ಸಂಕ್ರಮಣ ಎಂದರೆ ಸಂಧಿ ಕಾಲ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸ್ಥಿತ್ಯಂತರ ಮಾಡುವ ಕಾಲವನ್ನು ‘ಸಂಕ್ರಮಣ’ ಅಥವಾ ‘ಸಂಕ್ರಾಂತಿ’ ಎಂದು ಕರೆಯುತ್ತೇವೆ. ಈ ಸಂಕ್ರಮಣಗಳು ವರುಷಕ್ಕೆ ಹನ್ನೆರಡು. ಅದರಲ್ಲಿ ಅತ್ಯಂತ ಮುಖ್ಯವಾದುದು. ಸೂರ್ಯ ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸಮಯ. ಸೂರ್ಯ ಚಲನೆಯಾನುಸಾರದ ಆಧಾರದ ಮೇಲೆ ಈ ಕಾಲವನ್ನು ನಿರ್ಣಯಿಸುವುದರಿಂದ ಅದು ಸಾಮಾನ್ಯವಾಗಿ ಜನವರಿ 14 ಅಥವಾ 15ನೇ ತಾರೀಖು ಬರುತ್ತದೆ. ಇತರ ಭಾರತೀಯ ಹಬ್ಬಗಳನ್ನು ಚಾಂದ್ರಮಾನ ಪಂಚಾಂಗದ ಮೇಲೆ ನಿರ್ಧರಿಸುವುದರಿಂದ ಅವುಗಳನ್ನು ಮಾಸ, ತಿಥಿ ಮತ್ತು ನಕ್ಷತ್ರಗಳ ರೀತ್ಯ ಆಚರಿಸಲಾಗುತ್ತದೆ. ದಕ್ಷಿಣಾಯನ’ದ ಮತ್ತೊಂದು ಹೆಸರು ‘ಪಿತೃಯಾನ’ ಇದು ಪಿತೃ ಸಂಬಂಧ ಕಾರ್ಯಗಳಿಗೆ ಸೂಕ್ತ. ಮಕರ ಸಂಕ್ರಮಣ ಸೂರ್ಯನ ಹಬ್ಬ. ಅಂದು ಸೂರ್ಯರಾಧನೆ ಶ್ರೇಯಸ್ಕರ. ಸೂರ್ಯ ಮಂತ್ರ ಪಠಣೆ, ಸೂರ್ಯ ನಮಸ್ಕಾರ, ‘ಆದಿತ್ಯ ಹೃದಯ’ದ ಪಠಣೆ, ಅರ್ಘ್ಯ ಪ್ರಧಾನ -ಇವು ವಿಹಿತ ಕರ್ಮಗಳು, ಆಧಿ ಭೌತಿಕ, ಆದಿ ದೈವಿಕ, ಆಧ್ಯಾತ್ಮಿಕ – ಎಲ್ಲ ದೃಷ್ಟಿಯಿಂದಲೂ ಸೂರ್ಯ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೈವ. ಬ್ರಹ್ಮ-ವಿಷ್ಣು-ಮಹೇಶ್ವರರ ಸಾಕ್ಷಾತ್ ರೂಪ. ಮಹಾಪಾರ್ವತಿ, ಮಹಾಸರಸ್ವತಿ, ಮಹಾಲಕ್ಷ್ಮೀಯರ ಆವಾಸ ಸ್ಥಾನ. ಸೂರ್ಯ ಜ್ಞಾನ-ಬೆಳಕು ಎರಡರ ಪ್ರದಾಯಕ. ಹೀಗಾಗಿ ಈ ಹಬ್ಬದ ಪ್ರಮುಖ ದೈವ ಆದಿತ್ಯನೇ. ಸೂರ್ಯನ ಮಗ ಶನಿದೇವ. ಪುರಾಣಗಳ ಪ್ರಕಾರ ನಮ್ಮ ಒಂದು ವರುಷ ದೇವತೆಗಳ ಲೆಕ್ಕದಲ್ಲಿ ಒಂದು ದಿನ. ‘ಉತ್ತರಾಯಣ’ ಅವರಿಗೆ ಹಗಲಾದರೆ ‘ದಕ್ಷಿಣಾಯನ’ ರಾತ್ರಿಯ ಕಾಲ. ಸೂರ್ಯ ‘ದಕ್ಷಿಣಾಯನ’ ದಿಂದ ಉತ್ತರಾಯಣಕ್ಕೆ ಪಥ ಸಂಚಲನ ಮಾಡುವ ಸಮಯವೇ ಈ ಮಕರ ಸಂಕ್ರಮಣ. ದಕ್ಷಿಣಾಯನ ತಮಸ್ಸಿನ ಕಾಲ; ‘ಉತ್ತರಾಯಣ’ ಬೆಳಕಿನ ಕಾಲ, ಕತ್ತಲಿನಿಂದ ಬೆಳಕಿಗೆ, ರಾತ್ರಿಯಿಂದ ಹಗಲಿಗೆ, ಅಜ್ಞಾನದಿಂದ ಜ್ಞಾನದೆಡೆಗೆ ಹೋಗುವ ಸಮಯ. ‘ದಕ್ಷಿಣಾಯನ’ದಲ್ಲಿ ಹಗಲು ಕಡಿಮೆಯ ಅವಧಿ. ಉತ್ತರಾಯಣದಲ್ಲಿ ಹಗಲು, ದಿನದಿಂದ ದಿನಕ್ಕೆ ಅಧಿಕವಾಗುವ ಸಮಯ. ಖಗೋಳಶಾಸ್ತ್ರ ರೀತ್ಯ, ದಕ್ಷಿಣ ಅಕ್ಷಾಂಶ ಇಪ್ಪತ್ತೆರಡೂವರೆ ಡಿಗ್ರಿ ಕೋನದಲ್ಲಿರುವ ಮಕರ ವೃತ್ತದ ವೇಳೆ ಸೂರ್ಯ ಕಿರಣಗಳು ನೇರವಾಗಿ ಬೀಳುವ ದಿನ ಡಿಸೆಂಬರ್ 21 ಅಥವಾ 22. ಅಂದು ಅತ್ಯಂತ ಕಡಿಮೆ ಅವಧೀಯ ದಿನ. ಆದರೆ ಭೂಮಿಯು ತನ್ನ ಅಕ್ಷದ ಮೇಲೆ ಚಲಿಸುವುದರಿಂದ ಆ ಚಲನೆಗನುಸಾರವಾಗಿ ಕಾಲ ವ್ಯತ್ಯಾಸವಾಗಿ ಪ್ರಸ್ತುತ ಜನವರಿ 14/15 ಬರುತ್ತದೆ. ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುವ ಮುನ್ಸೂಚನೆಯ ದಿನವೇ ಇದು. ದೇವತೆಗಳು ಎಚ್ಚರದಿಂದಿರುವ ‘ಉತ್ತರಾಯಣ’ ಸಮಯವನ್ನು ಹಿಂದೂ ಧರ್ಮಿಗಳು ಶುಭ ಸಮಯವೆಂದು ಪರಿಗಣಿಸುತ್ತಾರೆ. ದೈವಾನುಗ್ರಹಕ್ಕೆ ಇದು ಅತ್ಯಂತ ಸೂಕ್ತ ಕಾಲವೆಂದೂ ನಂಬುತ್ತಾರೆ. ‘ದೇವಯಾನ’ ಎಂದು ಪರಿಗಣಿಸಲ್ಪಟ್ಟಿರುವ ಈ ಸಮಯ ಎಲ್ಲ ಶುಭ ಕಾರ್ಯಗಳಿಗೆ ಪ್ರಶಸ್ತ. ಸಾಮಾನ್ಯವಾಗಿ ಸೂರ್ಯ-ಶನಿಯರದು ಪಿತೃಪುತ್ರ ವಾತ್ಸಲ್ಯ ಬಾಂಧವ್ಯವಲ್ಲ. ಆದರೂ ವಿಶೇಷವಾಗಿ ಸೂರ್ಯನು ಈ ದಿನದಂದು ಶನಿಯ ದರ್ಶನಕ್ಕಾಗಿ ಅವನ ಮನೆಗೆ ಹೋಗುವ ನಂಬಿಕೆಯಿದೆ. ಅಂದು ಶನಿಯ ಪ್ರೀತ್ಯರ್ಥ ಎಳ್ಳು ದಾನ ಮಾಡುವ ಸಂಪ್ರದಾಯ ಬಂದಿದೆ. ಸೂರ್ಯ-ಶನಿಯರ ಸಮಾಗಮದ ದಿನವನ್ನು ಮುರಿದ ಸಂಬಂಧಗಳನ್ನು ಬೆಸೆಯುವ ಶುಭ ಸಮಯವೆಂದು ಪರಿಗಣಿಸಲಾಗುತ್ತದೆ. ಅದಕ್ಕೆಂದೆ ಇಂದಿಗೂ ಮಹಾರಾಷ್ಟ್ರ, ಕರ್ನಾಟಕ ಮುಂತಾದ ಪ್ರದೇಶಗಳಲ್ಲಿ ಸ್ನೇಹಿತರಿಗೆ, ಬಂಧುಗಳಿಗೆ ಸಕ್ಕರೆ ಅಚ್ಚು, ಎಳ್ಳು, ಕಬ್ಬು ಹಣ್ಣುಗಳನ್ನು ನೀಡಿ ಶುಭ ಹಾರೈಸುತ್ತಾರೆ. ‘ಎಳ್ಳು ತಿಂದು ಒಳ್ಳೆಯ ಮಾತನಾಡಿ’ ಎಂಬ ನಾಣ್ಣುಡಿ ಪ್ರಚಲಿತವಾಗಿದೆ. ಎಳ್ಳು ದಾನ ಮಾಡುವುದು ಅನಿಷ್ಟ ಪರಿಹಾರಕ. ಆದರೆ ಅದನ್ನು ಸ್ವೀಕರಿಸುವವರು ನೇಮನಿಷ್ಠರಾಗಿದ್ದು ಅದರ ಸ್ವೀಕಾರಕ್ಕೆ ಅರ್ಹರಾಗಿರಬೇಕು.

ಜನವರಿ, 2024/4 ಮಹಾವಿಷ್ಣುವು ರಾಕ್ಷಸರ ಸಂಹಾರ ಮಾಡಿ ಅವರ ಶಿರಗಳನ್ನು ಮಂದಾರ ಪರ್ವತದಲ್ಲಿ ಹೂಳಿದನೆಂದೂ ಆ ದೈತ್ಯ ನಿರ್ನಾಮದ ಅಂತಿಮ ದಿನವೇ ಮಕರ ಸಂಕ್ರಾಂತಿಯೆಂದೂ ಕೆಲವು ಪುರಾಣಗಳ ಕಥೆಗಳಿವೆ. ದುಷ್ಟಶಕ್ತಿಗಳ ದಮನದ ಸಂಕೇತವಾಗಿಯೂ ಹಬ್ಬವನ್ನು ಪರಿಗಣಿಸುತ್ತಾರೆ. ಮನುಷ್ಯನಲ್ಲಿರುವ ಅರಿಷಡ್ವರ್ಗಗಳ ನಿರ್ಮೂಲನ ಸಂಕಲ್ಪಕ್ಕೆ ಈ ದಿನ ಸೂಕ್ತವೆಂದು ನಂಬಲಾಗಿದೆ. ಇಚ್ಛಾಮರಣಿಯಾದ ಭೀಷ್ಮನು ಮಹಾಭಾರತದ ಯುದ್ಧದಲ್ಲಿ ಪರಾಜಿತನಾದ ನಂತರ ಶರಶಯ್ಯೆಯಲ್ಲಿದ್ದು ಉತ್ತರಾಯಣ ಪರ್ವಕ್ಕಾಗಿ ಕಾಯುತ್ತಿದ್ದು ಮಾಘಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿಯಂದು ದೇಹ ತ್ಯಾಗ ಮಾಡಿದನೆಂದು ಉಲ್ಲೇಖವಿದೆ. ಆ ದಿನವನ್ನು ‘ಭೀಷ್ಮಾಷ್ಟಮಿ’ ಎಂದು ಆಚರಿಸಲಾಗುತ್ತದೆ. ಉತ್ತರಾಯಣದಲ್ಲಿ ದೇಹ ತ್ಯಾಗ ಮಾಡಿದವರು ಮೋಕ್ಷಕ್ಕೆ ಅರ್ಹರು ಎಂಬ ನಂಬಿಕೆಯಿದ್ದು, ಭಗವದ್ಗೀತೆಯಲ್ಲಿ ಈ ಬಗ್ಗೆ ಆಧಾರವಿದೆ. ಸಗರ ಚಕ್ರವರ್ತಿಯ ಮಕ್ಕಳು ಕಪಿಲ ಮುನಿಯ ಶಾಪದಿಂದ ಸುಟ್ಟು ಬೂದಿಯಾದಾಗ, ಚಕ್ರವರ್ತಿ ವಿಶಾಪಕ್ಕಾಗಿ ಮುನಿಯನ್ನಾಶ್ರಯಿಸುತ್ತಾನೆ. ಆಗ ಕಪಿಲ ಮುನಿ ದೇವ ಗಂಗೆ ಆ ಬೂದಿಗಳ ಮೇಲೆ ಹರಿದಾಗ ಶಾಪ ವಿಮೋಚನೆ ಎಂದು ಅನುಗ್ರಹಿಸುತ್ತಾನೆ, ಆ ವಂಶದಲ್ಲಿ ಮುಂದೆ ಬಂದ ಭಗೀರಥ ಶತಪ್ರಯತ್ನ ಮಾಡಿ ಬಲು ಸಾಹಸದಿಂದ ದೇವ ಗಂಗೆಯನ್ನು ಭೂಮಿಗೆ ಶಿವನ ಜಟೆಯ ಮೂಲಕ ತರುತ್ತಾನೆ. ಆ ಗಂಗೆ ಸಗರ ಚಕ್ರವರ್ತಿಯ ಮೃತ ಮಕ್ಕಳ ಬೂದಿಯ ಮೇಲೆ ಹರಿದು ಅವರಿಗೆ ಶಾಪ ವಿಮೋಚನೆಯಾಗುತ್ತದೆ. ಆ ದಿನ ಮಕರ ಸಂಕ್ರಾಂತಿಯ ಶುಭವೇಳೆ. ಭಗೀರಥನ ಪ್ರಯತ್ನದಿಂದ ಗಂಗೆ ಬಂದಳಾದ ಕಾರಣ ಆ ನದಿಗೆ ಭಾಗೀರಥಿ ಎಂದೂ ಹೆಸರಿದೆ. ಸಂಕ್ರಮಣದ ದಿನ ನದಿಗಳಲ್ಲಿ ಸ್ನಾನ ಮಾಡುವುದು, ತರ್ಪಣ ಕೊಡುವುದು ಪುಣ್ಯಪ್ರದ. ನದಿಗೆ ಬಾಗಿನ ಕೊಡಬೇಕೆನ್ನುವವರು ಈ ದಿನಕ್ಕಾಗಿ ಕಾದು ಅಂದು ಸೂರ್ಯೋದಯವಾದನಂತರ ಮಧ್ಯಾಹ್ನದ ಒಳಗೆ ಬಾಗಿನ ಕೊಡುವುದು ಸಂಪ್ರದಾಯವಾಗಿದೆ. ಈ ದಿನದ ನಿಖರತೆಯ ಮೇರೆಗೆ ಅನೇಕ ದೇಗುಲಗಳ ಶಿಲ್ಪಗಳು ನಿರ್ಮಾಣವಾಗಿರುವುದು ಕಂಡು ಬರುತ್ತದೆ. ಉದಾಹರಣೆಗೆ, ಶೃಂಗೇರಿಯಲ್ಲಿರುವ ಶ್ರೀ ಶಂಕರ ದೇವಾಲಯದ ದ್ವಾದಶ ಕಲ್ಲು ಕಂಬಗಳು ಹನ್ನೆರಡು ರಾಶಿಗಳನುಸಾರವಾಗಿ ಕಟ್ಟಲಾಗಿದ್ದು, ಸೂರ್ಯನು ಆ ರಾಶಿಯನ್ನು ಪ್ರವೇಶಿಸಿದ ದಿನದಿಂದ ಹಿಡಿದು ಅವನು ಮುಂದಿನ ರಾಶಿಗೆ ನಿರ್ಗಮಿಸು ವವರೆವಿಗೂ ಮೊದಲ ಕಿರಣಗಳು ಆ ಕಂಬದ ಮೇಲೆ ಬೀಳುತ್ತವೆ. ಕೇರಳದ ಶಬರಿಮಲೈ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ಮಕರ ಸಂಕ್ರಾಂತಿಯಂದು ‘ಮಕರ ಜ್ಯೋತಿ’ ದೂರದ ಬೆಟ್ಟದಲ್ಲಿ ಮಿನುಗುವುದನ್ನು ಭಕ್ತರು ಎದುರು ನೋಡುತ್ತಿರುತ್ತಾರೆ. ವಿಶೇಷವೆಂದರೆ, ಅಯ್ಯಪ್ಪಸ್ವಾಮಿಯ ಧಾರಣೆಗೆಂದು ಸಮೀಪದ ಅರಮನೆಯಿಂದ ಗರ್ಭಗುಡಿಗೆ ‘ತಿರುವಾಭರಣ’ಗಳನ್ನು ತರುತ್ತಿದ್ದ ಹಾಗೆ ಈ ಜ್ಯೋತಿ ಅಸ್ತಂಗತವಾಗುತ್ತದೆ. ಅಯ್ಯಪ್ಪಸ್ವಾಮಿಯು ತನ್ನ ಬಾಲ್ಯವನ್ನು ಆ ಅರಮನೆಯಲ್ಲಿ ಕಳೆದನೆಂಬ ಪ್ರತೀತಿಯಿದೆ. ಅದೇ ದಿನ ಅಲ್ಲಿಗೆ ಸುಮಾರು ನಾಲ್ಕು ಕಿಲೋಮೀಟರ್ ‘ಪೊನ್ನಂಬಳಮೇಡು’ ಎಂಬ ಬೆಟ್ಟದಲ್ಲಿ ಕರ್ಪೂರಗಳನ್ನು ದೊಡ್ಡ ಹರಿವಾಣಗಳಲ್ಲಿರಿಸಿ ಹತ್ತಿಸಿ ಆ ಜ್ವಾಲೆಯನ್ನು ‘ಮಕರ ವಿಳಕ್ಕು’ ಎಂದು ಗುರುತಿಸುವುದು ರೂಢಿಯಲ್ಲಿದೆ. ಬೆಂಗಳೂರಿನ ಗವಿಪುರಂ ಬಡಾವಣೆಯಲ್ಲಿರುವ ಗವಿಗಂಗಾಧರೇಶ್ವರ ಸ್ವಾಮಿಯ ದೇಗುಲದಲ್ಲಿ ಮಕರ ಸಂಕ್ರಾಂತಿಯಂದು ಸಂಜೆ ಸೂರ್ಯನ ಕಿರಣಗಳು ನಂದಿಯ ಎರಡು ಕೊಂಬುಗಳ ಮಧ್ಯೆ ಹಾದು ಶಿವಲಿಂಗದ ಮೇಳೆ ಸುಮಾರು ಒಂದು