ಬದುಕು-ಜೀವನ-ಸಾಧನ
ಬದುಕು ಬಹು ಆಯಾಮಿ ಪದ
ನಾವು ಬಂದು ಹೋಗುವ ನಡುವಿನ ಕಣ್ಣು ಮುಚ್ಚಾಲೆಯಾಟ.
ಆ ಚಾಲಾಕಿ/ಮಾಯಾವಿ ಆಡಿಸುವ ಸೋಲು ಗೆಲುವುಗಳ ಚದುರಂಗದಾಟ.. ದೊಂಬರಾಟ.
ಏರು ಇಳಿತದ ಜೋಕಾಲಿಯಾಟ.
ಅಂತೆಕಂತೆಗಳ ಸಂತೆಯ ಸುಖ-ದುಃಖಗಳ ತೂಕದಾಟ.
ಒಮ್ಮೆ ಸಿಕ್ಕು,ಒಮ್ಮೆ ಬಿಕ್ಕುವಂತೆ ಮಾಡುವ ಜೂಜಾಟ.
ನಾವು ಮಾಡುವ ಕರ್ಮಗಳ ಜತೆ
ವಿಧಿಯು ಆಡುವ ಮೋಜಿನ ಚೆಲ್ಲಾಟ!.
ಈ ತರಹದ ಗದ್ದಲದ/ವೈಭವದ/ವ್ಯಸನದ ಬದುಕಿನ ನಡೆಯಲ್ಲಿ ಯಾರು ನೋಡಿಕೊಳ್ಳುವವರು ತಮ್ಮೊಳಗೆ??!.
ಅಂದಿನದು ಅಂದು ಎನ್ನುತ್ತ ಮುಂದೆ ಹೋಗುವವರೇ!.
ನಮ್ಮೊಳಗೆ ನಾವೇ ನೋಡಿದಾಗ ಅಲ್ಲಿಹವು ಭೀಕರ, ಭೀಭತ್ಸ, ವಿಕಾರ ರೂಪಗಳು!!!
ಸೋಗಿನಲ್ಲಿನ ಭಾವಪಾತ್ರಗಳು!..ವಿವೇಕದ ಸೋಲಿನಿಂದ ಆ ವಿಕಾರಗಳದ್ದೇ ಜಯ..!
ಆರರಿಗಳ ಭೂತ ರಾಜರ ಅಧೀನದ ಜೀತದಾಳಾಗಿ ಹೋಗುವುದು!.. ಮುಂದೆಲ್ಲ?
ನೋವುಗಳೇ ನಮ್ಮ ಸಹವರ್ತಿಗಳು!
ಬದುಕು ಎಂದರೆ????
ಇಷ್ಟಾನಿಷ್ಟಗಳ ನಡುವೆಯೂ
ಸ್ಪಷ್ಟವಾಗಿ ಬಿಡಿಸಬೇಕಾದ
ಕ್ಲಿಷ್ಟಕರವಾದ ಚಿತ್ರವು
ಪರಿಪೂರ್ಣ ಕಲೆಗಾರನಿಗೆ ಉತ್ತಮಾಂಕ
ಸರಿಸುಮಾರಿಗೆ ಅವಮಾನಗಳ ಸುಂಕ!.
ಮನದ ಪ್ರತಿಬಿಂಬದಿ ಬಿಂಬರೂಪಿ ಆ ಅಂಬಿಗ ನಿದ್ದರೆ, ಜಂಭ ದೂರುಳಿದು, ಸುಮನಪ್ರಾಪ್ತಿಯ ಸಂಭವ!.
ಆತ್ಮವಿಶ್ವಾಸ ನಿನ್ನ ಕೈಲಿರುವಾಗ ಸಾಧನೆ ಸಿದ್ಧ.
ಸಾಧನೆ ಎಂಬುದು..
ತಾನಾಗಿಯೇ ಓಡಿಬರುವುದಿಲ್ಲ.
ಅದರೆಡೆಗೆ ನಿರಂತರ ಧಾವಿಸುವುದು.
“ಪೂರ್ಣ ಸಾಧಿಸಿದೆ”, ಅದು ಅಪೂರ್ಣವೇ!
