ಅಸಾಧ್ಯ ಅನ್ನೋ ಪದದಲ್ಲಿನೇ ಸಾಧ್ಯ ಅನ್ನೋದು ಇರಬೇಕಾದ್ರೆ, ಸಾಧಿಸಬೇಕು ಎನ್ನುವ ಛಲ ಮಾತ್ರ ನಮ್ಮಲ್ಲಿ ಯಾಕಿರಬಾರದು? ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಗ್ರಿಯಲ್ಲಿ ಫೇಲಾದ ಎಷ್ಟೋ ಜನ ಐ.ಎ.ಎಸ್/ಕೆ.ಎ.ಎಸ್ ಪಾಸ್ ಆಗಿರೋ ಉದಾಹರಣೆಗಳು ಸಾಕಷ್ಟಿವೆ. ಯಾರಿಂದ ಏನನ್ನು ಮಾಡಲು ಆಗುವುದಿಲ್ಲವೋ ಅವರು ಮಾತ್ರ ಕೇವಲ ಕಾರಣಗಳ ಪಟ್ಟಿ ಮಾಡ್ತಾರೆ, ಆದ್ರೆ ಯಾರು ನಿಜವಾಗಲೂ ಏನಾದರೂ ಸಾಧನೆ ಮಾಡ್ಬೇಕು ಅನ್ಕೋತಾರೋ ಅವರು ಮಾತ್ರ ತಮ್ಮ ಗೆಲುವಿಗೆ ಸೂತ್ರಗಳ ಮೆಟ್ಟಿಲು ಮಾಡಿಕೊಳ್ಳುತ್ತಾರೆ. “ಕುಳಿತು ತುಕ್ಕಿಡಿಯುವ ಬದಲು ನಡೆದು ಸವೇಯುವುದು ಮೇಲು” ಎನ್ನುವಂತೆ ಯಾರು ತಮ್ಮನ್ನು ತಾವು ನಂಬಿರುತ್ತಾರೋ ಅಂತವರಿಗೆ ಸೋಲಿನ ಸಿಡಿಲೇ ಬಡಿದರೂ ಬಗ್ಗದೆ ಅವರು ಮುಂದೆ ಸಾಗಿ ಒಂದು ದಿನ ಗೆಲುವಿನ ಉಡುಗೊರೆಯ ಹಾರವನ್ನೇ ಕೊರಳಿಗೆ ಹಾಕಿಸಿಕೊಳ್ಳುತ್ತಾರೆ. ಗೆಲುವಿನ ಹಾದಿಯಲ್ಲಿ ಕಲ್ಲು – ಮುಳ್ಳುಗಳು ಇರುವುದು ಸಹಜ, ಕಾಲಿಗೆ ಮುಳ್ಳು ಚುಚ್ಚಿದರೆ ಮುಳ್ಳನ್ನು ಕಿತ್ತೆಸೆಯಬೇಕೆ ವಿನಃ, ಕಾಲನ್ನೇ ಕತ್ತರಿಸಬಾರದು. ಹಾಗೆಯೇ ನಮ್ಮ ಜೀವನದ ಹೋರಾಟದಲ್ಲಿ ಎಷ್ಟೆಲ್ಲ ಕಷ್ಟ-ಕಾರ್ಪಣ್ಯಗಳು ಕಾಡಿದರೂ ಅಂಜದೆ ಅವುಗಳನ್ನು ನಮ್ಮ ತಲೆಯಿಂದ ಕಿತ್ತೊಗೆದು ಕೇವಲ ನಮ್ಮ ಗುರಿಯೆಡೆಗೆ ಮಾತ್ರ ಹವಣಿಸುತ್ತಿರಬೇಕು.

