Table of Contents

ಮಹಾಶಿವರಾತ್ರಿಯಾಗಲಿ ಪ್ರತಿ ರಾತ್ರಿ
ಜಗದಗಲಮುಗಿಲಗಲ ಮಿಗೆಯಗಲ ತುಂಬಿರುವ
ಓ ದೇವ ನಿಮ್ಮ ಕಾಣಬಯಸಿಹುದು ಈ ಜೀವ
ಮಾಘರಾತ್ರಿಯ ರಜತ ಮೇಘಗಳನಿಳಿದು ಬಾ
ಕಂಗಳ ತುಂಬ ತಿಂಗಳನ ತಂಬೆಳಕು ತುಂಬು ಬಾ
ಆಭರಣಗಳನೊಲ್ಲದ ಅಲಂಕಾರವಿಲ್ಲದ ನಿನ್ನ
ಸರಳತೆಯ ನಮಗೂ ಕಲಿಸು ನಾಗಾಭರಣ
ಪಾಲಿಗೆ ಬಂದ ಹಾಲಾಹಲವನೂ ಹಾಲಿನಂತೆ
ಕುಡಿಯುವ ಮುಗ್ಧತೆಯ ಕಲಿಸು ಭಕ್ತಪಾಲ
ಪರಸ್ತ್ರೀಯರನು ಕಣ್ಣೆತ್ತಿ ನೋಡದ ಇಂದ್ರಿಯ
ನಿಗ್ರಹವನು ನಮಗೂ ಕಲಿಸು  ಮಹಾರುದ್ರ
ಕರಪಿಡಿದ ಸತಿಯನು ಅರ್ಧಾಂಗಿಯಾಗಿಸುವ
ಗುಟ್ಟು ಹೇಳಿ ಕೊಡು ಅರ್ಧನಾರಿ ನಟೇಶ್ವರ
ಆಡಂಬರವ ಬಿಡಿಸು ಬಾ ಸಾಂಬ ಸದಾಶಿವ
ಭೂತದಯೆಯ ಪಾಲಿಸು ಓ ಪಶುಪತಿನಾಥ
ಅರಿವಿನ ಕಣ್ಣನು ತೆರೆಯಿಸು ಬಾ ಓ ಮುಕ್ಕಣ್ಣ
ಹರಿಯಲಿ ಪ್ರೇಮಗಂಗೆ ಧರೆಯಾಗಲಿ ಕೈಲಾಸ
ನಿರಾಕಾರಿ ನೀನು ಸಾಕಾರಪ್ರಿಯರು ನಾವು
ಮಿಲನವಾಗಲಿ ಇಂದು ಆತ್ಮ ಪರರಾತ್ಮಗಳ
ಮಲಗಳ ತ್ಯಜಿಸಿ ಸದಾಚಾರಗಳಲಿ ಮಿಂದು
ದುರ್ಗುಣಗಳ ದಹಿಸುವ, ಆ ಭಸ್ಮ ಧರಿಸುವ
‘ಕಾಯಕ’ ತ್ರಿವರ್ಣ ತ್ರಿದಳ ಬಿಲ್ವಪ್ರಿಯ ಶಿವ
ಪಂಚಭೂತ ರಕ್ಷಣೆಯೇ ಪಂಚಾಕ್ಷರಿ ಮಂತ್ರ
ಹಸಿದವರಿಗೆ ತುತ್ತು ಅನ್ನವಿಕ್ಕುವ ಉಪವಾಸ
ಸಕಲ ಜೀವಿಗಳ ಲೇಸ ಬಯಸುವ ಶಿವಧ್ಯಾನ
ಮಹಾಶಿವರಾತ್ರಿಯಾಗಲಿ ಪ್ರತಿಯೊಂದು ರಾತ್ರಿ
ಅನುದಿನ ನಡೆಯಲಿ ಎಚ್ಚರಿಕೆಯ ಜಾಗರಣೆ
ಅಜ್ಞಾನದ ಮಹಾರಾತ್ರಿಯ ಕಳೆ ಕರುಣಾಕರ
ಸುಜ್ಞಾನದ ಬೆಳಕನು ಹರಿಸು ಓ  ಚಂದ್ರಶೇಖರ
– ಡಾ. ಗುರುಸಿದ್ಧಯ್ಯಾ ಸ್ವಾಮಿ
ಅಕ್ಕಲಕೋಟ ಮಹಾರಾಷ್ಟ್ರ
ಮೊಬೈಲ್ 9175547259