ಶಿಸ್ತು,ಸಂಯಮ,ಪರಿಶ್ರಮ,
ಕ್ರಮಮಬದ್ಧ ಯೋಜನೆ ಗಳಿಂದ
ಗುರಿ ಮುಟ್ಟುವುದು ಸಾಧನೆ👍
ಅನ್ಯರ ಹಿತಾಸಕ್ತಿಗಳ ಪ್ರತಿ ನಿರೀಕ್ಷಿಸದೆ
ಪೂರೈಕೆಯತ್ತ ಮನ್ನುಗ್ಗಿ ಯಶಸ್ವಿಯಾಗುವುದೂ ಸಾಧನೆಯೆ…ಅದು ಸಾಧಿಸಿ ನಿಲ್ಲುವುದಲ್ಲ!!..
________________________________________
ಹೌದು ಚಿಂತೆಯಿಂದ ವ್ಯಥೆ.. ಕಾಲಘಟ್ಟದಲ್ಲಿ ಚಿತೆ?
ಚಿಂತೆ-ಕಾಲ-ಚಿತೆ
ಈ ಅಂತೆ-ಕಂತೆಗಳ ಸಂತೆಯೊಳಗೆ ನಿರಂತರ ಸಂಚರಿಸುವವರಿಗೆ, ಚಿಂತೆಗಳು ಕಾಲಡಿಯಲ್ಲೇ
ಸಿಗುವ ವು. ಅವರ ಮನಸ್ಸಿನ ಗೂಡಿನಲ್ಲಿ ಸುಖಕ್ಕೂ ಒಂದು ಚಿಂತೆಯೇ!.
ಚಿಂತೆಗಳು ಹೊಂಚು ಹಾಕಿ
ಕುಳಿತಿರುತ್ತವೆ!, ದಾಳಿ ಇಡಲು..
ಅವಶ್ಯಕತೆ ಗಿಂತ ಅಧಿಕ ಚಿಂತೆ,
ಮನವ ಚಿತೆಯತ್ತ ನೂಕಿದಂತೆ!.
ವಿಷಮದಿ ಸರಿದು ಹೋಗುತಿರುವ ಕಾಲ,
ಬೇಗ ಸರಿದು ಹೋಗಬಹುದು ಎಂಬ ಚಿಂತೆ!
ಸರಿ ಹೋದರೂ.. ಮುಂದೆ ಸರಿಗಳೇ?ಬೆಸಗಳೆ?
ಎನ್ನುವ ಚಿಂತೆ!. ಚಿಂತೆಗಳಿಂದ ಬಸವಳಿದು ಅಂತ್ಯವಾಗುವ ಜೀವಕ್ಕೆ ಸಮಯವೂ ಸಹಮತ ಕೊಡದು!.. ಕಾಲನ ತೆಕ್ಕೆಗೆ ನೂಕುವುದು.
ಬರೀ ಚಿಂತೆ ಮಾಡುವ ಮನ, ತುಸು ಪರಿಹಾರದ ಹಾದಿ ಹುಡುಕಿದರೆ ವ್ಯಸನದ ಭಾರ ಕಡಿಮೆ.
ಪರರಲ್ಲಿ ಚರ್ಚಿಸಬಹುದಾದ ಚಿಂತೆಗಳು ಬೇಗ ಶಮನಿಸುವವು!… ಒಂಟಿಯ ಮನದ ಚಿಂತೆಗೆ
ತನು ಕಾಲಾಂತ್ಯದ ಜಂಟಿಯಾಗುವ ಭಯ!.
ಚಿಂತೆ ಇಲ್ಲದ ಬದುಕು, ಬೊಂತೆ ಬೊಂತೆ ಕೊಟ್ಟರೂ ಬಾರದು, ಆದರೆ,
ಸದ್ಗುಣವಂತ ಅನಂತಶಯನನ ಕೃಪೆ ಇರುವವರೆಗೆ ಎಲ್ಲವೂ ಸಾಧ್ಯ.
ಆಗ
ಸಂತೆಯಲ್ಲೂ ನಿಶ್ಚಿಂತೆಯಿಂದ ನಿದ್ರೆ ಮಾಡಬಹುದು.!
ನೋಡದ ಕಾಣದ, ಕೇವಲ ಕೇಳಿದ ಅಂತೆ-ಕಂತೆಗಳ ಮನದಲ್ಲೇ ಚಿತೆಯ ಮಾಡಿ ಸುಟ್ಟುಬಿಡಬೇಕು!.. ಇಲ್ಲದಿರೆ ಆ ವ್ಯರ್ಥ ಚಿಂತೆಗಳು ಸಜೀವ ದೇಹವನ್ನೇ ಚಿತೆ ಮಾಡಿ ಬಿಡುವವು!.
ರಚನೆ: ಅ ದೇ ಉವಾಚ