Table of Contents

“ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ, ಕೆಲಸವೂ ಸಾಗದು ಮುಂದೆ” ಎನ್ನುವ ಡಾ: ರಾಜಕುಮಾರ ಅವರ ಹಾಡಿನಂತೆ ಸುಖಾ-ಸುಮ್ಮನೆ ಕಾಲ ಹರಣ ಮಾಡುವುದು ಒಳಿತಲ್ಲ. ನಮ್ಮ-ನಮ್ಮ ಜೀವನದಲ್ಲಿ ಆಗು ಹೋಗುಗಳಿಗೆ ನಾವೇ ಕಾರಣ ಹೊರತು ಬೇರೆಯವರಲ್ಲ. ನಮ್ಮ ಕಷ್ಟ ಕಾಲಕ್ಕೆ ನಮಗೆ ನೆಂಟರು ಕೈ ಹಿಡೀತಾರೆ, ಅವರು-ಇವರು ಸಹಾಯ ಮಾಡ್ತಾರೆ, ಮೇಲಿನವರು ಸಹಾಯ ಮಾಡ್ತಾರೆ ಅನ್ನೋದು ನಮ್ಮ ಮೂರ್ಖತನವಷ್ಟೇ, ನಾವು ಒಂದು ಲೆವಲ್ ಗೆ ಸೇರೋತನ ಯಾರೂ ನಮ್ಮ ಕಡೆ ಕಣ್ಣೆತ್ತಿ ಕೂಡ ನೋಡಲ್ಲ. ಹಾಗಾಗಿ ಏನೇ ಇದ್ದರೂ ನಮ್ಮ ಬಾಳಿನ ಬಂಡಿಯನ್ನು ನಾವೇ ಎಳಿಯಬೇಕು. ನಮನ್ನು ಇಷ್ಟಪಡದ ಕೆಲವು ಜನರು ನದಿಯಲ್ಲಿ ಕಲ್ಲು ಎಸೆದಂತೆ ನಮ್ಮ ಮನಸಿಗೆ ಘಾಸಿ ಮಾಡಿ ನಿನ್ನ ಕೈಲಿ ಏನು ಆಗಲ್ಲ ಹಂಗೆ-ಹಿಂಗೇ ಅಂತ ಆಡ್ಕೊಳ್ತಿರ್ತಾರೆ. ನಾವು ಮಾತ್ರ ತಲೆ ಕೆಡಿಸ್ಕೊಳ್ಳದ್ದೇ ಕರ್ತವ್ಯದಲ್ಲಿ ನಿಷ್ಠೆಯಿಂದ ನಮ್ಮ ಪಾಡಿಗೆ ನಾವು ನದಿ ಹರ್ಕೊಂಡು ಹೋದಂಗೆ ಹೋಗ್ತಿರ್ಬೇಕು. ಜೀವನದಲ್ಲಿ ಸೋಲುಗಳು ಎಷ್ಟೇ ಬರಲಿ ಆದರೆ ಪ್ರಯತ್ನ ಮಾತ್ರ ಬಿಡಬಾರದು, ಗೆದ್ದರೆ ಜಯಕಾರ, ಸೋತರೆ ನಮ್ಮ ಮುಂದಿನ ತಯಾರಿಗೆ ಒಂದು ಅನುಭವ ಸಿಗುತ್ತದೆ. ಜೀವನದಲ್ಲಿ ಒಮ್ಮೆ ಗೆದ್ದವನು ಮುಂದೊಂದು ದಿನ ಪುನಃ ಸೋಲಬಹುದು, ಆದರೆ ಯಾರು ಈಗಾಗಲೇ ನೂರು ಬಾರಿ ಸೋತು ಗೆದ್ದಿರುತ್ತಾರೋ ಅವರು ಮಾತ್ರ ಸೋಲುವುದು ಅಷ್ಟು ಸುಲಭವಲ್ಲ. ಸೋಲುವ ಭೀತಿ ಇರುವವನೆಂದು ಗೆಲುವಿನ ರುಚಿಯನ್ನು ಸವಿಯಲಾರ. ಹಾಗೆಯೇ ಕೈ ಕೆಸರಾಗುತ್ತೆ ಎಂದುಕೊಂಡವನೆಂದು ಬಾಯಿಯನ್ನು ಮೊಸರು ಮಾಡಿಕೊಳ್ಳಲಾರ. ಸಿಂಹವೂ ಎಷ್ಟೇ ಬಲಿಷ್ಠವಾಗಿದ್ದರೂ ಭೇಟೆಗಳು ತಾವಾಗಿಯೇ ಬಂದು ಅದರ ಬಾಯಿಗೆ ಬೀಳುವುದಿಲ್ಲ. ಪ್ರಯತ್ನ ಪಡದ ಹೊರತು ಗೆಲುವು ಸುಲಭವೂ, ಸಹಜವೂ ಆಗಿರುವುದಿಲ್ಲ. ನಿನ್ನನ್ನು ಹೀಯಾಳಿಸಿದವರಿಗೆ, ಗೇಲಿ ಮಾಡಿದವರಿಗೆ, ನಿನ್ನ ಶ್ರೇಯಸ್ಸನ್ನೇ ಬಯಸದವರಿಗೆ ನೀನೆಂದು ಪಾಠ ಕಲಿಸುವೆ?
