Table of Contents

ಬರಹಕ್ಕಿದೆ ಮನುಷ್ಯನ ಎಚ್ಚರಿಸುವ ಶಕ್ತಿ: ಸಚಿವ ತಂಗಡಗಿ

ಬೆಳಗಾವಿ: ಮಾರ್ಚ್-06, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ವತಿಯಿಂದ ಆಯೋಜಿಸಲಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ-2021 ಹಾಗೂ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಸಮಾರಂಭದಲ್ಲಿ ಶ್ರೀ ಮಹಾಂತೇಶ ಆರ್. ಕುಂಬಾರ (ಎಮ್ಮಾರ್ಕೆ), ವೃತ್ತಿಯಿಂದ ವಿಜ್ಞಾನ ಶಿಕ್ಷಕರು, ಪ್ರವೃತ್ತಿಯಿಂದ ಸಾಹಿತಿಗಳಾದ ಇವರ “ಕುಲುಮೆಯೊಳಗಿನ ಕವಿತೆಗಳು” ಯುವ ಬರಹಗಾರರ ಚೊಚ್ಚಲ ಕೃತಿಗೆ ಪ್ರೋತ್ಸಾಹ ಧನ ಯೋಜನೆ-2021ರ ಅಡಿಯಲ್ಲಿ ಆಯ್ಕೆಯಾಗಿದ್ದು, ಶ್ರೀಯುತರ ಬರವಣಿಗೆಯನ್ನು ಮೆಚ್ಚಿ ಗಣ್ಯಮಾನ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.ಮನುಷ್ಯನನ್ನು ಎಚ್ಚರಿಸುವ ಶಕ್ತಿ ಏನಾದರೂ ಇದ್ದರೆ ಅದು ಬರವಣಿಗೆಗೆ ಮಾತ್ರ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ‌ ಶಿವರಾಜ್ ತಂಗಡಗಿ ಅವರು ಅಭಿಪ್ರಾಯಪಟ್ಟರು. ‌ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ ನಯನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಹಾಗೂ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲದ್ದಕ್ಕಿಂತ ಹೆಚ್ಚು ಶಕ್ತಿ ಇರುವುದು ಬರವಣಿಗೆಗೆ. ಓದಿನಿಂದ ಪರಿಪೂರ್ಣರಾಗಲು ಸಾಧ್ಯ. ಯುವ ಪೀಳಿಗೆ ಬರೆಯುವ ಹಾಗೂ ಪುಸ್ತಕ ಓದುವ ಗೀಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.‌

ಆಧುನೀಕರಣದಿಂದ ಇಂದಿನ‌ ದಿನಗಳಲ್ಲಿ‌ ಪುಸ್ತಕ ಓದುವ ಗೀಳು ಕಡಿಮೆಯಾಗುತ್ತಿದೆ ಎನಿಸುತ್ತಿದೆ. ಈ ಮೊಬೈಲ್ ಜೀವನ ಒತ್ತಡಕ್ಕೆ ಒಳಗಾಗುವಂತೆ ಮಾಡಿದೆ. ಕುಟುಂಬದಲ್ಲಿ ನಾಲ್ವರು ಒಟ್ಟಿಗೆ ಕುಳಿತಿದ್ದರೆ ಪ್ರತಿಯೊಬ್ಬರ ಕೈನಲ್ಲಿ ಮೊಬೈಲ್ ಇರಲಿದೆ. ಪಕ್ಕ ಕುಳಿತಿರುವವರನ್ನು ನೋಡದಷ್ಟರ ಮಟ್ಟಿಗೆ ಮೊಬೈಲ್ ನೋಡುವುದರಲ್ಲಿ ಪ್ರತಿಯೊಬ್ಬರು ಮಗ್ನರಾಗಿರುತ್ತಾರೆ. ಇದರಿಂದ ಸಂಬಂಧಗಳಿಗೆ ಧಕ್ಕೆಯಾಗುತ್ತಿದೆ. ಏಕೆ ನಾನು ಈ ಮಾತನ್ನು ಹೇಳುತ್ತಿದ್ದೇನೆಂದರೆ ನಿಜಕ್ಕೂ ಪುಸ್ತಕ ಕೈನಲ್ಲಿದ್ದರೆ ಆ ಸಂಬಂಧಗಳಿಗೆ ಧಕ್ಕೆ ಆಗುವುದಿಲ್ಲ ಎಂದು ತಿಳಿಸಿದರು.

