ಸಾವಯವ ಕೃಷಿ
ನಾವು ಸೇವಿಸುತ್ತಿರುವ ಆಹಾರ, ನೀರು, ಗಾಳಿ ಮುಂತಾದವು ಕಲುಷಿತಗೊಂಡು ಮನುಕುಲ ಮತ್ತು ಪ್ರಾಣಿ ಸಂಕುಲಗಳು ಸಂಕಷ್ಟಕ್ಕೆ ಸಿಲುಕಿವೆ. ಆಧುನಿಕ ಕೃಷಿ ಪದ್ಧತಿಯ ಅನುಕರಣೆಯಿಂದ ಕೃತಕ ವಸ್ತುಗಳಾದ ರಾಸಾಯನಿಕ ಗೊಬ್ಬರ, ಪೀಡೆನಾಶಕ, ಕೀಟನಾಶಕ, ಕಳೆನಾಶಕ ಹಾಗೂ ಸಸ್ಯ ವರ್ಧಕಗಳ ಬಳಕೆಯಿಂದ ಸಾಧ್ಯವಾದ ಹಸಿರುಕ್ರಾಂತಿ ನಿರಂತರ ಹಸಿರು ಕ್ರಾಂತಿಯಾಗಿ ಪರಿವರ್ತನೆಗೊಳ್ಳುವುದು ಅವಶ್ಯವೆನಿಸಿದೆ. ಆಧುನಿಕ ಕೃಷಿಯಿಂದ ಹೆಚ್ಚಿನ ಆಹಾರ ಉತ್ಪಾದನೆ, ಸ್ವಾವಲಂಬನೆ ಹಾಗೂ ಕೃಷಿ ಪ್ರಗತಿ ಸಾಧ್ಯವಾಯಿತು. ಆದರೆ ಶಿಫಾರಸು ಮಾಡಿದ ಅಥವಾ ಬೆಳೆಯ ಅವಶ್ಯಕತೆಗನುಗುಣವಾಗಿ ರಸಗೊಬ್ಬರ, ನೀರಾವರಿ, ಪೀಡೆನಾಶಕಗಳನ್ನು ಬಳಸದೆ, ರಸಗೊಬ್ಬರದ ಜೊತೆಗೆ ಸಮಗ್ರ ರೀತಿಯಿಂದ ಸಾವಯವ ಗೊಬ್ಬರ ಇತ್ಯಾದಿಗಳ ಕಡೆ ಹೆಚ್ಚು ಗಮನಕೊಡದೆ ಅಸಮರ್ಪಕ ಕೃಷಿ ಪದ್ಧತಿಗಳ ಮಣ್ಣಿನಲ್ಲಿ ಸಾವಯವದ ಅಂಶ ಕಡಿಮೆಯಾಗುತ್ತಿದೆ. ಆರೋಗ್ಯ ಕೆಟ್ಟಿದೆ. ಉಪ್ಪು, ಕ್ಷಾರ, ಜವಳು, ಹೆಚ್ಚಾಗಿ ಲಘು ಪೋಷಕಾಂಶಗಳ ಕೊರತೆ, ಅಬಾಧಿತ ಕೀಟ ಮತ್ತು ರೋಗಗಳು, ಭೂಮಿ ಬರಡುತನ, ಹೀಗೆ ವಿವಿಧ ಸಮಸ್ಯೆಗಳು ಉದ್ಭವಿಸಿವೆ. ಮಣ್ಣಿನ ಪರಿಸರ ಕೆಟ್ಟು ಬೆಳೆ ಉತ್ಪಾದನೆಯಲ್ಲಿ ಸ್ಥಿರತೆ ಕಾಪಾಡಿಕೊಂಡು ಬರಲು ಸಾಧ್ಯವಾಗುತ್ತಿಲ್ಲ. ಮಣ್ಣಿನಲ್ಲಿ ತೇವಾಂಶ ಸಂಗ್ರಹಿಸುವ ಹಾಗೂ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದೆ. ನಮ್ಮ ದೇಶದಲ್ಲಿ 16.5 ಮಿಲಿಯನ್ ಟನ್ನಷ್ಟು ರಸಗೊಬ್ಬರಗಳನ್ನು ಬಳಕೆ ಮಾಡುತ್ತಿದ್ದು, ನಮ್ಮ ಬೆಳೆಗಳ ಒಟ್ಟು ಪೋಷಕಾಂಶಗಳ ಬೇಡಿಕೆ ಪ್ರಮಾಣ 24 ಮಿಲಿಯನ್ ಟನ್ನಷ್ಟಿದೆ. ರೈತನು ಉತ್ಪಾದನಾ ಮಟ್ಟ ಕಾಯ್ದುಕೊಳ್ಳಲು ಹೆಚ್ಚು ಉತ್ಪಾದನೆಗೊಳಿಸುವ ಅಪೇಕ್ಷೆಯಿಂದ ಹೆಚ್ಚು ಹೆಚ್ಚು ರಸಗೊಬ್ಬರ, ಕೀಟನಾಶಕ, ಪೀಡೆನಾಶಕಗಳ ಬಳಕೆ ಮಾಡಿ ಕೃಷಿ ವೆಚ್ಚ ಹೆಚ್ಚಾಗಿ ನಿವ್ವಳ ಆದಾಯ ಕಡಿಮೆ ಮಾಡಿಕೊಂಡು ಕೃಷಿ ಲಾಭದಾಯಕವಲ್ಲವೆಂದೂ ನಿಟ್ಟುಸಿರು ಬಿಡುತ್ತಿದ್ದಾನೆ. ಇದಕ್ಕೆ ಸೋತು ಪ್ರಗತಿಪರ ದೇಶಗಳಲ್ಲಿ ಪರ್ಯಾಯ ಕೃಷಿ ವ್ಯವಸ್ಥೆ ಕಂಡುಕೊಳ್ಳುವ ದಿಸೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿ ಸಾವಯವ ಕೃಷಿ, ಬದಲಿ ಕೃಷಿ, ಪರ್ಯಾಯ ಕೃಷಿ ಅಥವಾ ನೈಸರ್ಗಿಕ ಕೃಷಿಯ ಕಡೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಇದರಿಂದ ಕೃಷಿ ಲಾಭದಾಯಕ ಮತ್ತು ನಿರಂತರವಾಗಿ ತ್ತು ಸುಸ್ಥಿರವಾಗಿ ಕಾಪಾಡಿಕೊಂಡು ಬರುವ ಸಂಕಲ್ಪ ಹೊಂದಿದ್ದಾರೆ. ಈ ದಿಸೆಯಲ್ಲಿ ನಮ್ಮ ದೇಶದಲ್ಲಿ ಸಾವಯವ ಕೃಷಿಗೆ ಈಗ ಹೆಚ್ಚು ಚಾಲನೆ ಬಂದಿರುವುದು ಬಹಳ ಸಂತೋಷ. ಇದು ಸ್ಥಿರ ಕೃಷಿಗೆ ದಾರಿ ಮಾಡಿ ಕೊಡಬಲ್ಲದು.
ಸ್ಥಿರ ಕೃಷಿ ಎಂದರೆ ನೈಸರ್ಗಿಕ ಸಂಪನ್ಮೂಲಗಳ ಸೂಕ್ತ ಉಪಯೋಗವನ್ನು ಬದಲಾಗುತ್ತಿರುವ ಮಾನವ ಬೇಡಿಕೆಗಳ ಪೂರೈಕೆಗೆ ಉಪಯೋಗಿಸುವುದರ ಜೊತೆಗೆ ಪರಿಸರವನ್ನು ಕಾಯ್ದುಕೊಂಡು ಬರುವುದು, ಸಮೃದ್ಧಿಪಡಿಸುವುದು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ಪರಿಸರವನ್ನು ಸಂರಕ್ಷಿಸುವುದು.
ಸಾವಯವ ಕೃಷಿ ಅಂದರೆ ಕೃಷಿಯಲ್ಲಿ ಸಾವಯವ ಪದಾರ್ಥಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಹಾಗೂ ಉತ್ಪಾದಕತೆ ಹೆಚ್ಚಿಸುವುದು. ತನ್ಮೂಲಕ ಸ್ವಾಭಾವಿಕ ಜೈವಿಕ ಕ್ರಿಯೆಗಳನ್ನು ತ್ವರಿತಗೊಳಿಸುವುದು, ಉತ್ಪಾದಕತೆ ಹೆಚ್ಚಿಸಿ ಸ್ಥಿರಗೊಳಿಸುವುದು ಮತ್ತು ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸಿ ನಿವ್ವಳ ಲಾಭ ಹೆಚ್ಚಿಸುವುದು. ಸಾವಯವ ಕೃಷಿ ಎಂದರೆ ರಸಗೊಬ್ಬರಗಳ / ಪೀಡೆನಾಶಕಗಳ / ರಾಸಾಯನಿಕಗಳ ಬಳಕೆ ಮಾಡದೇ ಕೃಷಿ ಕೈಗೊಳ್ಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಕೃಷಿ ಪದ್ಧತಿಗಳಲ್ಲಿ ಅಮೂಲಾಗ್ರ ಬದಲಾವಣೆಯನ್ನು ತಂದು ನಿಸರ್ಗಕ್ಕೆ ಪೂರಕ ಕೃಷಿಯನ್ನು ಅನುಸರಿಸುವುದು. ನಿಸರ್ಗದ ಕಡೆ ನಮ್ಮ ಒಲವು ತೋರಿಸಬೇಕು. ಅದರ ಜೊತೆಗೂಡಿ ಲಭ್ಯವಿರುವ ಬೆಳಕು, ನೀರು, ಗಾಳಿ ಹಾಗೂ ಪ್ರಕೃತಿಯನ್ನು ಸಮರ್ಪಕ ರೀತಿಯಿಂದ ಉಪಯೋಗಿಸಿಕೊಂಡು ಅವುಗಳನ್ನು ಅಭಿವೃದ್ಧಿ ಪಡಿಸಬೇಕು ಹಾಗೂ ಸಂರಕ್ಷಿಸಬೇಕು.
—- ಮುಂದುವರೆಯುತ್ತದೆ
ಲೇಖಕರು: ವಿಶ್ವಾಸ್ ಡಿ. ಗೌಡ, ಸಕಲೇಶಪುರ