Table of Contents

ಪರೀಕ್ಷೆ ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿದೆ
ವಿದ್ಯಾರ್ಥಿಗಳೇ, ಶೈಕ್ಷಣಿಕ ವರ್ಷದ ಕೊನೆಯ ಕೆಲವು ದಿನಗಳನ್ನು ಕಳೆದರೆ ನೀವು ಕಲಿತ ಪಾಠಗಳನ್ನು ಪರೀಕ್ಷೆ ಬರೆದು ಮುಂದಿನ ತರಗತಿಗೆ ಸಿದ್ದರಾಗುವಿರಿ ತಾನೇ? ಹಾಗಾದರೆ ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಯಲ್ಲಿ ಕಲಿಸಿದ ಪಾಠ ಪ್ರವಚನಗಳನ್ನು ನಿಷ್ಠೆಯಿಂದ ನೀವು ಕಲಿತಿರುವಿರಾದರೇ ಪರೀಕ್ಷೆಗೆ ಭಯ ಪಡುವ ಅಗತ್ಯವಿಲ್ಲ. ಫೆಬ್ರುವರಿ ತಿಂಗಳಿನಿಂದ ಏಪ್ರಿಲ್‍ನ ವರೆಗೂ ಪರೀಕ್ಷೆಯು ನಡೆಯುವುದರಿಂದ ವಿದ್ಯಾರ್ಥಿಗಳಿಗೆ ಅದೊಂದು ಹಬ್ಬದ ಸಂಭ್ರಮ. ಹಬ್ಬದ ಸಂಭ್ರಮವನ್ನು ಸಂಭ್ರಮಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.
ತರಗತಿಗೆ ದಾಖಲಾಗುವ ಪ್ರತಿ ವಿದ್ಯಾರ್ಥಿಗಳು ಮುಂದೊಂದು ದಿನ ನಾವು ಪರೀಕ್ಷೆಯನ್ನು ಎದುರಿಸಬೇಕು ಅದಕ್ಕಾಗಿ ಸಿದ್ದರಾಗಬೇಕೆಂಬ ಎಂಬ ವಿಷಯವನ್ನು ಅರಿತಿರುವಾಗ ಭಯಪಡುವ ಅಗತ್ಯವಿಲ್ಲ. ಹಾಗಿದ್ದರೂ ಪರೀಕ್ಷೆ ಎಂದೊಡನೆ ಭಯಭೀತರಾಗುವುದು ಏಕೆ? ಹೆಚ್ಚಿನ ಮಕ್ಕಳು ಅಲ್ಲಿಯವರೆಗೆ ಗಂಭೀರವಾಗಿ ಪಾಠಗಳನ್ನು ಪರಿಗಣಿಸದೆ ಪರೀಕ್ಷೆಯ ಸಮಯದಲ್ಲಿ ತಮಗೆ ತಾವೇ ಪರೀಕ್ಷಾ ಭಯವೆಂಬ ಬೇಲಿಯನ್ನು ರಚಿಸಿಕೊಂಡು ಓದುವ ಪ್ರಯತ್ನ ಮಾಡುತ್ತಾರೆ .ಹೀಗೆ ಮಾಡುವುದರಿಂದ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಲು ಸಾಧ್ಯವಿಲ್ಲ. ಶಾಲೆಯ ಪ್ರಾರಂಭದ ದಿನಗಳಲ್ಲಿ ಮಕ್ಕಳು ತುಂಟಾಟ ಹುಡುಗಾಟದಿಂದ ಕಾಲಹರಣ ಮಾಡಿ , ವರ್ಷಾಂತ್ಯದಲ್ಲಿ ಓದುವ ತಯಾರಿ ನಡೆಸಿದರೆ ಪರೀಕ್ಷೆ ಕಬ್ಬಿಣದ ಕಡಲೆ ಕಾಯಿಯಂತೆ ಆಗುವುದು . ತರಗತಿಯಲ್ಲಿ ಅಂದು ಮಾಡಿದ ಪಾಠಗಳನ್ನು ಅಂದಂದೇ ಓದಿದ್ದರೆ ಇಂದು ಭಯಪಡುವ ಅವಶ್ಯಕತೆ ಇರುತ್ತಿರಲಿಲ್ಲ. .
ಯುದ್ದ ಕಾಲೇ ಶಸ್ತ್ರಾಭ್ಯಾಸ ಎಂಬಂತೆ ಪರೀಕ್ಷೆ ಸಮಯ ಸಮೀಪಿಸುತ್ತಿದಂತೆ ಓದಿನ ತಯಾರಿ ಹೆಚ್ಚಿನ ಮಕ್ಕಳಲ್ಲಿ ಕಾಣುತ್ತದೆ. ಭಯ ಆತಂಕದಿಂದ ಮಕ್ಕಳು ಓದಲು ಪ್ರಾರಂಭಿಸುತ್ತಾರೆ. ಈ ರೀತಿ ಓದುವಿಕೆಯಿಂದ ಮಕ್ಕಳಿಗೆ ಉಪಯೋಗವಾಗುವುದು ಇಲ್ಲ. ನಿದ್ದೆಗೆಟ್ಟು ತಡ ರಾತ್ರಿಯವರೆಗೆ ಓದುವುದರಿಂದ ಬೆಳಗ್ಗಿನ ವೇಳೆ ಆಲಸ್ಯ , ತಲೆನೋವು ಉಂಟಾಗುತ್ತದೆ. ಇನ್ನೇನು 2 ತಿಂಗಳಿದೆ ಪರೀಕ್ಷೆಗೆ ಎನ್ನುವಾಗ ಮನೆಪಾಠಕ್ಕೆ ಹೋಗುತ್ತಾರೆ. ತಿಂಗಳಾನುಗಟ್ಚಲೆ ತರಗತಿಯಲ್ಲಿ ಶಿಕ್ಷಕರು ಮಾಡಿದ ಪಾಠ ಎರಡು ಮೂರು ತಿಂಗಳಲ್ಲಿ ಅರ್ಥವಾಗಲು ಸಾಧ್ಯವೇ ? ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಖಂಡಿತ ಸಾಧ್ಯ. ಕಳೆದ ದಿನಗಳ ನೆನೆದು ಕೊರಗುತ್ತಿರದೆ ನನ್ನಿಂದ ಸಾಧ್ಯ ನಾನು ಮಾಡುತ್ತೇನೆ ಎಂಬ ಆತ್ಮವಿಶ್ವಾಸ ವಿದ್ಯಾರ್ಥಿಗಳಲ್ಲಿ ಮೂಡಿದರೆ ಸಕಲವು ಸಾಧ್ಯ. ಪ್ರಯತ್ನ ನಿಮ್ಮ ಕೈಯಲ್ಲಿದೆ. ಉತ್ತಮ ಫಲಿತಾಂಶ ನಿಮ್ಮ ಆತ್ಮವಿಶ್ವಾಸದಿಂದ ಬರುತ್ತದೆ.
ಇಲ್ಲಿಯವರೆಗೆ ಗೆಳೆಯ ಗೆಳತಿಯರೊಡನೆ ಕಾಲ ಕಳೆದದ್ದು ಸಾಕು , ನಿನ್ನ ಭವಿಷ್ಯ ಉಜ್ವಲವಾಗಿರಬೇಕು ಎಂದಾದರೆ ಅಸ್ಥೆಯಿಂದ ಅಧ್ಯಯನ ಮಾಡಬೇಕು. ಪೋಷಕರ ಕನಸುಗಳ ನನಸಾಗಿಸಲು ಓದಬೇಕು. ಶಿಕ್ಷಕರು ಪೋಷಕರು ನಿಮ್ಮ ಒಳಿತಿಗಾಗಿ ಏನಾದರೂ ಹೇಳಿದರೆ ವಿಷಯವನ್ನು ನಕಾರಾತ್ಮಕವಾಗಿ ತೆಗೆದುಕೊಳ್ಳಬೇಡಿ. ಸಕಾರಾತ್ಮಕ ಚಿಂತನೆಯನ್ನು ರೂಢಿಸಿಕೊಂಡು ನಡೆದರೆ ಯಶಸ್ಸು ಸಾಧ್ಯ. ಇನ್ನು ಉಳಿದಿರುವ ಕೆಲವೇ ಕೆಲವು ದಿನಗಳಲ್ಲಿ ಹೇಗೆ ಓದುವುದೆಂದು ಧೃತಿಗೆಡದೆ, ನೀವು ದೃಡಚಿತ್ತದಿಂದ ಅಧ್ಯಯನ ಮಾಡಿದರೆ ಎಲ್ಲ ಸಾಧ್ಯ. ನನ್ನಿಂದಾಗದು ಎಂಬ ನಕಾರಾತ್ಮಕ ಭಾವ ಬಿಟ್ಟು ನನ್ನಿಂದ ಸಾಧ್ಯ ಎಂಬ ಆತ್ಮವಿಶ್ವಾಸದ ಭಾವವನ್ನು ಮನದಲ್ಲಿ ಬೆಳೆಸುವ ಮೂಲಕ ಓದಿದರೆ ಎಲ್ಲವೂ ಸಾಧ್ಯ.
ಓದುವ ಮೊದಲು ನಿಮ್ಮ ಮನಸನ್ನು ನಿಯಂತ್ರಣದಲ್ಲಿಡಿ , ಕೆಲವು ನಿಮಿಷ ಯೋಗ ಮಾಡಿ, ಚಂಚಲ ಮನಸ್ಸನ್ನು ನಿಗ್ರಹಿಸಿ ಓದಬೇಕು. ಪರೀಕ್ಷೆಯ ವೇಳಾಪಟ್ಟಿಯನ್ನು, ಸೂತ್ರ, ಪ್ರಮೇಯಗಳನ್ನು ಬರೆದು ಕಣ್ಣಿಗೆ ಕಾಣುವ ರೀತಿಯಲ್ಲಿ ಗೋಡೆಗೆ ತೂಗು ಹಾಕಿ. ದಿನಕ್ಕೊಂದು ಪಠ್ಯ ವಿಷಯವನ್ನು ಬರೆದು ಅಭ್ಯಾಸ ಮಾಡಬೇಕು. ಪರೀಕ್ಷೆಗೆ ಉಳಿದಿರುವ ದಿನಗಳಲ್ಲಿ ಮೊಬೈಲ್, ಟಿ.ವಿ , ಮನರಂಜನೆಯನ್ನು ತ್ಯಜಿಸಿ ಗುರಿಯ ಮುಟ್ಟುವ ತವಕ ಹೆಚ್ಚಿಸಿಕೊಳ್ಳಿ. ಪರೀಕ್ಷೆಯ ಭಯದಿಂದ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ.ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯದ ಕಡೆ ಗಮನ ಹರಿಸಿ. ನಿಮ್ಮ ಗುರಿಯತ್ತ ಸಾಗಲು ಇನ್ನೇನು ಕೆಲವು ದಿನಗಳು ಬಾಕಿ ಇದೆ. ಉಳಿದಿರುವ ಆ ಕೆಲವು ದಿನಗಳನ್ನು ಆತ್ಮವಿಶ್ವಾಸದಿಂದ ಸಾಗಲು ನಿರಂತರ ಅಭ್ಯಾಸ ಮಾಡುವ ಮೂಲಕ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಲು ಸಾಧ್ಯ. ನಿಮ್ಮ ಸಾಮರ್ಥ್ಯದ ಬಗ್ಗೆ ವಿಶ್ವಾಸವಿರಲಿ. ಸಾಧಿಸುತ್ತೇನೆ ಎಂಬ ಧೃಡ ಸಂಕಲ್ಪ ಮನದಲ್ಲಿ ಅಚ್ಚಾಗಿರಲಿ.
– ಜಯಂತಿ ರೈ, ಮಡಿಕೇರಿ