ಪತ್ರಿಕೆಗಳಲ್ಲಿ‌ ಬರುವ ಲೇಖನಗಳು ನಿಜ ಜೀವನಕ್ಕೆ ಸಮೀಪ ಇರುತ್ತವೆ. ದಿನ ನಿತ್ಯದ ಪತ್ರಿಕೆ ಓದದ್ದಿದ್ದರೆ ನನ್ನ ಜೀವನ ಆರಂಭ ಆಗುವುದೇ ಇಲ್ಲ. ಇಲಾಖೆ ಜವಾಬ್ದಾರಿ ವಹಿಸಿಕೊಂಡ ಬಳಿಕ ನನಗೆ ಓದಿನ ಗೀಳು ಇನ್ನಷ್ಟು ಹೆಚ್ಚಾಗಿದ್ದು,‌ ನಾನು ಒಂದಿಲ್ಲೊಂದು ಪುಸ್ತಕ ಬರೆಯುತ್ತೇನೆ ಅನಿಸುತ್ತಿದೆ ಎಂದರು. ಮುಂದಿನ ವರ್ಷ ಇನ್ನಷ್ಟು ‌ಹೆಚ್ಚಿನ‌ ಯುವ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವುದು.‌ ಯುವ ಲೇಖಕರು ಇನ್ನು ಹೆಚ್ಚಿನ ಕಾದಂಬರಿಗಳನ್ನು ರಚಿಸಲಿ ಎಂದು ಶುಭ ಹಾರೈಸಿದರು.

ಪುಸ್ತಕ ಪ್ರಾಧಿಕಾರದ ವತಿಯಿಂದ ಕುಮಾರ ವ್ಯಾಸಭಾರತವನ್ನು ಅತ್ಯಂತ ಕಡಿಮೆ ಬೆಲೆಗೆ ಓದುಗರಿಗೆ ತಲುಪಿಸಲು ನಿರ್ಧಾರ ಮಾಡಲಾಗಿದೆ. ಕೇವಲ 200 ರೂ.ಗೆ ಎರಡು ಸಂಪುಟ ಇನ್ನು ಕೆಲವೇ ದಿ‌ನಗಳಲ್ಲಿ ನಿಮಗೆ ತಲುಪಲಿದೆ ಎಂದು ಇದೇ ವೇಳೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಮಾತನಾಡಿ, ಜನ ನಮ್ಮಿಂದ ಹೆಚ್ಚು ಜವಾಬ್ದಾರಿ ನಿರೀಕ್ಷೆ ಮಾಡುತ್ತಾರೆ. ಹಾಗಾಗಿ ಸಾಹಿತಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಯುವ ಸಾಹಿತಿಗಳಿಗೆ ಸಲಹೆ ನೀಡಿದರು.

ಯುವ ಲೇಖಕರು ಆತ್ಮ ವಿಶ್ವಾಸ, ಅಧ್ಯಯನಶೀಲತೆ ಬೆಳೆಸಿಕೊಳ್ಳಬೇಕು. ಬರೆಯುವ ಜತೆಗೆ ಸಾಹಿತ್ಯ ಪರಂಪರೆಯನ್ನು ತಿಳಿದುಕೊಂಡು ಅದನ್ನು ಮುಂದುವರೆಸಬೇಕು. ಕನಸ್ಸನ್ನು ಎಂದಿಗೂ ಬಿಡಬಾರದು. ಸಮಾಜದಲ್ಲಿ‌ ಅಲ್ಪಸ್ವಲ್ಪ ಮಾರ್ಯಾದೆ ಉಳಿದುಕೊಂಡಿದ್ದರೆ, ಅದು ಸಾಹಿತಿಗಳಿಂದ. ಇಂತಹ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.‌ ಸಾಹಿತಿ ಜೋಗಿ (ಗಿರೀಶ್ ರಾವ್ ಹತ್ವಾರ್) ಮಾತನಾಡಿ, ಪುಸ್ತಕ ಪ್ರಾಧಿಕಾರದ ವಯಿಂದ ಯುವ ಲೇಖಕರಿಗೆ ಧನ ಸಹಾಯ ನೀಡಿ ಪುಸ್ತಕ ಹೊರ ತರುತ್ತಿರುವುದು ಒಳ್ಳೆಯ ಕೆಲಸ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಆಧುನೀಕ ಯುಗದಲ್ಲಿ ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗಿದೆ. ಯಾವ ಲೇಖಕ ಕೂಡ ಪರಿಪೂರ್ಣ ಅಲ್ಲ. ಬರೆಯುತ್ತಾ ಬರೆಯುತ್ತಾ ಪೂರ್ಣ ಆಗುತ್ತಾನೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ.ಧರಣಿದೇವಿ ಮಾಲಗತ್ತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.