ಆರೋಗ್ಯದ ಗುಟ್ಟು

ಸಾಲು ಸಾಲು ಮರಗಳನ್ನು ನೆಟ್ಟು
ತಮ್ಮ ನೆನಪುಗಳನ್ನು ಅದರಲ್ಲಿ ಇಟ್ಟು
ಹೋದರಲ್ಲ ನಮಗಾಗಿ ಎಲ್ಲಾ ಬಿಟ್ಟು
ಹೇಳುವೆ ಕೇಳಿರಿ ನಾನಿದರ ಗುಟ್ಟು !!

ನೀರೆರೆದು ಪೋಷಿಸಿದ ನಮ್ಮ ಹಿರಿಯರು
ಸ್ವಾರ್ಥ ತೊರೆದು ದೇಶಕ್ಕಾಗಿ ಬಾಳಿದರು
ಸೂರ್ಯ,ಚಂದ್ರರಂತೆ ಪ್ರಕೃತಿ ಶಾಶ್ವತವು
ಮುಂದಿನ ಪೀಳಿಗೆಗೂ ಉಳಿಸಬೇಕು ನಾವು !!

ನಾನು ನನ್ನದು ಎನುವ ಮಾತು ಬರಿಯ ಸುಳ್ಳು
ಬರುವಾಗ ನೀನೇನು ಹೊತ್ತು ತರಲಿಲ್ಲ ಕೇಳು
ಪಡೆದುಕೊಂಡುದು, ಕಳೆದುಕೊಂಡುದು ಎಲ್ಲ ಇಲ್ಲೆ
ಇನ್ನೇಕೆ ನಿನಗೆ ಚಿಂತೆ ನೋವಲ್ಲಿ ನೊಂದು ಬೆಂದೆ !!

ಹೊಂಗೆ ನೆರಳ ತಂಪಿನಲ್ಲಿ ಸ್ವರ್ಗವನ್ನು ಕಂಡೆ
ಮಾವು,ಸೀಬೆ,ಬಾಳೆ,ಪೇರಲೆ ಹಸಿವು ನೀಗಿಸಿದೆ
ಇದೆಲ್ಲವು ನಿನ್ನ ಶ್ರಮದಿಂದಲೆ ಬಂದುದಲ್ಲ
ತಾತ, ಮುತ್ತಾತರು ಮರ ಬೆಳೆಸಿ ಹೋದರಲ್ಲ !!

ಕೇಳಿ ನನ್ನ ಕುಲ ಬಾಂಧವರೆ ಆಲಿಸಿ ಈ ನುಡಿ
ತಿಳಿದು ನೀವು ಬಾಳಿದಾಗ ಸುಖ,ಶಾಂತಿ,ನೆಮ್ಮದಿ
ಕಾಡು ಬೆಳೆಸಿ, ನಾಡು ಉಳಿಸಿ ಮಾಲಿನ್ಯ ತಡೆಗಟ್ಟಿ
ರೋಗ ರುಜಿನ ಕಾಡದು ವಂಶ ಬೆಳೆಸಿ ಉಳಿಸಿ

ಎ.ಸರಸಮ್ಮ
ಚಿಕ್ಕಬಳ್ಳಾಪುರ