒಮ್ಮೊಮ್ಮೆ ಸಿಟ್ಟು, ಸೇಡು, ಆಕ್ರೋಶ ಮನದಲ್ಲಿ ತುಂಬಿದಾಗ ಮನಸು ಕುದಿಯುತ್ತದೆ. ಆಗ ಉತ್ತಮ ಆಲೋಚನೆಗಳು ಹೊಳೆಯಲಾರವು, ಕುದಿಯುವ ನೀರಲ್ಲಿ ಪ್ರತಿಬಿಂಬ ಕಾಣದು. ತಿಳಿಯಾದ ಕೊಳದಲ್ಲಿ ಸ್ಪಷ್ಟವಾದ ಪ್ರತಿಬಿಂಬವನ್ನು ಕಾಣಬಹುದು ಹಾಗೆಯೇ ಮನಸ್ಸು ಸಹ ನಿಷ್ಕಲ್ಮಶವಾಗಿದ್ದಾಗ ಅಲ್ಲಿ ಒಳ್ಳೆಯ ಭಾವನೆಗಳೆ ಹೊರ ಹೊಮ್ಮುತ್ತವೆ. ನಾವು ಕೈಗೊಂಡ ಕಾರ್ಯವನ್ನು ಸುಸೂತ್ರವಾಗಿ ನೆರವೇರಿಸುವ ಮಾರ್ಗದೆಡೆ ನಮ್ಮನ್ನು ನಡೆಸುತ್ತದೆ. ಸಮಾಧಾನ ಚಿತ್ತರಾಗಿ ಬಾಳು ಸಾಗಿಸುತ್ತ ಯಶಸ್ಸನ್ನು ಪಡೆಯೋಣ ಆಗ ನಳನಳಿಸುವ ಬದುಕು ನಮ್ನದಾಗುತ್ತದೆ. ಜೀವನದಲ್ಲಿ ಮುಸುಕಿದ ಕತ್ತಲನ್ನು ಸರಿಸಿ ಬೆಳಕಿನೆಡೆ ಸಾಗುವಂತ ಚೈತನ್ಯವು ಹೊಸ ಚೇತನವನ್ನು ನೀಡುತ್ತ ಮನಸು ಪ್ರಪುಲ್ಲವಾಗುತ್ತದೆ. ದೀಪವು ಕತ್ತಲೆಯನ್ನು ಓಡಿಸಿ ಹೇಗೆ ಬೆಳಕನ್ನು ನೀಡುತ್ತದೋ ಅದೇ ರೀತಿ ನಿರ್ಮಲವಾದ ಮನಸ್ಸು ಸಹ ನಮ್ಮ ಬಾಳನ್ನು ಬೆಳಗುತ್ತದೆ.

ಮನಸ್ಸನ್ನು ಹಿಡಿತದಲ್ಲಿಟ್ಟಾಗ
ಸುಗಮವಾಗಿ ಬಾಳು ಸಾಗುವುದಾಗ
ಆಸೆಗಳಿಗೆ ಕಡಿವಾಣ ಹಾಕಿದಾಗ
ಬದುಕು ಸುಖತೀರ ಸೇರುವುದಾಗ

ಲೇಖಕಿ- ಎ. ಸರಸಮ್ಮ
ಚಿಕ್ಕಬಳ್ಳಾಪುರ