Table of Contents

ದೇವಿ ನಿನಗೆ ನಾ‌ ಚಿರ ಋಣಿ

ನವಮಾಸ ಹೊತ್ತು  ನುಂಗಿ ನೋವ ತುತ್ತು
ಒಡಲ ಕರುಳ ಬಳ್ಳಿಗೆ ಜಗವ ತೋರಿಸಿ
ಮುತ್ತಿನ ಮಳೆಗರೆದು  ಪ್ರೀತಿಯ ಕೈ ತುತ್ತು
ಉಣಿಸಿದ ಜನನಿ ನಾ ನಿನಗೆ ಚಿರ ಋಣಿ
ತಾನು ಉಣ್ಣುವ ಮೊದಲು ನನ್ನಿಯಿಂದ ನನ್ನ
ಕರೆದು ಇನ್ನೂ ಇನ್ನೂ ತಿನ್ನು ತಿನ್ನು ಎಂದು
ಉಣಿಸಿ ತಿನಿಸಿ ಅಳುವ ಅಳಿಸಿ ಮತ್ತೆ ನಗಿಸಿ
ಓದಿಸಿದ ಸಹೋದರಿ ನಿನಗೆ ನಾ ಚಿರ ಋಣಿ
ಕಂಡರಿಯದವನ ಕರಪಿಡಿದು ಕಲ್ಲು ಮುಳ್ಳು
ದಾರಿಯಲಿ ಜೊತೆ ನಡೆದು ಅಳು ನುಂಗಿ
ಮಹಾನಂದದಿ ಬಾಳುತ ಬಾಳ ಬೆಳಗುತಿಹ
ಬಾಳ ಸಂಗಾತಿ ನಿನಗೆ ನಾ ಚಿರ ಋಣಿ
ನನ್ನ ಹೆಗಲೇರಿ ಆಡಿ ಹಗಲಿರುಳು ಕಾಡಿ ಹಾಡಿ
ಬಿದಿಗೆಯ ಶಶಿಯಂತೆ ಬೆಳೆಯುತಿರುವ ಪುಟ್ಟಿ
ಆರತಿಯ ಮಾಡುವೆ ನಾ ಕೀರ್ತಿನೂ ತರುವೆ
ಎಂದ ಪುಟ್ಟ ಗೆಳತಿ ನಿನಗೆ ನಾ ಚಿರ ಋಣಿ
ಅಕ್ಕ ತಂಗಿಯಾಗಿ ಬಾಳಿ  ಸೊಸೆಯಾಗಿ ನರಳಿ
ಮುಳ್ಳುಗಳ ನಡುವೆ ಹೂವಾಗಿ ಅರಳುವಾಗ
ಅಡಿಗಡಿಗೆ ಅಳಿಸಿದವರ ಶಪಿಸಿ ಕ್ಷಮಿಸಿ ಜಗವ
ಮುನ್ನಡೆಸುತಿಹ ದೇವಿ ನಿನಗೆ ನಾ ಚಿರ ಋಣಿ
– ಡಾ. ಗುರುಸಿದ್ಧಯ್ಯಾ ಸ್ವಾಮಿ
ಅಕ್ಕಲಕೋಟ ಮಹಾರಾಷ್ಟ್ರ
ಮೊಬೈಲ್ 9175547259