ಅನ್ನವೇ ದೇವರು, ಅನ್ನವೇ ಪರಬ್ರಹ್ಮ. 84 ಕೋಟಿ ಜೀವರಾಶಿಗಳಿಗೂ ಆಹಾರಬೇಕು. ಆಹಾರವಿಲ್ಲದೆ ಬದುಕಲು ಸಾಧ್ಯವಿಲ್ಲ. ಭೂಮಿಯ ಮೇಲೆ ವಾಸ ಮಾಡುವ ಪ್ರತಿಯೊಂದು ಜೀವರಾಶಿಗೂ ಅನ್ನ ಬೇಕೇ ಬೇಕು. ರೈತರು ಬೆವರು ಸುರಿಸಿ ದುಡಿದಾಗ ಮಾತ್ರ ಆಹಾರ ಧಾನ್ಯ ಬೆಳೆಯಬಹುದು ಮತ್ತು ಅದರಿಂದ ಹಸಿವನ್ನು ಹಿಂಗಿಸಿಕೊಳ್ಳಬಹುದು. ಹಸಿದವರಿಗೆ ಮಾತ್ರ ಗೊತ್ತು ಅನ್ನದ ಬೆಲೆ. ಕೂಡಿಟ್ಟ ಕೋಟಿ ಕೋಟಿ ಹಣವನ್ನು ಕೋಟೆ ಕಟ್ಟಿ ಇಡಲು ನೂರೆಂಟು ಯೋಚನೆಗಳನ್ನು ಯೋಜನೆಗಳನ್ನು ಮಾಡಿ ಎಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೋ ಎಂದು ಭಯಬೀತರಾಗಿ ಚಿಂತೆಯ ಬದುಕನ್ನು ತಬ್ಬಿಕೊಳ್ಳುತ್ತಾರೆ. ಎಷ್ಟೇ ಕೂಡಿಟ್ಟರು ಹಸಿವೆಗೆ ಅನ್ನ ತಿನ್ನಬಹುದೇ ಹೂರತು ದುಡ್ಡು; ಚಿನ್ನ ತಿನ್ನಲು ಬರುವುದಿಲ್ಲ. ಅಟ್ಟಿ ತಿನ್ನದ ಜೀವ ಸಂಕುಲವೇ ಇಲ್ಲವೆನ್ನುವುದಕ್ಕೆ ಚೀನಾ ದೇಶದ ಜನರ ಹಸಿವೆ ಸಾಕ್ಷಿ! ಮಾನಸಿಕವಾಗಿ ಹಸಿದವನಿಗೆ ಏನು ತಿಂದರೂ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ.

Table of Contents

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪ್ರಪಂಚದಲ್ಲಿ ಹಸಿವು ಎಂಬ ಭೀಕರ ರೋಗದಿಂದ ಬಳಲುತ್ತಿರುವವರ ಸಂಖ್ಯೆ 820 ಮಿಲಿಯನ್, ಭಾರತದಲ್ಲಿ ಪ್ರತಿನಿತ್ಯ 18,000 ಮಕ್ಕಳು ಹಸಿವಿನಿಂದ ಕಣ್ಣು ಮುಚ್ಚುತ್ತಿವೆ, ಸುಮಾರು 85 ಲಕ್ಷ ಮಂದಿ ಮಕ್ಕಳು ಒಂದು ಹೊತ್ತಿನ ಊಟ ಇಲ್ಲದೆ ದಿನ ಮುಗಿಸುತ್ತಾರೆ. ಅಂದರೆ ಪ್ರಪಂಚದಲ್ಲಿ ಇಂದು ಹೆಚ್ಚು ಜನ ಸಾಯುತ್ತಿರುವುದು ಹಸಿವಿನಿಂದ ಎಂದರೆ ಆಶ್ಚರ್ಯ ಆಗಲಾರದು. ಈ ಹೊಟ್ಟೆಯನ್ನು ತುಂಬಿಸಲು ದಿನಂಪ್ರತಿ ಹೆಣಗಬೇಕಾದದ್ದು ಸತ್ಯವಾಗಿದೆ ಹಾಗೂ “ಕೂತು ತಿಂದರೆ ಕುಡಿಕೆ ಹೊನ್ನು ಸಾಲದು” ಎಂಬ ಗಾದೆಯಂತೆ ಹೊಟ್ಟೆ ತುಂಬಿದ ನಂತರ ಅಥವಾ ತುಂಬಿಸಿಕೊಳ್ಳಲು ಕೆಲಸವನ್ನು ಮಾಡುತ್ತಾ ಆರೋಗ್ಯವನ್ನು ಸದೃಢವಾಗಿ ಇರಿಸಿಕೊಳ್ಳುವಲ್ಲಿ ಈ ಗಾದೆ ಮಾತು ನೆನಪಿಸುತ್ತದೆ. ಜ್ಞಾನದ ವಿದ್ಯೆ ಹಸಿವು ನಿರಂತರವಾದದ್ದು, ವಯೋಮಿತಿಯ ನಿರ್ಬಂಧವಿಲ್ಲ, ಇನ್ನೂ ತಿಳಿದುಕೊಳ್ಳಬೇಕು ಎಂಬ ಹಸಿವು ಅಪೇಕ್ಷಣೀಯ.
ಸಂಪಾದನೆಯ ಹಸಿವು ಇರಬೇಕು ಅದು ಮಿತಿಯಲ್ಲಿರಬೇಕು, ತನ್ನ ಸಂಪಾದನೆಯಲ್ಲಿ ಕೆಲವು ಭಾಗವನ್ನಾದರೂ ಧರ್ಮ ಕಾರ್ಯಗಳಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಅನಾಥಾಶ್ರಮಗಳಿಗೆ ಕೊಡಬೇಕು. ಕೊಟ್ಟದ್ದು ಪರರಿಗೆ ತಿಳಿಯಬಾರದು, ಪುನೀತ್ ರಾಜಕುಮಾರ ಉತ್ತಮ ಉದಾಹರಣೆ ಆದರೂ “ತಾನೂ ಉಣ್ಣ ಪರರಿಗೂ ಕೊಡ” ಎನ್ನುವಂತಾದರೆ ಅವನನ್ನು ಧನಪಿಶಾಚಿ; ಜಿಪುಣ ಎನ್ನುವರು. ಆಡಳಿತಗಾರರಿಗೆ ಜನತೆಯ ಹಿತದ ಹಸಿವು ಇರಬೇಕು ಸ್ವಾರ್ಥಕ್ಕೆ ಎಡೆ ಆಗಬಾರದು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಈಗ ಪ್ರತಿನಿಧಿಗಳೇ ಪ್ರಜೆಗಳು, ಕೇವಲ ‘ಮತದಾರ ಪ್ರಭುಗಳು’ ಪ್ರತಿನಿಧಿಗಳು ಜನ ಪರವಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಹಸಿವು ಹೊಂದಿರಬೇಕು. ಕೀರ್ತಿಗಾಗಿ ಹಸಿವನ್ನು ಹೊಂದಬೇಕು, ಕೀರ್ತಿ ಪ್ರಸಿದ್ಧಿ ಒಂದೇ ಅರ್ಥವಲ್ಲ, ದೇಶದ ನಾಯಕನನ್ನು ಕೊಂದವನೂ ಪ್ರಸಿದ್ಧಿ ಹೊಂದುವನು. ಅದು ಕೀರ್ತಿಯಲ್ಲ, ಯಾವುದೇ ವ್ಯಕ್ತಿ ತನ್ನ ಶಕ್ತಿ ಸಾಮರ್ಥ್ಯ, ಪ್ರತಿಭೆ, ತ್ಯಾಗ ಮನೋಭಾವ ಚಾಕಚಕ್ಯತೆ ಕುಶಲತೆ ಅಗಾಧ ಜ್ಞಾನ ಇವುಗಳಿಂದ ಕೀರ್ತಿ ತನ್ನಿಂದ ತಾನೇ ಬರುತ್ತದೆ.
ಹೀಗಾಗಿ ಹಸಿವು ಮಾನವನ ಬದುಕಿನಲ್ಲಿ ಮಹತ್ವದ ಸ್ಥಾನವನ್ನು ಗಳಿಸಿದೆ, ಮಾನವ ತನ್ನ ಹುಟ್ಟಿನಿಂದ ತೊಡಗಿ ಮರಣದವರೆಗೆ ಹಸಿವಿನ ನಂಟು ಅವನ ಜೊತೆ ಜೊತೆಯಲ್ಲಿ ಪಯಣಿಸುತ್ತಲೇ ಇರುತ್ತದೆ. ಕೊನೆಯದಾಗಿ ಉಲ್ಲೇಖಿಸಲೇಬೇಕಾದ ವಿಷಯವೆಂದರೆ ಸಭೆ-ಸಮಾರಂಭಗಳಲ್ಲಿ, ಔತಣ ಕೂಟಗಳಲ್ಲಿ ನಾವು ಭಾರತೀಯರು ಸಾಕಷ್ಟು ಆಹಾರ ಪದಾರ್ಥಗಳನ್ನು ಮಾಡುತ್ತೇವೆ. ಮಾಡುವುದನ್ನು ನಿಲ್ಲಿಸಿ ಹಿತಮಿತವಾಗಿ ಬಳಸಿ ಮಿಕ್ಕಿದ್ದನ್ನು ಉಳಿಸಿ, ಹಸಿದ ಹೊಟ್ಟೆಗೆ ಅದನ್ನು ನೀಡಿದಲ್ಲಿ ಪ್ರಯೋಜನವಾಗಿ ಅನೇಕ, ಹಸಿದವರಿಗೆ ಸಿಗಬಹುದು. ಈ ನಿಟ್ಟಿನಲ್ಲಿ ನಾವೆಲ್ಲ ಯೋಚನೆ ಮಾಡಬೇಕಿದೆ, ಮುಂದಿನ ದಿನಗಳಲ್ಲಿ ಹೀಗಾಗಲೆಂದು ಬಯಸೋಣವೇ..!
✍️ ವಿಶ್ವಾಸ್ ಡಿ. ಗೌಡ ಸಕಲೇಶಪುರ, 9743636831