ಜೊತೆಯಲಿ ಸಾಗುವ
**************
ಜೀವನವೆಂಬಾ ಸಾಗರ ದಾಟಲು
ಕೈಯನು ಹಿಡಿದಿಹ ಓ ಚೆಲುವೆ
ಭಾವನೆ ತುಂಬಿದ ಪ್ರೀತಿಯ ತೋರಿಸಿ
ಬಾಳನು ಬೆಳಗಲು ಈ ಚೆಲುವೆ ll

ತಣ್ಣನೆ ಪರಿಸರ ಬಣ್ಣವು ಹಸುರಲಿ
ಕಣ್ಣಿನ ನೋಟದಿ ಬಲು ಜಾಣ
ಗಾಳಿಯು ಬೀಸಲು ಹೂವಿನ ಪರಿಮಳ
ಎಲ್ಲೆಡೆ ಹರಡಿತು ಸುಮಬಾಣ ll

ಮೋಹವು ಉಕ್ಕಿತು ಭಾವವು ತುಂಬಿತು
ರಮಣಿಯ ಸುಂದರ ಮನದಲ್ಲಿ
ಮೋಹಕ ರೂಪದ ಚಂದದ ಹುಡುಗನು
ಸಿಕ್ಕಿದ ತೋಷವು ನನಗಿಲ್ಲಿ ll

ಇಬ್ಬರ ಮಿಲನವು ಮದುವೆಯ ಬಂಧನ
ಆಗಲಿ ಇವರದು ನವಜೋಡಿ
ಸ್ನೇಹವು ಪ್ರೀತಿಯು ತುಂಬಿದ ಮನವಿದು
ಶುಭವನು ಕೋರುವ ಮನಮಾಡಿ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