ಈ ಸಮಾಜವೇ ಒಂದು ವಿಚಿತ್ರ, ಮಾತಾಡಿದರೆ ಮಾತಲ್ಲಿರುವ ತಪ್ಪನ್ನು ಹುಡುಕುತ್ತಾರೆ, ಮೌನಿಯಾದರೆ ನಿನ್ನನ್ನೇ ತಪ್ಪಾಗಿ ಬಣ್ಣಿಸುತ್ತಾರೆ. ಇಂತಹ ಸಮಾಜದಲ್ಲಿ ನಾವು ಹೇಗಿರಬೇಕೆಂದರೆ ಇನ್ನೊಬ್ಬರ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಮ್ಮ ಜೀವನ ನಾವು ನೋಡಿಕೊಂಡರೆ ಅದೇ  ಒಂದು ದೊಡ್ಡ ಸಾಧನೆ. ಡಾ: ಎ.ಪಿ.ಜೆ. ಅಬ್ದುಲ್ ಕಲಾಂ ರವರು ಹೇಳುವಂತೆ ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ ಅವನ ನಿರ್ಧಾರ ಬಲವಾಗಿರಬೇಕು. ಅವನ ಆ ಅಚಲ ನಿರ್ಧಾರದಿಂದ ಯಾವ ವಿಫಲತೆಯೂ ಅವನ ಬಳಿ ಸುಳಿಯಲು ಸಾಧ್ಯವಿಲ್ಲ ಅಂತ. ನಿನ್ನ ಸಾಧನೆ ಮುಟ್ಟುವ ಹಾದಿಯಲ್ಲಿ ಕೆಲವರು ನಿನ್ನನ್ನು ತಡೆಯಲು ಪ್ರಯತ್ನಿಸುತ್ತಾರೆ, ಯಾಕೆಂದರೆ ನೀನು ಗೆಲ್ಲೋದು ಅವರಿಗೆ ಸ್ವಲ್ಪನೂ ಇಷ್ಟ ಇರೋದಿಲ್ಲ. ಅದಕ್ಕೆ ಅವರು ನಿನ್ನ ಕಾಲನ್ನು ಎಳಿಯೋದಕ್ಕೆ ಪ್ರಯತ್ನ ಮಾಡ್ತಾರೆ. ಅದಕ್ಕೂ ನೀನು ಜಗ್ಗದೆ ಹೋದ್ರೆ ನಿನಗೆ ಅವಮಾನ ಮಾಡೋದಕ್ಕೆ ಸ್ಟಾರ್ಟ್ ಮಾಡ್ತಾರೆ. ಇಂತಹ ಘಟನೆಗಳು ಸಾಧಿಸಬೇಕು ಎನ್ನುವ ಪ್ರತಿಯೊಬ್ಬರಲ್ಲೂ ಕಾಡ್ತಾನೆ ಇರ್ತಾವೆ. ನಿನ್ನ ಗೆಲುವನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕೆ ನೀನು ಹಿಂದೇಟು ಹಾಕದೆ ಮುಂದಿಟ್ಟ ಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂದೆ ಇಡಬೇಡ. ಅವಮಾನಿಸುವವರು ಅವಮಾನಿಸಲಿ, ನೀನು ಮಾತ್ರ ಎಲ್ಲವನ್ನೂ ಕಡೆಗಣಿಸು. ಒಂದು ಮಾತಿದೆ, ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತಾ? ಅಂತ. ಈ ಮಾತನ್ನು ಬಹುಷಃ ನಿನ್ನ ಹೆಜ್ಜೆ-ಹೆಜ್ಜೆಗೂ ಅವಮಾನಿಸುವವರನ್ನು ನೋಡಿಯೇ ಹೇಳಿರಬೇಕು. ಬದುಕು ಎಷ್ಟೇ ಕಷ್ಟವೆನಿಸಿದರೂ ಬದುಕಲೇಬೇಕು. 
