ಮತಹಬ್ಬ
ಮತಹಬ್ಬ ಬಂದಿಹುದು ಮತ್ತೊಮ್ಮೆ ಆಚರಿಸೆ
ಗತಿಸಿರುವ ಘಟನೆಗಳ ಅವಲೋಕಿಸುತ್ತ
ಮತಹಾಕಿ ಎಚ್ಚರದಿ ದೇಶವನು ಮುನ್ನಡೆಸಿ
ಗತಿಹೀನ ನಡೆ ಬೇಡ ನೇತ್ರತನಯೆ.
ಜಾರಿಯಾಗಿದೆ ನೀತಿಸಂಹಿತೆಯು ಭಾರತದಿ
ಭಾರಿ ವ್ಯವಸ್ಥೆಗಳ ಸಿದ್ಧತೆಯು ಭರದಿ
ಆರಿಸುವ ಸೂಕ್ತ ಅಭ್ಯರ್ಥಿಗಳ ನಾವೆಲ್ಲ
ಭೂರಿ ಭೋಜನ ಬೇಡ ನೇತ್ರತನಯೆ.
ರಂಗೇರಿ ಅಬ್ಬರದ ಕಹಳೆಯನು ಮೊಳಗಿಸುತ
ಮಂಗನಾಟವನಾಡಿಸುವ ಪಕ್ಷಗಳಿರೆ
ಸಂಗಡವಿರಲಿ ಬುದ್ಧಿ ನಿರ್ಧಾರ ಜನತೆಯಲಿ
ಭಂಗುರದ ಬದುಕಿದುವೆ ನೇತ್ರತನಯೆ.
ಮತಿವಂತ ಜನರನ್ನು ಬಲೆಬೀಸಿ ಸೆಳೆಯುವರು
ಅತಿಯಾದ ಧೂರ್ತ ವಿನಯವ ತೋರಿಸುತಲಿ
ಹಿತನುಡಿಗೆ ಮರುಳಾಗಿ ಮತವನ್ನು ನೀಡಿದರೆ
ಗತಿಗೆಡುವ ಸಂದರ್ಭ ನೇತ್ರತನಯೆ.
ಮತಮಾರಿ ಪಡೆಯುವುದು ನಶ್ವರದ ಸುಖಭೋಗ
ಚ್ಯುತಿಗೊಳಿಸಿ ಹಕ್ಕುಗಳ ಗಳಿಸಿ ವೈಭೋಗ
ಸತಿಸುತರ ನೆಮ್ಮದಿಗೆ ಭಂಗವನು ತರುವಂತ
ಮತದಾನ ಬೇಕೇನು ನೇತ್ರತನಯೆ.
ಕೋರಿಕೆಯ ಮಹಪೂರ ಪಟ್ಟಿಯದು ಮುಂದಿರಲು
ಸಾರಿ ಹೇಳುವ ಸತ್ಯ ಧರ್ಮಗಳ ಬೆಳಕಿನಲಿ
ತೋರಿಕೆಗೆ ಮರುಳಾಗೊ ಮತದಾನ ಧಿಕ್ಕರಿಸಿ
ಮೇರುಗುಣ ಮೆರೆಸುತಲಿ ನೇತ್ರತನಯೆ.
ಕವಿಯತ್ರಿ: ಪೂರ್ಣಿಮಾ ಭಗವಾನ್
ಬೆಂಗಳೂರು