ಹಳೇ ಬೇರು, ಹೊಸ ಚಿಗುರು

ಪ್ರತಿ ದಿನ ಎದ್ದು ಮುಖ ತೊಳೆದು ವಾಯುವಿಹಾರಕ್ಕೆ ಹೋಗುವ ಪರಿಪಾಟವಿಟ್ಟುಕೊಂಡಿದ್ದ ಮುಕ್ತಾ ಹೋಗುವ ಮೊದಲು ತನ್ನಿಬ್ಬರು ಹೆಣ್ಣು ಮಕ್ಕಳನ್ನು ಎಬ್ಬಿಸಿ ಪಿಯುಸಿ ಓದುತ್ತಿದ್ದ ಪ್ರೇಮಾಳಿಗೆ ಕಸಗುಡಿಸಿ ರಂಗೋಲಿ ಹಾಕುವ ಕೆಲಸ, ಎಂಟನೇ ತರಗತಿಯಲ್ಲಿ ಓದುತ್ತಿರುವ ಸೌಜನ್ಯಳಿಗೆ ಹೂವು ಕೊಯ್ದು ಸ್ನಾನ ಮಾಡಿ ಪೂಜೆ ಮಾಡುವ ಕೆಲಸವನ್ನು ಒಪ್ಪಿಸುತ್ತಿರುವಾಗ ಅವಳ ಅತ್ತೆ “ಮಕ್ಕಳು ಪಾಪ! ಈ ಚಳಿಯಲ್ಲಿ ಬೇಗನೇ ಏಕೆ ಏಳಬೇಕು..? ಮಲಗಲಿ ಬಿಡು. ರಾತ್ರಿ ತುಂಬಾ ತಡವಾಗಿ ಮಲಗಿದ್ದಾರೆ, ಸುಮ್ಮನೇ ಹಿಂಸೆ ಮಾಡಬೇಡ” ಎಂದಳು. ಮೊಮ್ಮಕ್ಕಳ ಕಾಳಜಿಗೆ ಖುಷಿಯಾದರೂ ಅತಿಯಾದರೇ ಅಮೃತವು ವಿಷ ಎಂದೆನಿಸಿ ಚಿಕ್ಕವಳಿದ್ದಾಗ ತನ್ನ ಅಜ್ಜಿ ತನ್ನನ್ನು ಬೇಗ ಎಬ್ಬಿಸಿ ಕಟ್ಟಿಗೆ ಬೆರಣಿಯಿಂದ ಬಿಸಿ ನೀರು ಕಾಯಿಸುತ್ತ ತನಗೆ ಚಳಿ ಎನ್ನದೇ ಸ್ನಾನ ಮಾಡಲು ತಿಳಿಸಿ ತಾನೂ ಸ್ನಾನ ಮಾಡಿ ರಂಗೋಲಿ ಹಾಕುವದರಿಂದ ದೇವರ ಸ್ತುತಿ ಹಾಡುತ್ತ ಪೂಜೆ ಮಾಡುವದನ್ನು ಕಲಿಸಿದ್ದಳು. ವೇಳೆ ಇದ್ದಾಗ ಹನುಮಾನ ಚಾಲಿಸಾ, ಶ್ರೀ ರಾಮ ರಕ್ಷಾ ಸ್ತೋತ್ರವನ್ನು ಓದಲು ಹೇಳುತ್ತಿದ್ದಳು. ಸಂಜೆ ಮತ್ತೆ ದೇವರ ಭಜನೆ ಹೀಗೆ ಗುರುವಾರ ಸಾಯಿ ಮಂದಿರ, ಶುಕ್ರವಾರ ಲಕ್ಷ್ಮೀ ದೇವಸ್ಥಾನ, ಶನಿವಾರ ಶನಿಧಾಮ ಹೀಗೆ ಕುಟುಂಬದಲ್ಲಿ ಪೂಜೆ, ಪುನಸ್ಕಾರ, ಉಪವಾಸ ವೃತಗಳು ಅಜ್ಜಿಯೊಂದಿಗೆ ರೂಢಿಯಾಗಿದ್ದವು. ತನ್ನ ಮಕ್ಕಳಿಗೂ ಅದೇ ಸಂಸ್ಕಾರ ನೀಡಲು ಮುಕ್ತಾ ಸದಾ ಹವಣಿಸುತ್ತದ್ದಳು, ತಾನು ಉದ್ಯೋಗಸ್ಥ ಮಹಿಳೆಯಾಗಿದ್ದರೂ ಮನೆಯನ್ನು ಯಾವ ಆಳುಕಾಳಿಲ್ಲದೇ ಒಪ್ಪು ಓರಣವಾಗಿಟ್ಟದ್ದಳು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪತಿ ಕೂಡ ಇವಳ ಯಾವುದೇ ತಿರ್ಮಾನವನ್ನೂ ಅಲ್ಲಗಳೆಯುತ್ತಿರಲಿಲ್ಲ. ತನ್ನ ಮಕ್ಕಳನ್ನು, ತಂದೆ-ತಾಯಿಯರನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಮಡದಿಗೆ ಚಕಾರವೆತ್ತದೆ ಹೊಂದಿಕೊಂಡು ಹೋಗುತ್ತಿದ್ದ. ಬಾಲ್ಯದಿಂದಲೇ ಮಕ್ಕಳಿಗೆ ವೃತ, ಪುರಾಣದ ಕಥೆ ಓದುವಂತೆ, ಜೊತೆಗೆ ಚಿಕ್ಕಪುಟ್ಟ ಮನೆಗೆಲಸಗಳನ್ನು ಮಾಡಲು ಹೇಳಿದೋಗಲೂ ಅಜ್ಜ ಅಜ್ಜಿಗೆ ಬೇಸರ. ಮುಕ್ತಾ ಮಾತ್ರ “ನಿಮಗೆ ಗೊತ್ತಾಗಲ್ಲ ಅತ್ತೆ, ಮಕ್ಕಳಿಗೆ ತಮ್ಮ ಕೆಲಸ ತಾವೇ ಮಾಡಬೇಕೆಂಬುದನ್ನು ಈಗಿನಿಂದಲೇ ರೂಢಿಸಬೇಕು, ಹಬ್ಬಹರಿದಿನಗಳಲ್ಲಿ ಕೇವಲ ಹೊಸ ಬಟ್ಟೆ ಹಾಕಿಕೊಂಡು ಸಂಭ್ರಮಿಸದೇ, ಹ಼ಬ್ಬದಡುಗೆ ಮಾಡಲೂ ಕೂಡ ನೆರವಾದಾಗ ಮಕ್ಕಳಿಗೂ ತಮ್ಮ ಸಂಪ್ರದಾಯ, ಸಂಸ್ಕ್ರತಿಯ ಅರಿವಾಗಲೂ ಸಾಧ್ಯ” ಎಂದು ಹೇಳುತ್ತ ಸುಮ್ಮನಾಗಿಸುತ್ತಿದ್ದಳು.

