- ಎಚ್ಚರ ಮತದಾರ ಎಚ್ಚರ
(ಚುನಾವಣಾ ಪ್ರಣಾಳಿಕೆ)
ಭರಪೂರ ಭರವಸೆಯ ಗಂಟನ್ನು ನೀಡುತ್ತ
ಹರಿಸುತಿವೆ ಘೋಷಣೆಯ ಪಕ್ಷಗಳು ಇಂದು
ಸರಿಯಾದ ಅಭ್ಯರ್ಥಿ ಯಾರೆಂದು ತಿಳಿಯದಲೆ
ಮರುಕಳಿಸಿ ನಾಟಕವು ನೇತ್ರತನಯೆ.
ಊರೂರು ಅಲೆಯುತ್ತ ಘೋಷಣೆಯ ಕೂಗುತಲಿ
ಮಾರುದ್ದ ಭಾಷಣವ ಮಾಡಿದರೆ ಏನು
ಮೂರನ್ನು ಆರೆಂದು ಬಿಂಬಿಸುವ ನಾಯಕರು
ದೂರುವುದು ತಪ್ಪುವುದೆ ನೇತ್ರತನಯೆ.
ದಾಳಗಳು ರಾಜಕೀಯ ಚದುರಂಗ ಆಟದಲಿ
ಕಾಳಗಕೆ ಇಳಿದಿರಲು ಅರ್ಥವದು ಇರದು
ಹಾಳಾದ ಯೋಚನೆಯ ಫಲವದುವೆ ಮತ್ತೇನು
ಬಾಳಿನಲಿ ಬೆಳಕಿರದು ನೇತ್ರತನಯೆ.
ಬಂಡತನ ತೋರುತ್ತ ಮೀಸೆಯನು ತಿರುವುದಿರು
ಪುಂಡುಪೋಕರಿಯಾಗಿ ಊರೆಲ್ಲ ತಿರುಗಿ
ಕಂಡವರ ದೃಷ್ಟಿಯಲಿ ಕೀಳಾಗಿ ಕಾಣಿಸುತ
ಕೊಂಡು ಹೋಗುವುದೇನು ನೇತ್ರತನಯೆ.
ಪ್ರತಿದಿನ ಪಾಲಿಸುತ ಸೂತ್ರದಲಿರುವ ನೀತಿ
ನೀತಿಸಂಹಿತೆ ಜಾರಿ ಅನುಷ್ಠಾನದಲಿ
ಮತಿವಂತ ಅಭ್ಯರ್ಥಿ ಕಣದಲ್ಲಿ ಆರಿಸುವ
ಚತುರಮತಿ ವೃದ್ಧಿಸಲಿ ನೇತ್ರತನಯೆ.
ನಡೆನುಡಿಯ ಬದ್ಧತೆಯು ಶುದ್ಧವಿರೆ ಭೂಷಣವು
ತೊಡೆದುಬಿಡು ಅತಿಯಾದ ಆಸೆಯನು ದೂರ
ಬಡತನವು ಹಣದಲಿರೆ ಸಿರಿತನವು ಮನದಲ್ಲಿ
ಅಡಿಯಿಡುತ ಸತ್ಕರ್ಮ ನೇತ್ರತನಯೆ.
ರಾಜಕೀಯದ ಚಿತೆಯ ಬಲಿಪಶುವು ಆಗದಿರಿ
ರಾಜಕಾರಣದ ಒಳಮರ್ಮ ಅರಿತಿಲ್ಲ
ರಾಜರೊಲು ಮಜವಾದ ಬದುಕೆನುವ ಹುಂಬತನ
ರಾಜ್ಯಕ್ಕೆ ತೊಂದರೆಯು ನೇತ್ರತನಯೆ.
ಅಬ್ಬರದ ಘೋಷಣೆಗೆ ಮರುಳಾಗಿ ಮತದಾರ
ಉಬ್ಬಿರುವ ಪೂರಿಯನು ಸವಿದಂತೆ ಸವಿಯೆ
ಕೊಬ್ಬುವರು ಬೇರಿಹರು ಯೋಚಿಸುವ ಸರಿಯಾಗಿ
ತಬ್ಬಲಿಯ ಗತಿ ಬೇಡ ನೇತ್ರತನಯೆ.
ಹುತ್ತದಲಿ ಅಡಗಿರುವ ಹಾವಂತೆ ಕೆಲವರಿರೆ
ಸುತ್ತಲಿನ ಜಗದಲ್ಲಿ ಎಚ್ಚರದಿ ನಡೆಯೆ
ಕುತ್ತದುವೆ ಬಳಿ ಬರದು ಬದುಕಿನಾ ಪಯಣದಲಿ
ಹೊತ್ತಿಸುವ ಹಣತೆಯನು ನೇತ್ರತನಯೆ.
ತಗ್ಗಿ ಬಗ್ಗುವ ನಡೆಯ ಪಾಲಿಸುತ ಅನುದಿನವು
ಬಗ್ಗಿದವ ಮೇಲೇಳೆ ಬಿಡದಂತ ಜನರು
ಹುಗ್ಗಿಯನು ಸವಿಯುತ್ತ ಕೇಳಿಯನು ಮಾಡುವರು
ಬಗ್ಗಿ ನಡೆದರೆ ಗುದ್ದು ನೇತ್ರತನಯೆ.
ಮಂದೆಯಲಿ ಒಂದಾಗಿ ಕುರಿಯಂತೆ ಸಾಗುತಿರೆ
ಮುಂದೇನು ಅರಿಯದಲಿ ಹಳ್ಳದಲಿ ಬಿದ್ದು
ಚಂದವಿಹ ಬದುಕಿನಾ ಬಲಿಯನ್ನು ನೀಡುತ್ತ
ಕುಂದಣವ ಕೆಡಿಸಿದೊಲು ನೇತ್ರತನಯೆ.
ರಚನೆ: ಪೂರ್ಣಿಮ ಭಗವಾನ್, ಬೆಂಗಳೂರು