ಗಂಟೆಯ ಕಾಲ ಬೀಳುತ್ತವೆ. ಇದು ನಮ್ಮ ಪೂರ್ವಿಕರ ಆಧ್ಯಾತ್ಮಿಕ ಭಾವನೆಗೂ ಹಾಗೂ ಖಗೋಳಶಾಸ್ತ್ರದ ಜ್ಞಾನಕ್ಕೂ ಪ್ರತ್ಯಕ್ಷ ಸಾಕ್ಷಿಯಾಗಿದೆ. ಈ ದಿನದಂದು ಜ್ಯೋತಿ ಅಥವಾ ಬೆಳಕಿನ ದರ್ಶನ ದೇವತೆಗಳನ್ನೊಳಗೊಂಡಂತೆ ಸಮಸ್ತರಿಗೂ ಶುಭಕರ ಎಂಬುದು ಇದರಿಂದ ವೇದ್ಯವಾಗುತ್ತದೆ. ಪೌರಾಣಿಕವಾಗಿ, ‘ಸಂಕ್ರಾಂತಿ’ ಎಂಬ ದೇವತೆಯು ‘ಶಂಕಾರಾಸುರ’ ಎಂಬ ರಾಕ್ಷಸನನ್ನು ಈ ದಿನ ಸಂಹಾರ ಮಾಡಿದಳೆಂತಲೂ ಅದಕ್ಕೆಂದೆ ಈ ಹಬ್ಬಕ್ಕೆ ಸಂಕ್ರಾಂತಿ ಎಂಬ ಹೆಸರು ಬಂದಿದೆಯೆಂದೂ ಹೇಳುತ್ತಾರೆ. ಇದೇನೆ ಇರಲಿ, ಇಂಗ್ಲಿಷ್ ಕ್ಯಾಲೆಂಡರ್ ಅನ್ವಯ ಮೊಟ್ಟ ಮೊದಲು ಬರುವ ಭಾರತೀಯರೆಲ್ಲರೂ ಆಚರಿಸುವ ಹಿಂದೂ ಹಬ್ಬ ಇದೆಯೆಂಬುದು ನಿರ್ವಿವಾದ. ಸಾಂಸ್ಕೃತಿಕವಾಗಿಯೂ ಇದೊಂದು ಗಮನಾರ್ಹ ಹಬ್ಬವೇ. ಇದು ಸುಗ್ಗಿಯ ಕಾಲವಾಗಿದ್ದು ಹೊಸ ಬೆಳೆ ಬಂದಿರುವುದರಿಂದ ರೈತರೆಲ್ಲರೂ ಬಹು ಸಂಭ್ರಮದಿಂದ ಇದನ್ನು ಆಚರಿಸುತ್ತಾರೆ. ಹೊಸ ಫಸಲು ಬರಲು ಶ್ರಮವಹಿಸಿ ದುಡಿದ ಎತ್ತುಗಳನ್ನು ಸಿಂಗರಿಸಿ ಅವುಗಳನ್ನು ಬೆಂಕಿಯನ್ನು ಜಿಗಿಯುವ ಹಾಗೆ ಮಾಡಿ ಖುಷಿ ಪಡುತ್ತಾರೆ. ನೂತನವಾಗಿ ಕೊಯ್ಲು ಮಾಡಿದ ಕಬ್ಬು, ಸಿಹಿ ಕುಂಬಳಕಾಯಿ, ಗೆಣಸು, ಅವರೆ ಕಾಯಿಗಳನ್ನು ದೇವರಿಗೆ ನೈವೇದ್ಯ ಮಾಡುವುದು ಕರ್ನಾಟಕದಲ್ಲಿ ಪದ್ಧತಿಯಲ್ಲಿದೆ. ಈ ಹಬ್ಬ ನಾಲ್ಕು ದಿನಗಳ ಹಬ್ಬ. ಮೊದಲನೆಯ ದಿನ ಭೋಗಿ, ಅಂದು ಹಳೆಯ ಬಟ್ಟೆಗಳನ್ನು ಬಿಸುಟು ನೂತನ ವಸ್ತ್ರಧಾರಣೆ ಮಾಡುವುದು ಹೊಸ ಜೀವನಕ್ಕೆ ನಾಂದಿ ಹಾಡುವುದರ ಸಂಕೇತ. ಎರಡನೆಯ ದಿನ ‘ಪೊಂಗಲ್’ ಆ ದಿನ ಹಾಲು ಕಾಯಿಸಿ ಉಕ್ಕಿಸುವುದು ಸಮೃದ್ಧಿಯ ಸೂಚಕ. ‘ಮಾಟ್ಟು ಪೊಂಗಲ್’ ಆಚರಣೆ ಮೂರನೆಯ ದಿನ. ಅಂದು ಗೋ ಪೂಜೆಗೆ ಮೀಸಲು ಕೃತಜ್ಞತಾ ಭಾವನೆಗಳನ್ನು ಜನರಲ್ಲಿ ಜ್ಞಾಪಿಸುವ ದಿನ. ಕೊನೆಯ ದಿನ ‘ಕನುಮ’ ಬಂಧು ಬಾಂಧವರೊಂದಿಗೆ ಸಮೀಪದ ಪ್ರೇಕ್ಷಣಾರ್ಹ ಸ್ಥಳಗಳಿಗೆ ಭೇಟಿ ಮಾಡಿ ಸೋದರ ಸೋದರಿ ಸಂಬಂಧಗಳನ್ನು ಉತ್ಕರ್ಷಿಸುವ ಕಾಲ. ಉತ್ತರ ಭಾರತದ ಕಡೆ ಈ ದಿನ ಗಾಳಿಪಟವನ್ನು ಹಾರಿಸುವುದೂ ರೂಢಿಯಲ್ಲಿದೆ. ಅಂತರಿಕ್ಷದಲ್ಲಿ ಗಾಳಿಪಟವನ್ನು ಹಾರಿಸುವುದು ಕೇವಲ ವಿನೋದಕ್ಕಾಗಿ ಮಾತ್ರವಲ್ಲ. ಸಂಕ್ರಮಣದ ದಿನವೇ ಇದನ್ನು ಆಚರಿಸುವುದರಲ್ಲಿ ಸಂದೇಶವೂ ಇದೆ. ಮಕರ ಸಂಕ್ರಾಂತಿಯ ಪರ್ವದಿನ ಗಾಳಿ ಒಂದೇ ದಿಕ್ಕಿನಲ್ಲಿ ಬೀಸದೆ ಎಲ್ಲ ದಿಕ್ಕುಗಳಲ್ಲಿಯೂ ಬೀಸುತ್ತಿರುತ್ತದೆ.

ಜನವರಿ, 2024/ 5 ಪಟವನ್ನು ಹಾರಿಸುವುದು, ಅದರ ಸೂತ್ರವನ್ನು ಗಾಳಿಯ ಚಲನೆಗೆ ತಕ್ಕಂತೆ ನಿಯಂತ್ರಣ ಮಾಡುವುದು ಸ್ವಲ್ಪ ಕಷ್ಟದ ಕೆಲಸ. ಪಟ ಉನ್ನತ ಬದುಕಿನ ಸಂಕೇತ. ಔನ್ನತ್ಯದ ಬದುಕು ನಡೆಯಿಸಲು ಎಲ್ಲ ಕಡೆಯಿಂದಲೂ ಅಡ್ಡಿ ಆತಂಕಗಳು. ಅವುಗಳೆಲ್ಲವನ್ನೂ ನಿಯಂತ್ರಿಸಿ ಗುರಿ ಸಾಧಿಸುವುದು ಸಾಧನೆಯ ಸಂಕೇತ. ಸೂತ್ರ ನಿಯಂತ್ರಣ ಮಾನವನ ಕೈಯಲ್ಲಿದ್ದರೂ ಗಾಳಿಯ ಚಲನೆ ದೈವ ನಿಯಾಮಕ. ಪುರುಷ ಪ್ರಯತ್ನಕ್ಕೆ ಪರಮಾತ್ಮನ ಕೃಪೆಯಿದ್ದರೇನೆ ಫಲ ಎಂಬುದು ನಿಜ. ಸೂತ್ರವಾದರೋ ಬದುಕಿನ ಒತ್ತಡಗಳ ಪ್ರತೀಕ. ಅದರ ನಿಯಂತ್ರಣ-ಸಮತೋಲನವಿದ್ದರೇನೆ ಬದುಕು ಸಹನೀಯ. ವೈಜ್ಞಾನಿಕವಾಗಿಯೂ ಸೂರ್ಯನ ಬಿಸಿಲು ದೇಹಕ್ಕೆ ಆರೋಗ್ಯಕರ. ಸಾಧ್ಯವಾದಷ್ಟೂ ಆ ಬಿಸಿಲಿಗೆ ಶರೀರವನ್ನೊಡ್ಡುವುದು ಅವಶ್ಯಕ ಇತ್ಯಾದಿ ಸಂದೇಶಗಳಿವೆ. ಈ ಹಬ್ಬಕ್ಕೆ ಕರ್ನಾಟಕದಲ್ಲಿ ಇನ್ನೂ ಕೆಲವು ಸಂಪ್ರದಾಯ ಗಳಿವೆ. ಹಬ್ಬದ ದಿನ ‘ಪೊಂಗಲ್’ ಸಿಹಿಯ ಜೊತೆಗೆ ‘ಅಕ್ಕಿ ಹೆಸರು ಬೇಳೆಯಿಂದ ಮಾಡಿದ ‘ಕಿಚಡಿ’ ನೈವೇದ್ಯ ಸಮರ್ಪಣೆ, ಮಕ್ಕಳಿಗೆ ಕಬ್ಬು, ಕುಸುರಿಕಾಳು, ಎಲಚೆಹಣ್ಣು, ಬಂಗಾರದ ನಾಣ್ಯಗಳಿಂದ ಅಭಿಷೇಕ, ಆರತಿ ಕೆಲವರಲ್ಲಿದ್ದರೆ ಮತ್ತೆ ಹಲವರು ಪ್ರಥಮ ಪುತ್ರೋತ್ಸವವಾಗಿದ್ದರೆ ಬಂಗಾರದ ಅಥವಾ ಬೆಳ್ಳಿಯ ಬಾಲಕೃಷ್ಣನ ವಿಗ್ರಹವನ್ನು ಎಳ್ಳಿನೊಂದಿಗೆ ಬೀರುತ್ತಾರೆ. ಸಂಪ್ರದಾಯಸ್ಥ ಹೆಣ್ಣು ಮಕ್ಕಳು, ಮದುವೆಯಾದ ಮೊದಲ ವರ್ಷ ಐದು ಹಣ್ಣುಗಳನ್ನು ಬೀರಿ, ಪ್ರತಿವರ್ಷ ಐದರಂತೆ ಹೆಚ್ಚಿಸುತ್ತಾ ಕೊನೆಯ ಅಥವಾ ಐದನೆಯ ವರುಷ ಇಪ್ಪತೈದು ಹಣ್ಣುಗಳನ್ನು ಬೀರುವುದು ಮಂಗಳ ಸೂಚಕ ಎಂದು ನಂಬುತ್ತಾರೆ. ಒಟ್ಟಿನಲ್ಲಿ ಸಡಗರ ಸಂಭ್ರಮಗಳಿಂದ ಕೂಡಿದ ಹಬ್ಬ ಇದಾಗಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ವರುಷದ ಸಂಕ್ರಾಂತಿ ನಮ್ಮೆಲ್ಲರ ಬಾಳಿನಲ್ಲಿ ಜ್ಯೋತಿಯನ್ನು ಬೆಳಗಲಿ ಎಂದು ಹಾರೈಸೋಣ.

ಲೇಖಕರು:
ಡಾ. ಗುರುರಾಜ ಪೋಶೆಟ್ಟಿಹಳ್ಳಿ
(ಪ್ರಣವ) ಸಂಸ್ಕೃತಿ ಚಿಂತಕರು
#781, 1ನೇ ಮಹಡಿ, 10ನೇ
ಮುಖ್ಯರಸ್ತೆ, ಬನಶಂಕರಿ 1ನೇ
ಹಂತ, ಬೆಂಗಳೂರು-560 050
ಮೊ.: 9739369621