ಅನ್ನದಾತರಿಗೆ ಹೆಣ್ಣು ಕೊಡದವರು ಅನ್ನ ತಿನ್ನಲು ಹೇಗೆ ಸಾಧ್ಯ ?
ನನ್ನ ಮಗ ಯಾವ ಸಾಫ್ಟ್‌ವೇರ್ ಎಂಜಿನಿಯರ್ಗೂ ಕಡಿಮೆ ಇಲ್ಲ, ವರ್ಷಕ್ಕೆ ಏನ್ ಇಲ್ಲ ಅಂದ್ರೂ 10 ರಿಂದ 15 ಲಕ್ಷ ಕೃಷಿ ಇಂದ ಸಂಪಾದನೆ ಮಾಡುತ್ತಿದ್ದಾನೆ. 50 ಲಕ್ಷ ರೂಪಾಯಿ ಮನೆಯಲ್ಲಿ ಎಲ್ಲಾ ಸುಖ ಸುವಿಧೆಗಳು ಇದಾವೆ. ಆದರೆ ರೈತ ಎಂಬ ಒಂದೇ ಕಾರಣಕ್ಕೆ ಹೆಣ್ಣು ಕೊಡಲು ಕನ್ಯಾಪಿತೃಗಳು ಹಿಂದೆ ಮುಂದೆ ನೋಡುತ್ತಿದ್ದಾರೆ. ಕೃಷಿ ಮಾಡುವುದು ತಪ್ಪಾ ಯುವಕರು ಕೃಷಿಯನ್ನು ತೊರೆದರೆ ದೇಶದ ಗತಿ ಏನಾದೀತು? ಇದು ಒಬ್ಬ ಹಿರಿ ರೈತರ ಮನದಾಳದ ಮಾತು. ಇಂತಹ ಸಂಕಟವನ್ನು ಎದುರಿಸುತ್ತಿರುವ ಸಹಸ್ರಾರು ಕುಟುಂಬಗಳಿವೆ. ಯಾಕೆ ಹೀಗಾಗಿದೆ? ಯೋಚಿಸಬೇಕಾದ ಮತ್ತು ಜನರ ಸಾರ್ವತ್ರಿಕ ತಪ್ಪುಕಲ್ಪನೆಯನ್ನು ದೂರ ಮಾಡಬೇಕಾದ ಸಂದಿಗ್ಧ ಕಾಲ.
ಇದು ಬಹುತೇಕ ಎಲ್ಲೆಡೆ ನಾವು ಕಾಣುತ್ತಿರುವ ವಿದ್ಯಮಾನ. ರೈತ ಎಂದೊಡನೆ ಬಡತನದ ಚಿತ್ರಣ ಮನಸ್ಸಿನಲ್ಲಿ ಮೂಡುವ ಚಿಂತನ ವಿಧಾನವೊಂದು ವ್ಯವಸ್ಥಿತರಾಗಿ ರೂಪಿತವಾಗಿದೆ. ರೈತ ಮೈ ಕೈಗೆ ಕೆಸರು ಮೆತ್ತಿಕೊಂಡು ವರ್ಷವಿಡಿ ದುಡಿಯುವ, ವರ್ಷದ ಕೊನೆಗೆ ಫಸಲು ಮಾರಾಟದಿಂದ ಬರುವ ವರಮಾನವನ್ನು ಸಾಲದ ಬಡ್ಡಿಗೆ ಕಟ್ಟಿ ಹೊಟ್ಟೆ ಬಟ್ಟೆಗೆ ಪರದಾಡುವ ದೈನೇಸಿ ಸ್ಥಿತಿಯ ವ್ಯಕ್ತಿ ಎಂಬ ಭಾವನೆ ಮೂಡುವಂತಹ ವಾತಾವರಣವನ್ನು ಎಲ್ಲೆಡೆ ಸೃಷ್ಟಿಸಲಾಗಿದೆ. ಅದನ್ನೇ ವಾಸ್ತವವೆಂದು ನಂಬಿರುವವರು ನಮ್ಮ ನಡುವೆ ಅನೇಕರಿದ್ದಾರೆ. ಪತ್ರಿಕೆಗಳಲ್ಲಿ, ಟಿವಿ ವಾಹಿನಿಗಳಲ್ಲಿ, ಕತೆ-ಕಾದಂಬರಿಗಳಲ್ಲಿ ಹೀಗೆ ಎಲ್ಲೆಡೆಯೂ ರೈತ ಎಂದಾಕ್ಷಣ ಬಡತನದ ಚಿತ್ರಣ ಮೂಡುವುದು ವ್ಯಾಪಕವಾಗಿದೆ.
ಸರ್ಕಾರದ ಮಟ್ಟದಲ್ಲೂ ರೈತನಿಗೆ ಯಾವ್ಯಾವುದೋ ಮುಫತ್ತು ಸವಲತ್ತುಗಳ ಘೋಷಣೆಯಾಗಿರುತ್ತದೆ. ಯಾರಿಗೆ ಏನು ಸಿಗುತ್ತದೆ ಎಂಬುದು ಯಕ್ಷಪ್ರಶ್ನೆ. ಘೋಷಿತವಾದ ಬಹುತೇಕ ಸವಲತ್ತುಗಳು ತಳಮಟ್ಟದ ಫಲಾನುಭವಿಗೆ ತಲುಪುವುದೇ ಇಲ್ಲ.ಎಲ್ಲ ಸಾಮಾಜಿಕ ಸ್ತರದ ಕ್ಷೇತ್ರಗಳು ಇರುವಂತೆ ಕೃಷಿ ಕ್ಷೇತ್ರದಲ್ಲೂ ಬಡವರಿದ್ದಾರೆ. ಹಾಗಂತ ಸಾರ್ವತ್ರಿಕವಾಗಿ ಎಲ್ಲರೂ ಬಡವರು ಎಂಬ ತೀರ್ಮಾನಕ್ಕೆ ಬರುವುದು ಮೂರ್ಖತನವಲ್ಲವೇ ಬೇರೇನೂ ಅಲ್ಲ.
ಇದನ್ಯಾಕೆ ಇಲ್ಲಿ ಉಲ್ಲೇಖಿಸಬೇಕಾಯಿತೆಂದರೆ- ಕಳೆದ ಕೆಲ ದಶಕಗಳಿಂದ ಗ್ರಾಮೀಣ ಪ್ರದೇಶದ, ರೈತಾಪಿ ಕುಟುಂಬದ ಗಂಡು ಮಕ್ಕಳಿಗೆ ಹೆಣ್ಣು ಕೊಡುವವರೇ ಇಲ್ಲವೆಂಬ ಪರಿಸ್ಥಿತಿ ಎದುರಾಗಿದೆ. ಸುಶಿಕ್ಷಿತ, ಅಲ್ಪ ಶಿಕ್ಷಿತರು ಎಂಬ ಭೇದ-ಭಾವವಿಲ್ಲದೇ ಹಳ್ಳಿಗಾಡಿನಲ್ಲಿ ಕೃಷಿ ಕೆಲಸದಲ್ಲಿ ತೊಡಗಿರುವ ಸ್ಪುರದ್ರೂಪಿ ಯುವಕರಿಗೆ ಮದುವೆಯಾಗುವುದು ತುಂಬಾ ಕಷ್ಟಕರವಾಗಿದೆ. ಇದು ಕರ್ನಾಟಕದ ಎಲ್ಲಾ ಜಿಲ್ಲೆಗಳ ಗ್ರಾಮೀಣ ಜನರ ಅನುಭವವೂ ಆಗಿದೆ. ಗಂಡಿಗೆ ಸರ್ಕಾರಿ ಕೆಲಸವಿಲ್ಲ, ತಿಂಗಳ ಸಂಬಳವಿಲ್ಲ, ನಿರ್ದಿಷ್ಟ ಆದಾಯವಿಲ್ಲ ಎಂಬುದು ಎದ್ದು ತೋರುವ ಕಾರಣ. ಜೊತೆಗೆ ಹಳ್ಳಿ ಮನೆಗೆ ಹೆಣ್ಣು ಕೊಟ್ಟರೆ ತಮ್ಮ ಹೆಣ್ಣುಮಕ್ಕಳು ಸೆಗಣಿ ಬಾಚಬೇಕಾಗುತ್ತದೆ ದಿನವಿಡೀ ಕೆಸರು ಮೆತ್ತಿಕೊಂಡು ದುಡಿದು ಹೈರಾಣಾಗಬೇಕಾಗುತ್ತದೆ. ಅತ್ತೆ ಕಾಟ ಇರುತ್ತದೆ. ಜೀವನ ಕಾಣುವುದು ಅಸಾಧ್ಯ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಲಾಗುವುದಿಲ್ಲ ಎಂಬೆಲ್ಲ ತಪ್ಪುಕಲ್ಪನೆಯನ್ನು ಕನ್ಯಾಪಿತೃಗಳು ಹೊಂದಿರುವುದೇ ಆಗಿದೆ. ಆದರೆ ವಾಸ್ತವ ಬೇರೆಯೇ ಇದೆ.
