ಪ್ರೇಮ ಧಾರೆ
ಕಡಲಿನ ನೀರು ಮೋಡಗಳಾಗಿ
ಮುತ್ತಿನಂತೆ ಸುರಿವ ಮಳೆಹನಿಗಳೇ
ಪ್ರೀತಿಯ ಸಂಕೇತವು
ಭುವಿಯೆಲ್ಲ ತಂಪಾಗಿ ಕಂಪಾಗಿ
ಹಸಿರಿನಿಂದ ಕಂಗೊಳಿಸುವ ಚೆಲುವೇ
ಪ್ರೇಮಧಾರೆಯು
ತರುಲತೆಗಳು ಚಂದದಿ ಅರಳಿ
ತೂಗುವ ಫಲ ಪುಷ್ಪಗಳೇ
ಪ್ರೀತಿಯ ಸಂಕೇತವು
ಸಿಹಿ ಮಧುರ ಮಕರಂದದಲಿ
ಹಾಡಿನಲಿವ ದುಂಬಿ ಪಕ್ಷಿಗಳೇ
ಪ್ರೇಮಧಾರೆಯು
ಬಾನಂಗಳದಲಿ ಮೂಡಿ ಬರುವ
ಚಂದಿರನ ಬೆಳದಿಂಗಳ ಬೆಳಕೇ
ಪ್ರೀತಿಯ ಸಂಕೇತವು
ಮನದ ಮರೆಯೊಳಗಿನ ಮಾತು
ಪದಪುಂಜಗಳಾಗಿ ಹೊರ ಹೊಮ್ಮುವುದೇ ಪ್ರೇಮಧಾರೆಯು
ಮರದೆಲೆಯ ಮರೆಯೊಳಗೆ ಇಂಪಾಗಿ
ಕೂಗುವ ಕೋಗಿಲೆಯ ದನಿಯೇ
ಪ್ರೀತಿಯ ಸಂಕೇತವು
ಆ..ದನಿಗೆ ಸೋತು ಅದರೊಳಗೆ
ಮೈಮರೆವ ಸಹೃದಯ ಮನಸುಗಳೇ ಪ್ರೇಮಧಾರೆಯು
ಪ್ರಕೃತಿಯ ಒಲವಿನ ಚೆಲುವನು
ಕಣ್ಮನದಲಿ ತುಂಬಿಕೊಂಡು
ಸುಖ-ಸಂತೋಷದಿ ಮನವು
ಮಾತಿಗೂ ಮೀರಿದ..
ಭಾವಕೂ ನಿಲಕದ..
ಪ್ರೇಮಧಾರೆಯಲಿ ಹರ್ಷಿಸಲಿ.
✍️ ಶ್ರೀ ಗೌರಿ ಸುರೇಶ್, ದಾವಣಗೆರೆ