ನಿಜವಾಗಿಯೂ ಹಿರಿಯರು-ಕಿರಿಯರು ಮನೆಯಲ್ಲಿದ್ದರೆ ಜ್ಞಾನ-ಕ್ರಿಯೆಗಳು ಕೂಡಿ ಇದ್ದಂತೆ. ಕಿರಿಯರ ಕಾರ್ಯಕ್ಕೆ ಹಿರಿಯರ ಸಲಹೆ-ಸೂಚನೆ ನೀಡುತ್ತಿದ್ದರೆ ಕಾರ್ಯವೂ ಸುಗಮ. ನಾವೇಕೆ ಕೇಳಬೇಕು?ನಾವಾಗಿಯೇ ಯಾಕೆ ಹೇಳಬೇಕು? ಎಂದುಕೊಂಡರೆ ಅಂಥಹ ಸ್ಥಳದಲ್ಲಿ ಉಲ್ಲಾಸ-ಉತ್ಸಾಹ ಉಡುಗಿ ಹೋಗುತ್ತದೆ. ಮನಸ್ಸನ್ನು ಯಾವಾಗಲೂ ಕುಗ್ಗಲು ಬಿಡಬಾರದು. ಹಿರಿಯರೆನಿಸಿಕೊಂಡವರೂ ಕೂಡ ತಮ್ಮನ್ನು ಜೋಪಾನ ಮಾಡುತ್ತಿರುವ ಬಾಂಧವ್ಯವನ್ನು ಕಾಪಿಟ್ಟುಕೊಳ್ಳಬೇಕು. ಹೆಜ್ಜೆ ಹೆಜ್ಜೆಗೂ “ವಟ-ವಟ” ಹೇಳುತ್ತಿದ್ದರೆ ಕಿರಿಯರಿಗೂ ಅದು ಕಿರಿಕಿರಿಯಾಗುವದು ಸಹಜ. ಹಿರಿಯರಾದವರು ಚಿಕ್ಕ ಪುಟ್ಟ ತಪ್ಪುಗಳನ್ನೇ ದೊಡ್ಡ ರಂಪ ಮಾಡುವ ಮೊದಲು ಚಿಕ್ಕ ತಪ್ಪನ್ನು ಮಗ ಮಾಡಿರಲಿ ಅಥವಾ ಸೊಸೆ ತನ್ನಿಷ್ಟದ ಅಡುಗೆ ಮಾಡಿರದಿದ್ದರೆ, ತನ್ನ ಮಾತ್ರೆಗಳನ್ನು ತರಲು ಮರೆತಿದ್ದರೆ, ತನ್ನನ್ನು ಬಿಟ್ಟು ಊಟ, ತಿಂಡಿ ಮಾಡಿದ್ದರೇ ಮನದಲ್ಲಿ ಕೋಪ ತಾಳದೇ ಅವರು ಉದ್ಯೋಗದಲ್ಲಿರುವವರು ಏನೋ ಕೆಲಸದ ಒತ್ತಡದಿಂದ ಮರೆತಿರಬಹುದೆಂಬುದನ್ನು ಅರಿತು ನಗುತ ನೆನಪಿಸಿದಾಗ ಮತ್ತೆ ಆ ಚಿಕ್ಕ ತಪ್ಪು ಆಗುವದಿಲ್ಲ. ಮೊಮ್ಮಕ್ಕಳೊಂದಿಗೆ ಆಟವಾಡುತ್ತ, ಕಥೆ ಹೇಳುತ್ತ ಕಳೆಯುವದರಿಂದ ತಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.

ವೃದ್ಧರಾದವರು ತಮ್ಮ ಬಿಡುವಿನ ಸಮಯವನ್ನು ಚಿಂತನ, ಧ್ಯಾನ, ಪೂಜೆ, ಗ್ರಂಥಗಳ ಅವಲೋಕನದಲ್ಲಿ ತೊಡಗಿಸಿಕೊಳ್ಳುವದು ಉತ್ತಮ. ಅದರಿಂದ ಮಾನಸಿಕ ಶಾಂತಿ, ಪ್ರಸನ್ನತೆ ಹೆಚ್ಚುತ್ತದೆ. ಅನುಭವಕ್ಕೂ ಆಹಾರವಾಗುತ್ತದೆ. ನಾವು ಇನ್ನೊಬ್ಬರಿಗೆ ಹೇಳುವಾಗ ಮೊದಲು ಅದು