Table of Contents


ಮನಸೆಂಬ ತೋಟದಲ್ಲಿ ವಿದ್ಯೆಯೆಂಬ ಹೂ-ಅರಳಿಸಿ
ಮುಂಜಾನೆ ಮಂಜಿನ ಹನಿಗಳ ಪದ-ಪುಂಜ ಬಳಸಿ
ಪ್ರತಿ ಎಸಳಿನ ಮೇಲೆ ಜ್ಞಾನವೆಂಬ ಸಾಗರ ನಿರ್ಮಿಸಿ
ವಿದ್ಯಾರ್ಥಿಮತ ವಿಶ್ವಪಥವೆಂದು ಉಲ್ಲೇಖಿಸುವೆ

ಸಮಾನ-ಸೌಜನ್ಯ ಮಾನವೀಯತೆ ಬೆರೆಸಿ
ಸೂರ್ಯನ ರಶ್ಮಿ-ಕಾಂತಿ ಧರೆಗೆ ಕರೆಸಿ
ಅರಿವೆಂಬ ಅಕ್ಷರದ ಶಿಕ್ಷಣವ ಕಲಿಸಿ
ವಿದ್ಯಾರ್ಥಿಮತ ವಿಶ್ವಪಥವೆಂದು ಬೆಳಗಿಸುವೆ

ಸದ್ಭಾವ-ಸದ್ವಾಸನೆ ಬೀರುವ ತಂಗಾಳಿ-ವಾದ್ಯ ತರಸಿ
ಸಮಾಜವೆಂಬ ಸುಲಲಿತ ಸೃಷ್ಟಿಯ ನಿರ್ಮಿಸಿ
ಜ್ಞಾನವೆಂಬ ಅಮೃತವ ವಿಶ್ವದೆಲ್ಲೆಡೆ ವಿತರಿಸಿ
ವಿದ್ಯಾರ್ಥಿಮತ ವಿಶ್ವಪಥವಾಗಿ ಮಾರ್ಪಡಿಸುವೆ

ಸನ್ಮಾರ್ಗ-ಸನ್ನಡತೆಯ ಭೂ-ಸ್ವರ್ಗವ ರಚಿಸಿ
ವಿದ್ಯಾರ್ಥಿ- ವಿಶ್ವಮಾನವನೆಂದು ವಿನಯದಿಂದ ಬೆಳೆಸಿ
ದೇವಲೋಕವ ಮರೆಮಾಚುವಂತೆ ಪರಿವರ್ತಿಸಿ
ವಿದ್ಯಾರ್ಥಿಮತ ವಿಶ್ವಪಥವೆಂದು ಪರಿಚಯಿಸುವೆ

ಯೋಗ್ಯ ನಡೆ-ನುಡಿ ವಿಶ್ವಭ್ರಾತೃತ್ವ ಬೋಧಿಸಿ
ವಿದ್ಯೆಯೆಂಬ ಹಸಿರು ಉಸಿರಾಗಿ ವಿನಿಯೋಗಿಸಿ
ಭುವಿಗೆ ಬೆಳದಿಂಗಳುಂಟು ಮಾಡುವ ಚಂದಿರನ ಕರೆಸಿ
ವಿದ್ಯಾರ್ಥಿಮತ ವಿಶ್ವಪಥವೆಂದು ಜಗಕ್ಕೆಲ್ಲ ಸಾರುವೆ

 ಲಾಲಸಾಬ ಹುಸ್ಮಾನ ಪೆಂಡಾರಿ
 ಕಾವ್ಯನಾಮ:- ಕವಿತ್ತ ಕರ್ಮಮಣಿ
 ಸಾ:- ನಾಗರಮುನ್ನೋಳಿ
 ತಾ:- ಚಿಕ್ಕೋಡಿ ಜಿ:- ಬೆಳಗಾವಿ
         ಕರ್ನಾಟಕ-೫೯೧೨೨೨
 ಮೊಬೈಲ್ ನಂ:- ೯೭೪೩೮೬೭೩೯೮
 ಇಮೇಲ್:- lalasabpendari@gmail.com