ನಿನ್ನ ನಂಬಿ ನಿನ್ನ ತಂದೆ-ತಾಯಿ ಹಗಲಿರುಳೆನ್ನದೆ ಹೊಟ್ಟೆ-ಬಟ್ಟೆ ಕಟ್ಟಿ, ನನ್ನ ಮಗಮಗಳು ಜೀವನದಲ್ಲಿ ಏನನ್ನಾದರೂ ಸಾಧಿಸುತ್ತಾನೆ/ಳೆ ಎನ್ನುವ ನಂಬಿಕೆಯಲ್ಲಿ ಬಕ ಪಕ್ಷಿಗಳಂತೆ ನಿನ್ನ ಅಭಿವೃದ್ಧಿಯನ್ನೇ ಕಾಯುತ್ತಿರುತ್ತಾರೆ. ಅವರಿಗೆ ನಿನ್ನ ಕಾಣಿಕೆಯಾದರೂ ಏನು? ನೀನು ಚಿಕ್ಕ ಮಗುವಾಗಿದ್ದಾಗಿನಿಂದ ಬೆಳೆದು ದೊಡ್ಡವನಾದರೂ ಅವರ ಪ್ರೀತಿ ಮಾತ್ರ ಸ್ವಲ್ಪನೂ ಕಡಿಮೆ ಆಗಲಿಲ್ಲ. ಆದರೆ ನೀನು ಮಾತ್ರ ಕೇವಲ ನಿನ್ನ ಖುಷಿಯಲ್ಲಿ ಅವರ ನಂಬಿಕೆಗೆ ದ್ರೋಹ ಮಾಡಬೇಡ. ಏಳು ಎದ್ದೇಳು ನಿನ್ನ ಗುರಿ ಮುಟ್ಟುವವರೆಗೂ ನಿಲ್ಲಬೇಡ. ಅದೆಷ್ಟೇ ಕಷ್ಟ ಬಂದರೂ ನಿನಗಾಗಿ ಬೇಡ, ನಿನ್ನವರಿಗಾಗಿಯಾದರೂ ಸಾಧಿಸು. ಇವನೇನು ಮಹಾ ಅಂದವರಿಗೆ, ನಿನ್ನ ಅಳಿಸಲು ಪ್ರಯತ್ನಿಸಿದವರಿಗೆ ನಿನ್ನ ಜೊತೆ ಮಾತಾಡೋದಕ್ಕೂ ಭಯ ಆಗ್ಬೇಕು ಆ ತರ ಬೆಳೆದು ನಿಲ್ಲು, ನಿನ್ನ ಬದುಕನ್ನು ನೀನೇ ರೂಪಿಸಿಕೋ . ಪರೀಕ್ಷೆಯಲ್ಲಿ ಗೆದ್ದವರು ಇತಿಹಾಸವನ್ನು ಓದುತ್ತಾರೆ, ಸೋತವರು ಇತಿಹಾಸವನ್ನೇ ಸೃಷ್ಟಿಸುತ್ತಾರೆ. ಹಾಗೆಯೇ ಜೀವನದಲ್ಲಿ ಒಂದು ಬಾರಿ ಸೋತು ಚಿಂತೆಯನ್ನು ಮಾಡಿದರೆ ಚಿತೆಗೆ ಸೇರಿದಂತೆ, ಅದೇ ಚಿಂತನೆ ಮಾಡಿದರೆ ನಿನ್ನ ಗುರಿಯನ್ನು ಬೇಗನೆ ಸೇರಬಹುದು.
