ಹೆತ್ತ ತಾಯಿ ಸತ್ತ ಮ್ಯಾಗ
ಹೆಗಲ ಮ್ಯಾಲೆ ಹೊತ್ತ ವೈಯ್ತಾರ
ಗೋರಿ ಮುಂದ ಕುಂತ ಅತ್ತರೇನ
ಹೆತ್ತ ತಾಯಿ ಮರಳಿ ಬರ್ತಾಳಾ..? ||ಪಲ್ಲವಿ||
ಪತಿಯೇ ಪರಮೇಶ್ವರನೆಂದು ತಿಳಿದು ಬಾಳಿ
ರಾತ್ರಿ-ಹಗಲೆನ್ನದೆ ಕಷ್ಟದಾಗ ಕೈ ತೊಳೆದಾಕಿ
ಗಂಡ ಸತ್ತ ಮೂರು ತಿಂಗಳಾಗ ಹೆತ್ತಾಳ ಮಗನ
ಸುಖದ ಸುಪ್ಪತ್ತಿಗೆ ಮ್ಯಾಗ ಬೆಳಸ್ಯಾಳ ಅವನ ||೧||
ಸಾಲ ಮಾಡಿ ಅಂದದ ಮನಿ ಕಟ್ಟಿ
ಮಗನ ಕೈಗಿ ಚೆಂದದ ಸೊಸೆಯ ನಿಟ್ಟಾಳ
ಸೊಸೆ ಬಂದ ಮರುಗಳಿಗ್ಯಾಗ
ವೈಮನಸ್ಸು ಮೂಡ್ಯಾವ ಯಾರಿಗೂ ತಿಳಿಯದ್ಹಂಗ ||೨||
ಹೆಂಡ್ತಿ ಗುಲಾಮನಾಗಿ ಊರಾಗ ತಿರಗ್ಯಾನ
ಎತ್ತ ನೋಡಿದರತ್ತ ದುಷ್ಟರ ಸಂಘ ಮಾಡ್ಯಾನ
ಹೆತ್ತ ಕರುಳ ಮರೆತು ಕಾಲ ಕಳಿಯ್ತಾನ
ತಿಳಿದು-ತಿಳಿಯದ್ಹಂಗ ತುಳಿದು ಹೋಗ್ತಾನ ||೩||
ಹೆತ್ತ ತಾಯಿ ಹಾಸಿಗೀಯ ಹಿಡದಾಳ
ಹೆಂಡ ಕುಡಿದ ಮಗನ ಬೈಗುಳ ಕೇಳ್ಕೊಂತ
ನಟ್ಟ-ನಡು ಓಣ್ಯಾಗ ನಿಂತ ಸೊಸೆ ಹೇಳ್ತಾಳ
ಅತ್ತಿ-ಮಗನ ಕಲಾಗ ಜೀವನ ಬ್ಯಾಸರಾಯ್ತ ||೪||
ಹೆತ್ತ ಕರುಳ ಹೊತ್ತಿ ಉರಿತೈತಿ
ನಡು ಬೀದಿಯೊಳ್ಗ ನಿಂತ ಬಿಕ್ಕಿ-ಬಿಕ್ಕಿ ಅಳತೈತಿ
ಯ್ಯಾಕಾರ ಹುಟ್ಟಿದ್ನಿ ಈ ಭೂಮಿ ಮ್ಯಾಗಂತ
ಭಾರವಾದ ಜೀವ ಗೋರೀಯ ನೆನಸೈತಿ ||೫||
ಮಗನ ನೆನೆಸಿ ಗೋಳ್ಯಾಡಿ ಅಳ್ಕೊಂತ
ಮನದಾಗ ಮರುಗ್ಯಾಳ, ತನ್ನ ಕಷ್ಟ
ಮಗನೀಗಿ ಬಾರದಿರಲಿ ಅಂತ
ದೇವರಿಗಿ ಕೈ ಮುಗಿದು ರೆಪ್ಪೆಯ ಮುಚ್ಚ್ಯಾಳ ||೬||
ಬಾಕಿ ಇರುವ ಲೆಕ್ಕಾ ಚುಕ್ತಾ ಮಾಡಿ
ಹೊಂಟಾಳ ತಾಯಿ ಮಗನ ಹರಿಸಿ
ಕರುಳ-ಬಳ್ಳಿಯ ಬಳಗ ನೋಡಿ
ಕಣ್ಣೀರ ಸುರಿಸ್ತಾನ ಸತ್ತ ತಾಯಿ ನೆನಸಿ ||೭||
ಹೆತ್ತ ತಾಯಿನ್ನ ಹೊತ್ತ ವೈಯ್ತಾರ
ನಟ್ಟ-ನಡು ಓಣ್ಯಾಗ ಹಾಸಿ
ಸುತ್ತಲೆಲ್ಲಾ ನಿಂತ ನೋಡತೈತಿ ಮಂದಿ
ತಿಳಿಯ್ದಾಗೈತಿ ಹುಟ್ಟು-ಸಾವಿನ ನಡುವೆನೈತಿ ||೮||
ಮನಿಗಿ ಬಂದ ಮಂದಿ ಮಗ-ಸೊಸಿಯ ನೋಡಿ
ತಿಳಿದು-ತಿಳಿಯದ್ಹಂಗ ತುಳಿದು ಹೊಂಟಾರ
ಮಂದ ಬುದ್ಧಿ ಎರಚಿದ ದುಷ್ಟರ ನೋಡಿ
ಹೆತ್ತ ಕರುಳ ನೆನೆಸಿ ಹೊಸ್ತಿಲ ಮ್ಯಾಗ ಕುಂತ ಅಳ್ತಾರ ||೯||