ತಮ್ಮ ಹೆಣ್ಣುಮಕ್ಕಳನ್ನು ನಗರಗಳಲ್ಲಿ ವಾಸವಿದ್ದು ಮನೆಯೂ ಇಲ್ಲದೆ ವರ್ಷವಿಡೀ ಗಾಣದೆತ್ತಿನಂತೆ ದುಡಿಯುವ ದುಡಿದಿದ್ದೆಲ್ಲವೂ ಖರ್ಚಾಗಿ ತಿಂಗಳ ಕೊನೆಗೆ ಕೈಯಲ್ಲಿ ಏನೇನು ಉಳಿಸಲಾಗದ ನೌಕರಿ ಮಾಡುವ ಗಂಡನ್ನು ಹುಡುಕಿ ಮದುವೆ ಮಾಡಿಕೊಡುವ ಕನ್ಯಾಪಿತೃಗಳು ತಾವೇನು ದೊಡ್ಡ ಸಾಧನೆ ಮಾಡಿದೆವೆಂದು ಬೀಗುತ್ತಾರೆ. ಇತ್ತೀಚಿಗೆ ಕೊರೂನಾ ಹಾವಳಿಯ ಸಂದರ್ಭದಲ್ಲಿ ಅನೇಕ ಕುಟುಂಬಗಳು ನಗರ ಬಿಟ್ಟು ಹಳ್ಳಿಗಳಿಗೆ ವಲಸೆ ಹೋಗಿರುವ ಚಿತ್ರಣ ನಮ್ಮ ಕಣ್ಮುಂದೆ ಇನ್ನೂ ಹಸಿರಾಗಿದೆ. ನಗರ ಜೀವನ ಚಂದ ಎಂಬ ಹುಸಿ ಭಾವನೆ ಅನೇಕ ಮಂದಿಯಲ್ಲಿ ಇನ್ನೂ ಇರುವುದು ದುರ್ದೈವ.
ವಾಸ್ತವ ಸಂಗತಿಯನ್ನು ಎಲ್ಲಾ ಜನರೂ, ಅದರಲ್ಲೂ ಬಹುಮುಖ್ಯವಾಗಿ ಕನ್ಯಾಪಿತೃಗಳು ಅರ್ಥಮಾಡಿಕೊಳ್ಳಬೇಕಾಗಿದೆ. ಹಳ್ಳಿಯಲ್ಲಿ ಐದಾರು ಎಕರೆ ಜಮೀನು ಇರುವ ರೈತ ರಾಜನಂತೆ ಬದುಕಬಹುದು. ಎಲ್ಲಾ ರೀತಿಯ ಸುಖ ಸುವಿದೆಗಳನ್ನು ತನ್ನದಾಗಿಸಿಕೊಳ್ಳಬಹುದು. ನಗರದಲ್ಲಿ ದೊಡ್ಡ ನೌಕರಿಯಲ್ಲಿರುವ ಇಲ್ಲವೇ ಸಾಫ್ಟ್‌ವೇರ್ ಉದ್ಯೋಗಿಗಿಂತ ಹೆಚ್ಚಿನ ವರಮಾನವನ್ನು ಗಳಿಸುವುದು ಸಾಧ್ಯವಾಗಿದೆ. ಒಂದೆರಡು ಎಕರೆ ಇದ್ದರೂ ಕೂಡ ಜಾಣತನದಿಂದ, ಕೃಷಿ ಪೂರಕ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ನೆಮ್ಮದಿಯ ಬದುಕು ನಡೆಸುವುದು ಖಂಡಿತವಾಗಿ ಸಾಧ್ಯವಿದೆ. ತಪ್ಪು ಕಲ್ಪನೆಯಿಂದ ಹೊರಬನ್ನಿ, ಸುಖ, ಸಮೃದ್ಧಿ, ನೆಮ್ಮದಿ, ಆರೋಗ್ಯ ಎಲ್ಲವೂ ಇರುವುದು ನಮ್ಮ-ನಿಮ್ಮ ಮನಸ್ಥಿತಿಯಲ್ಲಿ. ನಗರವಾಗಲಿ ಹಳ್ಳಿಯಾಗಲಿ ಎಲ್ಲೇ ಇದ್ದರೂ ಎಷ್ಟೇ ವರಮಾನವಿದ್ದರೂ ನೆಮ್ಮದಿಯಿಲ್ಲದ ಲಕ್ಷ ಲಕ್ಷ ಜನರನ್ನು ಕಾಣಬಹುದು. ನಗರಕ್ಕಿಂತ ಹಳ್ಳಿ ಸಾವಿರ ಪಾಲು ಮೇಲು ಎಂಬುದನ್ನು ತಡವಾಗಿಯಾದರೂ ಅರ್ಥಮಾಡಿಕೊಂಡರೆ ಒಳಿತು.
ಲೇಖಕರು: ವಿಶ್ವಾಸ ಡಿ. ಗೌಡ, ಸಕಲೇಶಪುರ