“ಸೋಲೇ ಗೆಲುವಿನ ಸೋಫಾನಎನ್ನುವಂತೆ ಸಾವಿರ ಬಾರಿ ಸೋತರೂ ಕೂಡ ಮತ್ತೊಂದು ಗೆಲುವಿಗೆ; ಗೆಲುವಿನ ಹೆಜ್ಜೆಗೆ ನಾವೇ ತಯಾರಿರಬೇಕು. ಆ ಗೆಲುವಿನ ಕಿಚ್ಚು ನಮ್ಮ ಮನಸ್ಸು ಮತ್ತು ಒಡಲಾಳದಿಂದಲೇ ಒಡಮೂಡಬೇಕು. ಬದುಕಲು ಪ್ರತಿಯೊಬ್ಬರೂ ಹೋರಾಟ ಮಾಡಲೇಬೇಕು. ಆದರೆ ಸಾಧನೆ ಮಾಡಲು ಹೋರಾಟವಷ್ಟೇ ಸಾಕಾಗದು. ಅದಕ್ಕೊಂದು ಹುಚ್ಚತನ, ಹುಂಬತನ, ಒಂಟಿತನ, ಬಡತನ ಇರಬೇಕು. ಅಜ್ಞಾನಿ, ಅಯೋಗ್ಯ ಎಂದು ಮನೆಯವರು ಸೇರಿದಂತೆ ಜನರಿಂದಲೂ ಅನ್ನಿಸಿಕೊಳ್ಳಬೇಕು. ಇದೇ ಆರಂಭಿಕ ಹಂತ, ಈ ಮಟ್ಟದಿಂದ ಆರಂಭಿಸುವ ಯಾರಿಗೇ ಆದರೂ ಯಶಸ್ಸು ಖಂಡಿತ. ಸೋಲು-ಗೆಲುವು ಆನಂತರ, ಅದಕ್ಕೆ ತಕ್ಕಂತೆ ಪ್ರಯತ್ನ ಮಾತ್ರ ಪ್ರಾಮಾಣಿಕವಾಗಿರಬೇಕು. ನೀನು ಯಾವಾಗ ನಿನ್ನ ಕನಸಿಗಿಂತ ನಿನ್ನ ಮನೆಯವರ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಿಯೋ , ಅವಾಗ ನಿನಗೆ ತಿಳಿಯದೇ ನಿನ್ನ ಗುರಿಯನ್ನು ಮುಟ್ಟುವ ಹಸಿವು ತಾನಾಗಿಯೇ ಹುಟ್ಟುತ್ತದೆ. ಹಸಿದವನಿಗೆ ಮಾತ್ರ ಗೊತ್ತು ಅನ್ನದ ಬೆಲೆ ಎನ್ನುವಂತೆ, ಮುಂದಿನ ಭವಿಷ್ಯ ಮಾತ್ರ ನಿನ್ನ ಪರಿಶ್ರಮದ ಮೇಲೆ ನಿಂತಿದೆ.
ಪ್ರತಿಯೊಂದು ಮನೆಯಲ್ಲಿ ಅವರವರದ್ದೆ ಒಂದೊಂದು ಕಥೆ ಇರುತ್ತದೆ. ಇದರಲ್ಲಿ ನಿನ್ನ ಮನೆಯ ಕಥೆಯೂ ಹೊರತಲ್ಲ. ನೀನು ನಿನ್ನದನ್ನು ಅರ್ಥಯಿಸಿಕೊಳ್ಳದೆ ಬೇರೆಯವರ ಕಥೆ ಕೇಳಲು ಹೊರಟರೆ ನಿನ್ನಂತ ಮೂರ್ಖ ಎಲ್ಲಿಯೂ ಇರಲಾರ. ಈಗಾಗಲೇ ನಿನ್ನ ಕಣ್ಣಮುಂದೆ ಸಾಧನೆಗೈದ ಮಹಾನ್ ವ್ಯಕ್ತಿಗಳ ಚಿತ್ರಣ ಬೇಕಾದಷ್ಟು ಇದ್ದೇ ಇರುತ್ತವೆ. ಅವರೇ ನಿನ್ನ ಆದರ್ಶ ದಾರಿ ದೀಪಗಳು. ಅವರೇನು ರಾತ್ರೋ ರಾತ್ರಿ ಪ್ರಸಿದ್ಧಿಯನ್ನು ಪಡೆದವರಲ್ಲ. ನಿನ್ನಂತೆ ನೊಂದು-ಬೆಂದು ಕೊನೆಗೆ ಸುಟ್ಟ ಗಟ್ಟಿ ಇಟ್ಟಂಗಿಗಳಂತೆ ತನ್ಮನಗಳ ಕಟ್ಟಿ ಬೆಳೆದವರು. ಯಾವ ವ್ಯಕ್ತಿ ಎಂದು ತನ್ನ ಆರಾಮದಾಯಕ ಜೀವನದಿಂದ ಹೊರ ಬರುತ್ತಾನೋ ಆಗ ಮಾತ್ರ ತಾನಂದುಕೊಂಡಿದ್ದು ಸಾಧನೆ ಆಗುತ್ತೆ. ಹಾಗೆಯೇ ಪ್ರತಿ ಗೆಲುವೂ ಒಂದೊಂದು ಬಲಿ ಕೇಳುತ್ತದೆ. ನಿನ್ನ ನಿದ್ದೆ, ಆಟ, ಹರಟೆ, ತಿರುಗಾಟ, ಬರ್ತಡೇ, ಹಾಲಿಡೇ, ಲವ್…. ಹೀಗೆ ಒಂದೊಂದಾಗಿ ಬಲಿ ಕೊಡುತ್ತಾ ಬಂದಾಗ ನೀನಂದುಕೊಂಡಿರದ ಬಹುದೊಡ್ಡ ಗೆಲುವು ನಿನ್ನದಾಗುತ್ತದೆ. ನಿನ್ನ ಕನಸ್ಸು ದೊಡ್ಡದಿರಲಿ, ಎಲ್ಲದಕ್ಕೂ ಮಿಗಿಲಾಗಿ ನಿನ್ನ ಮೇಲೆ ನಿನಗೆ ಪ್ರಬುದ್ಧವಾದ ನಂಬಿಕೆಯಿರಲಿ, ನಿನಗೆ ನಿನ್ನ ಗುರಿಯನ್ನು ತಲುಪಲು ಪ್ರಚೋದನೆ ಮಾಡುವವರು ಎಷ್ಟು ದಿನ ಅಂತ ಮಾಡಿಯಾರು? ಎಲ್ಲರಿಗೂ ಅವರವರದ್ದೇ ಚಿಂತೆಗಳು ನೂರಾರು. ಕಟ್ಟಿಕೊಟ್ಟ ಬುತ್ತಿ, ಹೇಳಿಕೊಟ್ಟ ಉಪದೇಶ ಬಹಳ ದಿನ ನಿನ್ನ ಜೊತೆಯಿರದೆಂಬ ದಿವ್ಯ ಸತ್ಯ ನಿನಗೆ ತಿಳಿದಿರಲಿ. ಬೇರೆಯವರ ಮೇಲೆ ಅವಲಂಭಿಸುವುದಕ್ಕಿಂತ ಆಂತರಿಕವಾಗಿ ನಿನ್ನ ಸ್ವ-ಮನಸ್ಸಿನಿಂದ ಪುಟಿದೇಳು. ದೃಢ ನಿರ್ಧಾರ, ಆತ್ಮವಿಶ್ವಾಸ, ಸಮಯ ಪ್ರಜ್ಞೆ, ತಾಳ್ಮೆ ಮತ್ತು ಸತತ ಪ್ರಯತ್ನ ಇವೆ ಮೊದಲಾದವು ನಿನ್ನ ಗೆಲುವಿನ ಗುಟ್ಟುಗಳು.
