ಪರೀಕ್ಷಾ ಸಮಯ
ವರ್ಷವಿಡೀ ಓದಿದ ವಿಷಯಗಳ ಎಷ್ಟರ ಮಟ್ಟಿಗೆ ವಿದ್ಯಾರ್ಥಿಗಳ ಚಿತ್ತದಲ್ಲಿ ಉಳಿದಿವೆ? ಮುಂದಿನ ದಿನಗಳಲ್ಲಿ ಹೆಚ್ಚಿನ ಕಲಿಕೆಗೆಗಾಗಿ ಆತನ ಸಮರ್ಥನೆಯ ಮಾನದಂಡವಾಗಿ ಪರೀಕ್ಷೆಗಳು ಪೂರಕವಾಗಿವೆ. ಇಷ್ಟು ಮಹತ್ವವಿರುವ ವಿಷಯವನ್ನು ಅತ್ಯಂತ ಶ್ರದ್ಧೆಯಿಂದ ಗೌರವದಿಂದ ಹುಷಾರಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಡೆಸುವುದು ಪರೀಕ್ಷಾ/ಕಾಲೇಜು ಮಂಡಳಿ ಮತ್ತು ಸರಕಾರದ ಜವಾಬ್ದಾರಿ.
ಈ ಕ್ರೀಡಾಮಂಡಳಿಗಳೂ ಈ ನಿಟ್ಟಿನಲ್ಲಿ ಜಾಗ್ರತೆ ವಹಿಸಬೇಕು. ಶಾಲಾ ದಿನಗಳಲ್ಲಿ ಟೂರ್ನಮೆಂಟ್ ಓಕೆ. ಆದರೆ ಪರೀಕ್ಷಾ ಸಮಯದಲ್ಲೇ ಇಟ್ಟಾಗ ಖಂಡಿತಾ ವಿದ್ಯಾರ್ಥಿಗಳ ಏಕಾಗ್ರತೆಗೆ ಭಂಗವಾಗುವುದು ನಿಶ್ಚಿತ. ಸರಕಾರದ ನೀತಿಗಳ ವಿರುದ್ಧ ಬಂಡೇಳುವ ಈ ಮುಷ್ಕರಗಳೂ ಈ ನಿಟ್ಟಿನಲ್ಲಿ ವಿಷಮ ಪರಿಣಾಮ ಬೀರುವವು. ಇದಕ್ಕೆ ಸಂಸ್ಕಾರಿಕ ನಾಗರಿಕ ಪ್ರಜ್ಞೆ ಅತ್ಯಗತ್ಯ.
ಈಗ್ಗೆ ಕೆಲ ವರುಷಗಳಿಂದ ಈ ನಿಟ್ಟಿನಲ್ಲಿ ಬಹಳ ಗೊಂದಲಗಳಾಗಿ ಪಾಲಕರು ಹತಾಶರಾಗಿ, ವಿದ್ಯಾರ್ಥಿಗಳು ಮಾನಸಿಕವಾಗಿ ಕುಂಠಿತಗೊಳ್ಳುತ್ತಿದ್ದಾರೆ. ಅದರ ದುಷ್ಪರಿಣಾಮ ಘೋರ!.
ಮಂಡಳಿ, ಸರಕಾರಗಳ ನಡುವಿನ ಅಹಂ’ನ ತಿಕ್ಕಾಟದಿಂದ, ಬೋರ್ಡ ಪರೀಕ್ಷೆ ಬೇಕೆ? ಬೇಡವೆ? ಈ ದ್ವಂದ್ವದಿಂದ ವಿದ್ಯಾರ್ಥಿಗಳು ಖಿನ್ನರಾಗುತ್ತಿದ್ದಾರೆ. ಅವರು ಯಾವ ರೀತಿ ತಾವು ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವುದು ಸ್ಪಷ್ಟವಾಗುತ್ತಿಲ್ಲ. ಈ ಆ-ಈ ಗಳ ನಡುವೆ ವಿದ್ಯಾರ್ಥಿಗಳು ಅಡಕೊತ್ತಿನಲ್ಲಿ ಸಿಕ್ಕ ಅಡಿಕೆಯಂತಾಗಿದ್ದಾರೆ. ಪರೀಕ್ಷಾ ವಿಧಾನಗಳನ್ನೂ ಒಮ್ಮೊಮ್ಮೆ (ವಾರ್ಷಿಕವಾಗಿರಬೇಕೋ/ಸೆಮಿಷ್ಟರವಾಗಿರಬೇಕೋ?) ಬದಲಾಯಿಸಿ ಅಲ್ಲಿಯೂ ಗೊಂದಲಗಳು ಉಂಟಾಗಿ ವಿದ್ಯಾರ್ಥಿಗಳು ತಮ್ಮ ತಯ್ಯಾರಿಯ ಬಗೆಯ ಬಗ್ಗೆ ಚಿಂತೆಗೊಳಗಾಗುವಂತೆ ಮಾಡುವವು. ಪೋಷಕರಿಗೂ ಇವೆಲ್ಲವೂ ಅರಿತು ಹೊಂದಿಕೊಳ್ಳುವುದು ದುಸ್ತರವಾಗಿದೆ. ತಮ್ಮ ಮಕ್ಕಳ ಭವಿಷ್ಯ ನಿರ್ಧಾರ ಮಾಡುವ ಕಲಿಕೆ ಮತ್ತು ಪರೀಕ್ಷೆಗಳು ಸಲೀಸಾಗಿದ್ದರೆ ಅವರೂ ನಿರಾಳವಾಗಿರಬಹುದು. ಅನಕ್ಷರಸ್ಥ ತಂದೆ-ತಾಯಿಗಳಿರುವ ವಿದ್ಯಾರ್ಥಿಗಳ ಮೇಲೆ ಈ ನಿಟ್ಟಿನಲ್ಲಿ ಹೆಚ್ಚಿನ ಹೊರೆ ಬೀಳುವುದು.
ಒಟ್ಟಿನಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸರಕಾರ ಮತ್ತು ಮಂಡಳಿಗಳು ಒಮ್ಮತ ಮತ್ತು ಸಹಕಾರದಿಂದ ಹೆಚ್ಚಿನ ಸಮಯಾವಕಾಶದ ಸರಿಯಾದ ಸಮಯದಲ್ಲಿ ಮೊದಲೇ ನಿರ್ಧಾರಗಳನ್ನು ತೆಗೆದುಕೊಂಡರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯದು. ಅವರ ಈ ಎರಡು ದೋಣಿ ಪಯಣ ವಿದ್ಯಾರ್ಥಿಗಳನ್ನು ಸರಿಯಾದ ದಂಡೆಗೆ ಒಯ್ಯುವುದಿಲ್ಲ. ಭವಿಷ್ಯದ ಮುಳುಗಡೆಯಾದೀತು! ಎಚ್ಚರ.
– ಅ. ದೇ. ಪ್ರಲ್ಹಾದಸುತ, ಕಲಬುರಗಿ