ನಮ್ಮಲ್ಲಿ ನೆಲೆಗೊಳ್ಳಬೇಕು. ಆಗ ಹೇಳುವ ಅರ್ಹತೆ ಬರುತ್ತದೆ. “ಹೊಸ ತಲೆಮಾರಿನವರು ಹಾದಿ ತಪ್ಪುತ್ತಿದ್ದಾರೆ” ಎಂದು ಹೇಳುತ್ತಿರುತ್ತಾರೆ. ಆದರೆ ಯಾಕೆ ಎಂದು ಯೋಚಿಸುವದಿಲ್ಲ, ಹಿರಿಯರು ಕಿರಿಯರೊಂದಿಗೆ ಬೆರೆಯಬೇಕು. ಅವರ ಮನಸ್ಸನ್ನು ಗೆಲ್ಲಬೇಕು ಎಂಬ ಬಂಧುತ್ವಭಾವ ಎಂದಿಗೂ ಅಳಿಯದಂತಿರಬೇಕು. ಹಾಗಾದಾಗ ಕಿರಿಯರೂ ಹಿರಿಯರೊಂದಿಗೆ ಸಾಮರಸ್ಯದಿಂದ ಕೂಡಿ ಬದುಕಿನ ಆಶೋತ್ತರಗಳನ್ನು ಅರಿತುಕೊಳ್ಳುತ್ತಾರೆ. ನಮ್ಮ ವಿತ್ತ-ಸೊತ್ತುಗಳನ್ನು ಮುಂದಿನವರಿಗಾಗಿಯೇ ಗಳಿಸುತ್ತೇವೆ. ಅದರಂತೆ ಘನತೆ-ಗೌರವಗಳನ್ನು ಉಳಿಸಿ ಬೆಳೆಸಿಕೊಳ್ಳುವುದಕ್ಕೂ ಅವರನ್ನು ತರಬೇತುಗೊಳಿಸಬೇಕೆಂಬುದನ್ನು ಯೋಚಿಸುವುದಿಲ್ಲ. ಹಿರಿಯರು ಕಿರಿಯರನ್ನು ತಿದ್ದುತ್ತಿರಬೇಕು ಇದು ನಮ್ಮ ಪರಂಪರೆ.

ಹೀಗೆ ಕುಟುಂಬದಲ್ಲಿ ಹಿರಿಯರು ಕಿರಿಯರಿಗೆ ದಾರಿದೀಪವಾಗಬೇಕಿದೆ. ಕೆಲವೊಮ್ಮೆ ವೃದ್ಧಾಶ್ರಮಕ್ಕೆ ಏಕಾಂಗಿಯಾಗಿರುವ ಸಂದರ್ಭ ಅವರ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಆದ್ದರಿಂದ ಮನಸ್ಸಿನ ಸುಸ್ಥಿತಿ ಸಂಸ್ಕಾರದ ಬೆಳಕನ್ನು ಅವರವರೇ ಸೂಕ್ತ ರೀತಿಯಲ್ಲಿ ಬೆಳೆಸಿಕೊಳ್ಳಬೇಕು. ಆಗ ವಯಸ್ಸಿನ ಅವಸ್ಥೆಗೆ ಅಂಜಿಕೊಳ್ಳಬೇಕಾಗಿಲ್ಲ. ಮನಸ್ಸಿನ ಸಿದ್ಧತೆ ಇರಲು ಅಧೀರರಾಗಬೇಕಿಲ್ಲ. ಹಿರಿಕಿರಿಯರ ಬಾಂಧವ್ಯದ ತಿರುಳೇ “ಹಳೇ ಬೇರು, ಹೊಸ ಚಿಗುರು ಕೂಡಿದರೆ ಮರಸೊಬಗು” ಎಂಬಂತೆ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಕಾರಣವಾಗುವಲ್ಲಿ ಸಂದೇಹವಿಲ್ಲ.

– ಲೇಖಕಿ: ಭಾರತಿ ಕೇದಾರಿ ನಲವಡೆ
ಸ.ಹಿ.ಪ್ರಾ.ಕ. ಶಾಲೆ, ಮಂಗಳವಾಡ
ಹಳಿಯಾಳ, ಉತ್ತರ ಕನ್ನಡ