ಸಮಯ ಮೀರಿ ಹೋಗುವ ಮುನ್ನ ನೀನೊಮ್ಮೆ ಹಠಮಾರಿಯಾಗಿ ಪ್ರಯತ್ನಿಸು. ಇಷ್ಟು ದಿನ ಏನು ಮಾಡಿದ್ದೀಯೋ ಅದು ಮುಖ್ಯವಲ್ಲ, ಇನ್ನೂ ಮುಂದೆ ಏನು ಮಾಡಬೇಕು ಎಲ್ಲವನ್ನು ಪಟ್ಟಿ ಮಾಡು. “ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲಎನ್ನುವ ಗಾದೆ ಮಾತಿನಂತೆ ನಿನ್ನೆಯ ಬದುಕನ್ನು ಮೆಲುಕು ಹಾಕುತ್ತಾ ಇಂದಿನ ದಿನ ಹಾಳು ಮಾಡಿಕೊಳ್ಳಬೇಡ. ಆಗಿದ್ದೆಲ್ಲ ಆಯಿತು, ಇನ್ನೂ ಆಗಬೇಕಿದ್ದಿದ್ದು ಬಹಳ ಇದೆ. ಯಾರೂ ಕೂಡ ಕಠಿಣ ಶ್ರಮ ಪಡದೆ ಎಂದೂ ಜಯ ಕಾಣೋದಿಲ್ಲ. “ದೂರದ ಬೆಟ್ಟ ಕಣ್ಣಿಗೆ ನುಣ್ಣಗೆಎನ್ನುವಂತೆ ದೂರದಿಂದ ಎಲ್ಲವೂ ಸುಲಭವಾಗಿಯೇ ಕಾಣುತ್ತವೆ, ಆದರೆ ಹತ್ತಿರ ಬಂದಾಗ ಮಾತ್ರ ನಿಜ ಸತ್ಯ ತಿಳಿಯೋದು. ಭಗವಂತ ಪ್ರತಿಯೊಬ್ಬರಿಗೂ ಒಂದೊಂದು ವಿಭಿನ್ನ ಶಕ್ತಿಯನ್ನು ಕೊಟ್ಟಿರುತ್ತಾನೆ, ಅದನ್ನು ನಿನ್ನಲ್ಲಿ ಹೆಕ್ಕಿ ತೆಗೆದು ಪ್ರಜ್ವಲಿಸು. ಅದೇ ನಿನ್ನ ಯಶಸ್ಸಿಗೆ ಸ್ಪೂರ್ತಿಯಾಗುತ್ತದೆ. ಹಿಡಿದ ಕೆಲಸ ತಡವಾದರೂ ಅರ್ಧಕ್ಕೆ ಮಾತ್ರ ಎಂದೂ ಬಿಡಬೇಡ. ಜೀವನದ ಯಾವುದೋ ಒಂದು ಪ್ರಶ್ನೆಗೆ ಪುಸ್ತಕ ಪೂರ್ತಿ ಓದಿ, ಕೊನೆಯ ಪುಟ ತಿರುವುದರೊಳಗೆ ಉತ್ತರ ಸಿಗಲಿಲ್ಲವೆಂದು ಪುಸ್ತಕ ಮುಚ್ಚಿದರೆ ಕೊನೆಯ ಪುಟವೇ ಉತ್ತರವಾಗಿರುತ್ತದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆ ಎನ್ನುವುದು ಸಮುದ್ರದಲ್ಲಿ ಈಜುವಂತೆ, ದಡ ಸೇರಬೇಕಾದರೆ ಅಷ್ಟು ಸುಲಭವಲ್ಲ. ಆದರೂ ಧೃತಿಗೆಡದೆ ಸರಿಯಾದ ಮಾರ್ಗದರ್ಶನದೊಂದಿಗೆ ಪ್ರಯತ್ನಿಸಿದರೆ ಖಂಡಿತ ಅದು ಸಾಧ್ಯವಾಗುತ್ತದೆ.
