ಸಮಯ

ಸಮಯ ಒಂದು ಮಾಯಾದಂಡ 
ಕಂಡರೂ ಕಾಣದ ಮಾಯಾ ಪುಂಡ 
ಓಟದ ಸ್ಪರ್ಧೆಲಿ ಇವನೇ ಪ್ರಚಂಡ 
ಹಮ್ಮಿಗೆ ಬಿಮ್ಮಿಗೆ ಬಾಗದು ನೋಡ 
ಓಡುತಿದೆ ಸಮಯ ಜಾರುತಿದೆ ನೋಡ

ಕೈಗೆ ಸಿಗದೆ ಕಣ್ಣಿಗೆ ಕಾಣದೆ
ಹಿಡಿಯಲು ಹೋದರೆ ಮುಷ್ಟಿಯಲಿರದೆ
ಸಮಯವು ನಿಮಿಷದಲೆಯೊಳಗೆ ಜಾರಿದೆ
ಸಮಯವು ಮೀರುತ ನೀರಾಗುತ್ತಿದೆ

ಸಮಯವು ಕಾಡಿದೆ ಜೀವನವೆಲ್ಲ
ಕಾಲದ ಬಿಸಿಗೆ ಸುಡುತಿಹುದೆಲ್ಲ
ಸೃಷ್ಟಿಯು ನಿಂತರು ಕಾಲವು ನಿಲ್ಲದಲ್ಲ
ಕಾಲಕೆ ಕಾಲನು ಹೆದರಿಹನಲ್ಲ

ಸೃಷ್ಟಿಯ ಚಕ್ರವ ದೂಡುತ ಸಾಗಿದೆ
ಧರ್ಮ ಕರ್ಮಗಳ ಅಳೆಯುತ ಸಾಗಿದೆ
ಪ್ರಗತಿಯ ಹಾದಿಯ ಹುಡುಕುತ ಸಾಗಿದೆ
ಕ್ಷಣಗಳ ಎಣಿಸುತ್ತ ವೇಗದಿ ಸಾಗಿದೆ
ಸಿರಿತನವಿರಲಿ ಬಡತನವಿರಲಿ
ಯಾವುದೂ ಅರಿಯದ ಮುಗ್ಧತೆಯಲಿ
ಕಾಯಕ ಮಾಡುತ ಸಾಗಿದೆ ಬದುಕಲಿ

ಕವಯಿತ್ರಿ: ಇಂದಿರಾ ಲೋಕೇಶ್, ಹಾಸನ