ಕೆಲವರು ಏನೂ ಗೊತ್ತಿರದಿದ್ದರೂ ಎಲ್ಲಾ ಗೊತ್ತು ಎಂಬಂತೆ ಬಿಂಬಿಸುತ್ತಾರೆ. ಇನ್ನೂ ಕೆಲವರೂ ಗೊತ್ತಿದ್ದರೂ ಗೊತ್ತಿರದಂತೆ ಇರುತ್ತಾರೆ. ನೀನು ಅಷ್ಟೇ ಎಷ್ಟೇ ಪ್ರವೀಣತೆಯನ್ನು ಪಡೆದುಕೊಂಡರೂ ಇನ್ನೂ ಹೊಸತನ್ನು ತಿಳಿದುಕೊಳ್ಳುವ ತವಕ ಇರಬೇಕು. ಜೀವನದಲ್ಲಿ ಎಲ್ಲಾ ಬಲ್ಲೆಅನ್ನುವವರಾರು ಇಲ್ಲಾ. ಜೀವನವೇ ಹಾಗೇ ಕೊನೆತನಕ ಕಲಿಸುತ್ತಲೇ ಇನ್ನೂ ಕಲಿಯುವುದನ್ನು ಬಾಕಿ ಉಳಿಸಿ ನಮನ್ನು ಅಳಿಸಿಬಿಡುತ್ತದೆ. ಹಾಗಾಗಿ ಕಲಿಯಲು ಅಂಜಿಕೆ ಬೇಡ, ಕಲಿತ ಮೇಲೆ ಜಂಭ ಬೇಡ. ಶಾಂತವಾಗಿ ಆಲಿಸುತ್ತಾ, ಪಾಲಿಸುತ್ತಾ ಜಯಭೇರಿ ಬಾರಿಸುತ್ತಾ ಮುಂದೆ ಸಾಗು.
ತುಂಬಾ ನಗುವಾಗ ಬದುಕು ಅಳೋದನ್ನು ಕಲಿಸುತ್ತೆ, ಎಲ್ಲರೂ ಹತ್ತಿರವಾಗುವ ಸಮಯಕ್ಕೆ ಜೀವನ ಒಂಟಿಯಾಗಿ ನಿಲ್ಲಿಸುತ್ತೆ, ಮಾತು ಕಲಿತ ನಂತರ ಈ ಜಗತ್ತು ಮೌನಿಯಾಗಿಸುತ್ತೆ, ಸುಖ ಹುಡುಕಿ ಬರುವುದರೊಳಗೆ ದುಃಖ ನಗುವುದನ್ನೇ ಮರೆಸುತ್ತೆ. ಅಳುವಾಗ ಅತ್ತುಬಿಡು, ನಗುವಾಗ ನಕ್ಕುಬಿಡು ಆದರೆ ನಿನ್ನ ಗುರಿ ಕಣ್ಣಮುಂದೆ ಬಂದಾಗ ಎಲ್ಲವನ್ನು ಮರೆತುಬಿಡು. ಅದೇ ಮುಂದೆ ಎಲ್ಲವನ್ನು ನಿನಗೆ ಲೆಕ್ಕ ಸಮೇತ ವಾಪಸಾತಿ ಮಾಡುತ್ತೆ. ಬಹು ಮುಖ್ಯವಾಗಿ ನೀನು ತಿಳಿದವರ ಮುಂದೆ ತಲೆ ಬಾಗು, ಆದರೆ ತುಳಿವವರ ಮುಂದೆ ಅಲ್ಲ. ಚಿಂತಿಸಬೇಡ, ಜೀವನದಲ್ಲಿ ನಿಯತ್ತಾಗಿರೋರು ಯಾವಾಗಲೂ ಒಂಟಿಯಾಗಿಯೇ ಇರುತ್ತಾರೆ. ಹಾಗೆಯೇ ಸೂರ್ಯನಂತೆ ಇರು ನಂಬಿದವರಿಗೆ ಬೆಳಕಾಗಿ, ಉರ್ಕೋಳ್ಳೋರಿಗೆ ಬೆಂಕಿಯಾಗಿ.
ಒಳ್ಳೆದಾಗಲಿ…. ನಿಮ್ಮ ಯಶಸ್ಸು ಇನ್ನೇನು ನಿಮ್ಮ ಕಣ್ಣ ಮುಂದೆ ಇದೆ. ನೀವು ಖಂಡಿತವಾಗಿಯೂ ಸಾಧಿಸಿಯೇ ಸಾಧಿಸುತ್ತೀರಿ.
ಲೇಖಕರು: ಶ್ರೀ ಬಸವರಾಜ ಎಸ್. ಕುರಿ, ವಾಣಿಜ್ಯಶಾಸ್ತ್ರ ಉಪನ್ಯಾಸಕರು ಕುಕನೂರು, ಕೊಪ್ಪಳ